ಹೈದರಾಬಾದ್ (ತೆಲಂಗಾಣ): ಜವರಾಯ ಯಾವಾಗ, ಎಲ್ಲಿ ಎರಗುತ್ತಾನೆ ಎಂಬುದು ಊಹೆಗೂ ನಿಲುಕದ ಸಂಗತಿ. ನಿಂತ, ಕುಳಿತ ಜಾಗದಲ್ಲೇ ಪ್ರಾಣಪಕ್ಷಿ ಹಾರಿಹೋದ ಅದೆಷ್ಟೋ ನಿದರ್ಶನಗಳು ನಮ್ಮ ಮುಂದಿವೆ. ಇಂಥದ್ದೇ ದುರ್ದೈವದ ಘಟನೆಯೊಂದು ತೆಲಂಗಾಣದಲ್ಲಿ ಸೋಮವಾರ ನಡೆದಿದೆ. ಮೊಹರಂ ಸಂಭ್ರಮಾಚರಣೆಯಲ್ಲಿ ಕುಣಿಯುತ್ತಿದ್ದ ಯುವಕ ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.
ಲಕ್ಷ್ಮಣ್ ಮೃತಪಟ್ಟ ಯುವಕ. ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ಮಲ್ಯಾಲ ಎಂಬಲ್ಲಿ ಮೊಹರಂ ಹಬ್ಬದ ಆಚರಣೆ ನಡೆಯುತ್ತಿತ್ತು. ಈ ಪ್ರದೇಶದಲ್ಲಿ ಮೊಹರಂ ಆಚರಣೆಗೆ ಹುಲಿ (ಪುಲಿ ವೇಷಲು) ವೇಷ ಧರಿಸುವುದು ವಾಡಿಕೆ. ಲಕ್ಷ್ಮಣ್ ಇತರ ಸಂಗಡಿಗರೊಂದಿಗೆ ಸೇರಿ ಹುಲಿ ವೇಷ ಧರಿಸಿ ನೃತ್ಯ ಮಾಡುತ್ತಿದ್ದ.
ಈ ವೇಳೆ ಲಕ್ಷ್ಮಣ್ಗೆ ಹೃದಯಾಘಾತವಾಗಿದೆ. ಕುಣಿಯುತ್ತಿರುವಾಗಲೇ ಆತ, ಏಕಾಏಕಿ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಅಲ್ಲಿದ್ದವರು ಲಕ್ಷ್ಮಣನ ಸಹಾಯಕ್ಕೆ ಬಂದರೂ ಯಾವುದೇ ಲಾಭವಾಗಿಲ್ಲ. ಬಳಿಕ ಆತನನ್ನು ವಾಹನದಲ್ಲಿ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತಪಾಸಣೆ ನಡೆಸಿದ ವೈದ್ಯರು ಯುವಕ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ನಗುನಗುತ್ತಾ ಕುಣಿಯುತ್ತಿದ್ದ ಯುವಕ ದಿಢೀರ್ ಸಾವನ್ನಪ್ಪಿದ್ದು, ಗ್ರಾಮದ ಜನರಲ್ಲಿ ಶೋಕ ತಂದಿದೆ. ಜೊತೆಗೆ ಹಬ್ಬದ ಸಂಭ್ರಮವೂ ಕೂಡ ತುಸು ಕಳೆಗುಂದಿದೆ.