ದೇವಪ್ರಯಾಗ್, ಉತ್ತರಾಖಂಡ: ನೀರಿನ ಬಾಟಲಿಗಳನ್ನು ತುಂಬಿದ್ದ ಟ್ರಕ್ವೊಂದು ಚಾಲಕನ ನಿಯಂತ್ರಣ ತಪ್ಪಿ, ತಡೆಗೋಡೆಗೆ ಗುದ್ದಿಕೊಂಡು 500 ಮೀಟರ್ ಎತ್ತರದಿಂದ ಗಂಗಾ ನದಿಗೆ ಬಿದ್ದ ಘಟನೆ ದೇವಪ್ರಯಾಗ್ ಬಳಿಯ ಸೈನಿಕ ಹೋಟೆಲ್ ಬಳಿ ಕಳೆದ ರಾತ್ರಿ ನಡೆದಿದೆ. ಪರಿಣಾಮ ಟ್ರಕ್ ಚಾಲಕ ಅಜಯ್ ಹಾಗೂ ಆತನ ಪತ್ನಿ ರಾಜೇಶ್ವರಿ ಎಂಬುವರು ಕಾಣೆಯಾಗಿದ್ದಾರೆ. ಟ್ರಕ್ ಹಳ್ಳಕ್ಕೆ ಬಿದ್ದ ಪರಿಣಾಮ ಕ್ಯಾಬಿನ್ ನದಿಯಲ್ಲಿ ಸಿಲುಕಿಕೊಂಡಿದೆ. ಕಾಣೆಯಾದ ದಂಪತಿಗಾಗಿ ಶೋಧ ಮುಂದುವರೆದಿದೆ.
ಟ್ರಕ್‌ನಲ್ಲಿ ಚಾಲಕ ಮತ್ತು ಆತನ ಪತ್ನಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಎಸ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿದೆ. ನಾಪತ್ತೆಯಾದ ದಂಪತಿಗಾಗಿ ಹುಡುಕಾಟ ನಡೆಸುತ್ತಿದೆ. ಇಲ್ಲಿಯವರೆಗೆ ಅವರಿಬ್ಬರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ದಂಪತಿ ಅಗಸ್ತ್ಯಮುನಿಯಲ್ಲಿ ಕಿರಾಣಿ ಅಂಗಡಿ ಹೊಂದಿದ್ದು, ಟ್ರಕ್‌ನಲ್ಲಿ ನೀರಿನ ಬಾಟಲಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುತ್ತಿದ್ದರು. ಆದರೆ, ದೇವಪ್ರಯಾಗ ಸಮೀಪದ ಸೈನಿಕ ಹೋಟೆಲ್ ಬಳಿ ಟ್ರಕ್ ನಿಯಂತ್ರಣ ಕಳೆದುಕೊಂಡು ನದಿಗೆ ಬಿದ್ದಿದೆ. ಸುದ್ದಿ ತಿಳಿದ ಕೂಡಲೇ ರಕ್ಷಣಾ ಪಡೆಯ ಎಸ್‌ಒ ಮಹಿಪಾಲ್ ಸಿಂಗ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ದಂಪತಿಯ ಸುಳಿವು ಸದ್ಯಕ್ಕೆ ಸಿಕ್ಕಿಲ್ಲ. ಶೋಧ ನಡೆಸಿದಾಗ ಯುಕೆ 08ಸಿಬಿ - 3646 ನಂಬರಿನ ಐಷರ್ ಟ್ರಕ್ ಸುಮಾರು 500 ಮೀಟರ್ ಆಳದ ಕಂದಕಕ್ಕೆ ಬಿದ್ದಿದ್ದು, ಕ್ಯಾಬಿನ್‌ನ ಒಂದು ಭಾಗ ನದಿಯಲ್ಲಿ ಸಿಲುಕಿಕೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಜೀಬಾಬಾದ್ ನಿವಾಸಿ ಅಜಯ್, ನೀರಿನ ಬಾಟಲಿಗಳನ್ನು ತುಂಬಿಕೊಂಡು ಬಿಹಾರಿಗಢದಿಂದ ಗೋಪೇಶ್ವರಕ್ಕೆ ಸಾಗಿಸಬೇಕಿತ್ತು. ಆದರೆ, ದಾರಿ ಮಧ್ಯೆ ಈ ಘಟನೆ ನಡೆದಿದೆ. ಲೋಡ್ ತಲುಪಲು ತಡವಾಗಿದ್ದರಿಂದ ಅವರ ಮೊಬೈಲ್ಗೆ ಸಂಪರ್ಕಿಸಿದೆವು. ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ನಂತರ ಟ್ರಕ್ ನದಿಗೆ ಬಿದ್ದಿರುವು ಮಾಹಿತಿ ಬಂದಿತು. ತಕ್ಷಣ ಸ್ಥಳಕ್ಕೆ ಬಂದೆವು. ಚಾಲಕ ಅಜಯ್ ಹಾಗೂ ಆತನ ಪತ್ನಿ ರಾಜೇಶ್ವರಿ ಟ್ರಕ್ನಲ್ಲಿದ್ದರು ಎಂದು ವಾಹನ ಮಾಲೀಕ ಟಿಂಕು ಎಂಬುವರು ಬೇಸರ ವ್ಯಕ್ತಪಡಿಸಿದ್ದಾರೆ.
ಟ್ರಕ್ ನದಿಗೆ ಬಿದ್ದಿರುವ ಬಗ್ಗೆ ಇಂದು ಬೆಳಗ್ಗೆ ಮಾಹಿತಿ ಲಭಿಸಿದೆ. ಇದರಲ್ಲಿ ಚಾಲಕ ಮತ್ತು ಆತನ ಪತ್ನಿ ಪ್ರಯಾಣಿಸುತ್ತಿದ್ದ ಎಂಬ ಮಾಹಿತಿ ಇದ್ದು, ಇವರ ಪತ್ತೆಗಾಗಿ ಗಂಗಾ ನದಿಯಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ದೇವಪ್ರಯಾಗ ಪೊಲೀಸ್ ಠಾಣೆ ಪ್ರಭಾರಿ ಮಹಿಪಾಲ್ ರಾವತ್ ತಿಳಿಸಿದ್ದಾರೆ.
ಇದನ್ನೂ ಓದಿ: ನೇಪಾಳದಲ್ಲಿ ನದಿಗೆ ಬಿದ್ದ ಬಸ್: 14 ಭಾರತೀಯರ ಸಾವು ಶಂಕೆ - Nepal Bus Accident