ಜಲ್ನಾ (ಮಹಾರಾಷ್ಟ್ರ) : ಜಲ್ನಾ ಜಿಲ್ಲೆಯ ವ್ಯಕ್ತಿಯೊಬ್ಬರು ಶಾಸಕ-ಸಂಸದನಾಗಲು ತಮ್ಮ 50 ಎಕರೆ ಜಮೀನನ್ನೇ ಮಾರಾಟ ಮಾಡಿರುವ ಬೆಳಕಿಗೆ ಬಂದಿದೆ.
ಜಲ್ನಾ ಜಿಲ್ಲೆಯ ಬಾಪ್ಕಲ್‌ನ ಬಾಬಾಸಾಹೇಬ್ ಶಿಂಧೆ ಚುನಾವಣೆಯ ಮೂಲಕ ಶಾಸಕ ಮತ್ತು ಸಂಸದನಾಗಲು ಬಯಸಿದ್ದರು. ಹೀಗಾಗಿ ಅವರು 1980ರಲ್ಲಿ ಬದ್ನಾಪುರ ವಿಧಾನಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಚುನಾವಣೆಯಲ್ಲಿ ಸೋತರು. ಆದ್ರೆ ಅವರು ತಮ್ಮ ಪಯತ್ನವನ್ನು ಮಾತ್ರ ನಿಲ್ಲಿಸಲಿಲ್ಲ. ಪ್ರಜಾಪ್ರಭುತ್ವದಲ್ಲಿ ಅವರ ನಂಬಿಕೆ ಮತ್ತಷ್ಟು ಬೆಳೆದು ಇಲ್ಲಿಯವರೆಗೆ 14 ವಿಧಾನಸಭಾ ಚುನಾವಣೆಗಳು ಮತ್ತು 9 ಲೋಕಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಈ ಎಲ್ಲಾ ಚುನಾವಣೆಗಳಲ್ಲಿ ಅವರು ಠೇವಣಿ ಕಳೆದುಕೊಂಡಿದ್ದಾರೆ. ಇಷ್ಟೆಲ್ಲಾ ನಡೆದಿದ್ದರೂ ಈಗ ಅವರು ಮತ್ತೆ 2024ರ ಲೋಕಸಭೆ ಚುನಾವಣೆಯ ಅಖಾಡಕ್ಕೆ ಇಳಿದಿದ್ದಾರೆ.
ಹೊಸ ಹುರುಪಿನೊಂದಿಗೆ ಲೋಕಸಭೆ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ. ಲೋಕಸಭೆ ಚುನಾವಣೆಗೆ 10ನೇ ಬಾರಿಗೆ ನಾಮಪತ್ರ ಸಲ್ಲಿಸಲು ಮತ್ತೆ ಸಿದ್ಧರಾಗಿದ್ದಾರೆ. ಈ ನಿಟ್ಟಿನಲ್ಲಿ ಈಟಿವಿ ಭಾರತ್ಗೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವ ನೀಡಿರುವ ಹಕ್ಕುಗಳು ಪ್ರತಿ ಹಂತದಲ್ಲೂ ನಾಗರಿಕರಿಗೆ ತಲುಪಬೇಕು ಎಂಬುದಷ್ಟೇ ನನ್ನ ಉದ್ದೇಶ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಜೆಗಳ ಸೇವೆ ಮಾಡುವ ಅವಕಾಶ ಪಡೆಯಲು ರಾಜಕೀಯಕ್ಕೆ ಬಂದಿದ್ದೇನೆ. ಇದುವರೆಗೆ 9 ಬಾರಿ ಲೋಕಸಭೆ ಹಾಗೂ 14 ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ತಿಳಿಸಿದ್ದಾರೆ.
"1978ರಲ್ಲಿ ನಾನು ಓದುತ್ತಿದ್ದಾಗ ಚಿಕ್ಕವನಾಗಿದ್ದೆ. ಆ ಸಮಯದಲ್ಲಿ ನನಗೆ ವಿಶೇಷ ಪಕ್ಷದಿಂದ ಆಫರ್ ಬಂದಿತ್ತು. ಆದರೆ ನಾನು ಅದನ್ನು ಸ್ವೀಕರಿಸಲಿಲ್ಲ" ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು. ನನ್ನ ಇಡೀ ರಾಜಕೀಯ ಜೀವನದಲ್ಲಿ 50 ಎಕರೆ ಜಮೀನು ಮಾರಾಟ ಮಾಡಿದ್ದೇನೆ. ಏಕೆಂದರೆ ನನ್ನ ಕನಸು ಪ್ರಜಾಪ್ರಭುತ್ವ ರೀತಿಯಲ್ಲಿ ಜನರ ಸೇವೆ ಮಾಡಬೇಕೆಂಬುದಾಗಿತ್ತು. ಆ ಸೇವೆಯು ಶಾಸಕ ಮತ್ತು ಸಂಸದನಾದ ನಂತರ ಮಾತ್ರವೇ ಪೂರ್ಣಗೊಳ್ಳುತ್ತದೆ. ಆದರೆ ಅದು ಇಲ್ಲಿಯವರೆಗೆ ಅಪೂರ್ಣವಾಗಿ ಉಳಿದಿದೆ. ನನ್ನ ಬಳಿಯಿದ್ದ 50 ಎಕರೆ ಭೂಮಿಯೂ ಹೋಗಿದೆ. ನಾನು ನನ್ನ ಸಂಬಂಧಿಕರು ಮತ್ತು ಹತ್ತಿರದವರನ್ನು ಸಹ ತೊರೆದಿದ್ದೇನೆ. ಈಗ ನಾನು ಭೂರಹಿತನಾಗಿದ್ದೇನೆ. ಆದರೂ ನಾನು 2024ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದೇನೆ ಎಂದಿದ್ದಾರೆ. ಈ ರಾಜ್ಯದ ಈ ದೇಶದ ಕಟ್ಟಕಡೆಯ ವ್ಯಕ್ತಿಗೆ ನಮ್ಮಿಂದ ಹೇಗೆ ನ್ಯಾಯ ಸಿಗುತ್ತದೆ ಎಂಬುದೇ ನನ್ನ ಪ್ರಣಾಳಿಕೆಯಾಗಲಿದೆ ಎಂದು ತಿಳಿಸಿದ್ದಾರೆ.
"ಸ್ವಾತಂತ್ರ್ಯ ಬಂದಾಗಿನಿಂದಲೂ ಯಾರಿಗೂ ಕೊನೆಯ ಹಕ್ಕು ಸಿಕ್ಕಿಲ್ಲ. ಸರ್ಕಾರ ಮಾಡಿರುವುದು ಒಂದು, ತೋರಿಸುತ್ತಿರುವುದು ಮತ್ತೊಂದು. ಸರ್ಕಾರ ಕೇವಲ ನಕಲಿ ಭರವಸೆ ನೀಡುತ್ತಿದೆ. ನಾಗರಿಕರು ಇದನ್ನೇ ನಂಬಿಕೊಂಡಿದ್ದಾರೆ. ಒಂದು ಕಡೆ ಸರ್ಕಾರ ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸುತ್ತಿದೆ. ಮತ್ತೊಂದೆಡೆ ಜನರು ಅರೆಹೊಟ್ಟೆಯಲ್ಲೇ ರಾತ್ರಿ ಕಳೆಯುತ್ತಿದ್ದಾರೆ. ಇದು ನಿಜಕ್ಕೂ ದುರಂತ'' ಎಂದು ಬಾಬಾಸಾಹೇಬ್ ಶಿಂಧೆ ಹೇಳಿದ್ದಾರೆ.
ಇದನ್ನೂ ಓದಿ : 'ರಾಜಕೀಯ ಸ್ಟಾರ್ಟ್ಅಪ್ನಲ್ಲಿ ಪ್ರತಿ ಬಾರಿ ಫೇಲ್': ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ