ಚಂಡೀಗಢ (ಪಂಜಾಬ್): ಪೊಲೀಸರು ಮತ್ತು ಗ್ಯಾಂಗ್ಸ್ಟರ್ ಮಧ್ಯೆ ನಡೆದ ಎನ್‌ಕೌಂಟರ್‌ನಲ್ಲಿ ಹೆಡ್ ಕಾನ್ಸ್ಟೇಬಲ್ವೊಬ್ಬರು ಮೃತಪಟ್ಟ ಘಟನೆ ಪಂಜಾಬ್ನ ಹೋಶಿಯಾರ್‌ಪುರ ಜಿಲ್ಲೆಯಲ್ಲಿ ಇಂದು ನಡೆದಿದೆ. ಮೃತರನ್ನು ಹಿರಿಯ ಕಾನ್‌ಸ್ಟೇಬಲ್ ಅಮೃತಪಾಲ್ ಸಿಂಗ್ ಎಂದು ಗುರುತಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ಮುಕೇರಿಯನ್ ಪೊಲೀಸ್ ಠಾಣೆ ವ್ಯಾಪ್ತಿಯ ಮನ್ಸೂರ್‌ಪುರ ಗ್ರಾಮದಲ್ಲಿ ಗ್ಯಾಂಗ್ಸ್ಟರ್ ರಾಣಾ ಮನ್ಸೂರ್‌ಪುರಿಯಾ ಎಂಬಾತ ಶಸ್ತ್ರಾಸ್ತ್ರಗಳೊಂದಿಗೆ ತಲೆಮರೆಸಿಕೊಂಡಿರುವ ಬಗ್ಗೆ ಪೊಲೀಸ್ ಇಲಾಖೆಯ ಹೊಶಿಯಾರ್‌ಪುರ ಅಪರಾಧ ತನಿಖಾ ಸಂಸ್ಥೆ (ಸಿಐಎ) ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿತ್ತು. ಅಂತೆಯೇ ಇಂದು ಬೆಳಗ್ಗೆ ಪೊಲೀಸ್ ತಂಡ ಸ್ಥಳಕ್ಕೆ ದೌಡಾಯಿಸಿ ಗ್ಯಾಂಗ್ಸ್ಟರ್ ಬಂಧನಕ್ಕೆ ಬಲೆ ಬೀಸಿತ್ತು. ಮನೆಯೊಂದರ ಮೇಲೆ ದಾಳಿ ಮಾಡಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಅಂತೆಯೇ, ಪೊಲೀಸ್ ಸಿಬ್ಬಂದಿ ಮನೆಯೊಳಗೆ ಪ್ರವೇಶಿಸುತ್ತಿದ್ದಂತೆಯೇ ದುಷ್ಕರ್ಮಿಯು ಗುಂಡು ಹಾರಿಸಲು ಆರಂಭಿಸಿದ್ದ ಎಂದು ತಿಳಿದು ಬಂದಿದೆ.
ಈ ಸಂದಭದಲ್ಲಿ ಪೊಲೀಸರು ಸಹ ಪ್ರತಿದಾಳಿ ಮಾಡಿದ್ದು, ಎರಡೂ ಕಡೆಗಳಿಂದ ಗುಂಡಿನ ಚಕಮಕಿ ಶುರುವಾಗಿದೆ. ಇದರಲ್ಲಿ ಹೆಡ್ ಕಾನ್‌ಸ್ಟೇಬಲ್ ಅಮೃತಪಾಲ್ ಸಿಂಗ್ ಅವರ ಎದೆಗೆ ಗುಂಡೇಟು ಬಿದ್ದಿದೆ. ಕೂಡಲೇ ಅವರನ್ನು ಸಮೀಪದ ಮುಕೇರಿಯನ್‌ನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಬಳಿಕ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಮತ್ತೊಂದು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ. ಪೊಲೀಸ್ ತಂಡದ ಇತರ ಸದಸ್ಯರು ಪಾರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತ್ತೊಂದೆಡೆ, ಪೊಲೀಸರ ಪ್ರತಿದಾಳಿಯಲ್ಲಿ ಗ್ಯಾಂಗ್ಸ್ಟರ್ ಕೂಡ ಗಾಯಗೊಂಡಿದ್ದಾನೆ. ಆದರೂ, ಆತನ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ. ಸದ್ಯ ಪೊಲೀಸರು ಇಡೀ ಪ್ರದೇಶವನ್ನು ಸುತ್ತುವರಿದು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಮನೆಗಳು ಮತ್ತು ಹೊಲಗಳಲ್ಲಿ ಶೋಧ ನಡೆಸಲಾಗುತ್ತಿದೆ. ಘಟನೆ ನಡೆದ ಸ್ಥಳದಲ್ಲಿ ಪೊಲೀಸರು ಸುಮಾರು 10 ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ, ಈ ಕುರಿತು ಐಪಿಸಿ ಸೆಕ್ಷನ್ 302 ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ.
ಗ್ಯಾಂಗ್ಸ್ಟರ್ ರಾಣಾ ಮೂಲತಃ ಮುಕೇರಿಯಾದ ಮನ್ಸೂರ್‌ಪುರ ಗ್ರಾಮದ ನಿವಾಸಿಯಾಗಿದ್ದಾನೆ. ಈ ಎನ್ಕೌಂಟರ್ ಮನ್ಸೂರ್‌ಪುರದ ಪಕ್ಕದ ಮಹಾಕ್‌ಪುರ ಗ್ರಾಮದ ಸಮೀಪ ನಡೆದಿದೆ. ಈ ಗ್ಯಾಂಗ್ಸ್ಟರ್ ವಿರುದ್ಧ ಶಸ್ತ್ರಾಸ್ತ್ರ ಕಳ್ಳಸಾಗಣೆ ಸೇರಿದಂತೆ ಹಲವು ಪ್ರಕರಣಗಳು ಇದ್ದು, ಬಂಧನಕ್ಕೆ ಪೊಲೀಸರು ಪ್ರಯತ್ನ ನಡೆಯುತ್ತಿದ್ದಾರೆ.
ಇದನ್ನೂ ಓದಿ: ನಮಾಜ್ ವಿಚಾರವಾಗಿ ಗುಜರಾತ್ ವಿವಿಯಲ್ಲಿ ವಿದೇಶದ ನಾಲ್ವರು ವಿದ್ಯಾರ್ಥಿಗಳ ಮೇಲೆ ಹಲ್ಲೆ