ಅಹಮದಾಬಾದ್, ಗುಜರಾತ್: ಇತ್ತೀಚೆಗೆ ಸೂರತ್‌ನಲ್ಲಿ ಬಾಲಕಿಗೆ ಕಿರುಕುಳ ನೀಡಿದ ಆರೋಪ ಮೇಲೆ ಪೊಲೀಸ್ ಠಾಣೆಗೆ ಕರೆತಂದಿದ್ದ ಥಳಿತಕ್ಕೊಳಗಾಗಿದ್ದ ಆರೋಪಿ ಸಾವಿನ ಪ್ರಕರಣದಲ್ಲಿ 9 ಮಂದಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಅಮನ್, ರಾಜೇಶ್, ಅಕ್ಷಯ್, ಅನುಪಮ್, ವೀರ್ ಕಲ್ಪೇಶಭಾಯ್, ನಿತಿನ್ ಭಾಯಿ, ಸುರೇಶಭಾಯ್, ತುಷಾರಾಭಾಯಿ, ಧರ್ಮೇಶ್ ಭಾಯಿ ಎಂದು ಗುರುತಿಸಲಾಗಿದೆ. ಬಟ್ಟೆ ವ್ಯಾಪಾರಿಯಾದ ಸಾಗರ್ ನವೇತಿಯಾ (40) ಎಂಬುವವನು ಬಾಲಕಿಗೆ ಕಿರುಕುಳ ನೀಡಿದ ಮೃತ ಆರೋಪಿ.
ಪ್ರಕರಣದ ಹಿನ್ನೆಲೆ ಏನು ? : ಮಾರ್ಚ್ 16 ರಂದು ಸೂರತ್ ನಗರದ ವೆಸು ಪ್ರದೇಶದ ವೆಸ್ಟ್ ಕಾಂಪ್ಲೆಕ್ಸ್ ಬಳಿ ವ್ಯಕ್ತಿಯೊಬ್ಬ ಬಾಲಕಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಸೂರತ್ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ಬಂದಿತ್ತು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಬಾಲಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಸಾಗರ್ ನವೇಟಿಯಾ ನನ್ನು ವಶಕ್ಕೆ ಪಡೆದು ವಿಚಾರಣೆಗಾಗಿ ಠಾಣೆಗೆ ಕರೆ ತಂದಿದ್ದರು. ಈ ವೇಳೆ, ಆರೋಪಿ ಎದೆನೋವು ಎಂದು ಹೇಳಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದನು. ಬಳಿಕ ನ್ಯೂ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ವೈದ್ಯರು ಆರೋಪಿ ಮೃತಪಟ್ಟಿರುವುದಾಗಿ ತಿಳಿಸಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿದಾಗ ಮೊದಲು ಘಟನೆ ನಡೆದ ಸ್ಥಳದಲ್ಲಿ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದರು. ದೃಶ್ಯಗಳಲ್ಲಿ ಜನರು ಗುಂಪೊಂದು ಆರೋಪಿಗೆ ಥಳಿಸುತ್ತಿರುವುದು ತಿಳಿದು ಬಂದಿತ್ತು. ಇನ್ನೊಂದೆಡೆ ಮರಣೋತ್ತರ ಪರೀಕ್ಷೆಯ ವರದಿಯಲ್ಲೂ ಆರೋಪಿ ತಲೆಗೆ ಭಾರವಾದ ವಸ್ತುವಿನಿಂದ ಹೊಡೆದಿದ್ದು, ಇದರಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಬಹಿರಂಗವಾಗಿತ್ತು. ಹೀಗಾಗಿ 9 ಆರೋಪಿಗಳನ್ನು ಗುಂಪು ಹತ್ಯೆ ಪ್ರಕರಣದಡಿ ಬಂಧಿಸಲಾಗಿದೆ ಎಂದು ಡಿಸಿಪಿ ವಿಜಯ್ ಸಿಂಗ್ ಗುರ್ಜರ್ ಹೇಳಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗ: ಕಾರಿಗೆ ಬೆಂಕಿ ಹಚ್ಚಿ ಯುವಕನ ಭೀಕರ ಹತ್ಯೆ ಆರೋಪ, 8 ಜನರ ವಿರುದ್ಧ ಪ್ರಕರಣ ದಾಖಲು