ಶ್ರಾವಸ್ತಿ, ಉತ್ತರಪ್ರದೇಶ: ಜಿಲ್ಲೆಯಲ್ಲಿ ಮೂಢನಂಬಿಕೆಯ ವಿಚಾರವಾಗಿ ನಡೆದ ಘಟನೆಯೊಂದು ತೀವ್ರ ಸಂಚಲನ ಮೂಡಿಸಿದೆ. ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ತನ್ನ ನೆರೆಮನೆಯ 7 ವರ್ಷದ ಬಾಲಕನನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ. ತಾಂತ್ರಿಕರೊಬ್ಬರ ಸಲಹೆ ಮೇರೆಗೆ ಆಪಾದಿತ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇನ್ನು ಕೊಲೆ ಮಾಡಿದವನಿಗೆ ಸಲಹೆ ನೀಡಿದ ತಂತ್ರಿಗಾಗಿ ಶೋಧ ನಡೆಯುತ್ತಿದೆ.
ಹರದತ್ತನಗರ ಗಿರಾಂತ್ ಪೊಲೀಸ್ ಠಾಣಾ ವ್ಯಾಪ್ತಿಯ ಛೇಡಾ ಗ್ರಾಮ ಬೇಗಂಪುರದಲ್ಲಿ ಈ ಘಟನೆ ನಡೆದಿದೆ ಎಂದು ಭಿಂಗಾ ಪೊಲೀಸ್ ಅಧಿಕಾರಿ ಸಂತೋಷ್ ಕುಮಾರ್ ತಿಳಿಸಿದ್ದಾರೆ. ತನಗೆ 3 ವರ್ಷಗಳ ಹಿಂದೆ ಮದುವೆಯಾಗಿತ್ತು ಎಂದು ಬಂಧಿತ ಆರೋಪಿ ದೀಪು ಹೇಳಿದ್ದಾನೆ. ಮಕ್ಕಳಿರಲಿಲ್ಲ, ಹೆಂಡತಿ ಎರಡು ಬಾರಿ ಗರ್ಭಿಣಿಯಾದಳು, ಆದರೆ ಎರಡೂ ಬಾರಿಯೂ ಗರ್ಭಪಾತವಾಯಿತು. ಇದರಿಂದ ನಾನು ನಿರಾಸೆಗೊಳಗಾದೆ, ಹೆಂಡತಿ ಕೂಡಾ ತೊಂದರೆ ಅನುಭವಿಸಬೇಕಾಯಿತು. ಈ ಎಲ್ಲ ಸಮಸ್ಯೆಗಳಿಂದ ಹೊರ ಬರಬೇಕು ಎಂಬ ಕಾರಣಕ್ಕಾಗಿ ನಾನು ಮಾಂತ್ರಿಕರೊಬ್ಬರ ಸಹಾಯ ತೆಗೆದುಕೊಂಡೆ ಎಂದು ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ.
ಪಕ್ಕದ ಮನೆಯವರು ಮಾಟ ಮಾಡಿಸಿದ್ದಾರೆ ಎಂದು ತನಗೆ ತಂತ್ರಿಯೊಬ್ಬರು ತಿಳಿಸಿದ್ದರು. ಮಕ್ಕಳಾಗಿಲ್ಲ ಎಂದು ನೆರೆಮನೆಯವರಾದ ಮೇಲರಾಮ್ ಮತ್ತು ಅವರ ಪತ್ನಿ ಪೂನಂ ಚುಡಾಯಿಸುತ್ತಿದ್ದರು. ಇದರಿಂದ ಸಿಟ್ಟಿಗೆದ್ದು, ಹತಾಶೆಯಿಂದ ಡಿ.10ರಂದು ಮೆಲೇರಾಮ್ ಅವರ ಪುತ್ರ ಅರುಣ್ (07) ಎಂಬಾತನನ್ನು ಆಮಿಷವೊಡ್ಡಿ ಅಂಗಡಿಗೆ ಕರೆದುಕೊಂಡು ಹೋಗಿದ್ದೆ. ಇಲ್ಲಿ ತಿಂಡಿ ಖರೀದಿಸಿ ಕೊಟ್ಟಿದ್ದೆ, ಇದಾದ ಬಳಿಕ ಆತನನ್ನು ಕತ್ತು ಹಿಸುಕಿ ಕೊಂದೆ ಎಂದು ಆರೋಪಿ ದೀಪು ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಗ್ಗೆ ಪೊಲೀಸ್ ಅಧಿಕಾರಿ ಹೇಳಿದ್ದಿಷ್ಟು: 24 ಗಂಟೆಗಳೊಳಗಾಗಿ ದೀಪು ಎಂಬಾತನನ್ನು ಬಂಧಿಸಲಾಗಿದೆ. ಮತ್ತು ಆರೋಪಿ ತಾಂತ್ರಿಕನ ಹುಡುಕಾಟಕ್ಕೆ ವಿಶೇಷ ತಂಡವನ್ನು ನಿಯೋಜಿಸಲಾಗಿದೆ ಎಂದು ಸಿಒ ಸಂತೋಷ್ ಕುಮಾರ್ ತಿಳಿಸಿದ್ದಾರೆ.
ಇದನ್ನು ಓದಿ:ಯುಪಿಯಲ್ಲಿ ಟೆಕ್ಕಿ ಅತುಲ್ ಸುಭಾಷ್ ಅಂತ್ಯಸಂಸ್ಕಾರ: ನ್ಯಾಯಕ್ಕಾಗಿ ಚಿತಾಭಸ್ಮ ಹಿಡಿದು ಪತ್ನಿ ಮನೆಗೆ ತೆರಳಿದ ಕುಟುಂಬ