ಅಮರಾವತಿ (ಆಂಧ್ರಪ್ರದೇಶ): ಇತ್ತೀಚೆಗಷ್ಟೇ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ಭದ್ರತೆಯ ಹೆಸರಿನಲ್ಲಿ 2 ಹೆಲಿಕಾಪ್ಟರ್‌ಗಳನ್ನು ಸರ್ಕಾರ ಬಾಡಿಗೆಗೆ ತೆಗೆದುಕೊಂಡಿತ್ತು. ಇದಕ್ಕಾಗಿ ಆಂಧ್ರ ಸರ್ಕಾರ ತಿಂಗಳಿಗೆ 3.85 ಕೋಟಿ ರೂಪಾಯಿ ಬಾಡಿಗೆ ಪಾವತಿಸುತ್ತಿದೆ. ಈಗ ಸರ್ಕಾರ ಇನ್ನೂ 20 ಕೋಟಿ ರೂಪಾಯಿ ಕೊಟ್ಟು 2 ಬುಲೆಟ್ ಪ್ರೂಫ್ ಬಸ್‌ಗಳನ್ನು ಖರೀದಿಸಿದೆ. ಇವುಗಳ ಜೊತೆಗೆ ಇನ್ನೂ ಮೂರು ವಾಹನಗಳು ಸಹ 3 ಕೋಟಿಗೆ ಲಭ್ಯವಾಗಲಿವೆ. ಸಿಎಂ ಜಗನ್ ಅವರ ಚುನಾವಣಾ ಪ್ರಚಾರದ ವೇಳೆ ಈ ಬಸ್‌ಗಳನ್ನು ಬಳಸಲಾಗುವುದು ಎನ್ನಲಾಗುತ್ತಿದೆ. ಆದ್ರೆ ಆರ್‌ಟಿಸಿ ನಡೆಸುತ್ತಿರುವ ಸ್ಕ್ರ್ಯಾಪ್ ಬಸ್‌ಗಳಿಂದ ಜನರು ನಾಲ್ಕೂವರೆ ವರ್ಷಗಳಿಂದ ನರಕಯಾತನೆ ಅನುಭವಿಸುತ್ತಿದ್ದಾರೆ.
ಹೌದು, ಬಸ್ಸುಗಳು ಓಡುತ್ತಿರುವಾಗ ಸ್ಟೀರಿಂಗ್, ಚಕ್ರಗಳು ಮತ್ತು ಆಕ್ಸಲ್‌ಗಳು ಕಳಚಿ ಬೀಳುತ್ತಿವೆ. ನಿಗದಿತ ಸ್ಥಳಗಳನ್ನು ತಲುಪುವ ಮೊದಲೇ ಮಾರ್ಗ ಮಧ್ಯದಲ್ಲಿ ನಿಂತುಹೋಗುತ್ತಿವೆ. ಅಷ್ಟೇ ಅಲ್ಲ, ಬ್ರೇಕ್ ವಿಫಲಗೊಂಡು ಹೊಲಗಳಿಗೆ ಅಥವಾ ಕಾಲುವೆಗಳಿಗೆ ಬಸ್ಗಳು ನುಗ್ಗಿದಂತಹ ಘಟನೆಗಳು ಆಂಧ್ರದಲ್ಲಿ ವರದಿಯಾಗಿವೆ. ಆದರೆ, ವೈಸಿಪಿ ಸರ್ಕಾರ ಪ್ರಯಾಣಿಕರ ಹಿತಕಾಯುವತ್ತ ಗಮನ ಹರಿಸುತ್ತಿಲ್ಲ. ಹೊಸ ಬಸ್‌ಗಳನ್ನು ಖರೀದಿಸಲು ಯಾವುದೇ ಪ್ರಯತ್ನ ನಡೆಸುತ್ತಿಲ್ಲ. ಅಧಿಕಾರಿಗಳು ಸಿಎಂ ಜಗನ್‌ಗಾಗಿ 20 ಕೋಟಿ ರೂಪಾಯಿ ಖರ್ಚು ಮಾಡಿ ಎರಡು ಹೊಸ ಬುಲೆಟ್ ಪ್ರೂಫ್ ಬಸ್‌ಗಳನ್ನು ಖರೀದಿಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಮುಖ್ಯಮಂತ್ರಿ ಜಗನ್‌ಗಾಗಿ ಆರ್‌ಟಿಸಿ ಈಗಾಗಲೇ ಎರಡು ಬುಲೆಟ್ ಪ್ರೂಫ್ ಬಸ್‌ಗಳನ್ನು ಹೊಂದಿತ್ತು. ಆದರೆ ಅವುಗಳನ್ನು ಹೊಸದಾಗಿ ಬದಲಾಯಿಸಲಾಗಿದೆ. ಇನ್ನೂ 3 ಕೋಟಿ ರೂಪಾಯಿ ಖರ್ಚು ಮಾಡಿ ಮೂರು ಬುಲೆಟ್ ಪ್ರೂಫ್ ಬಸ್‌ಗಳನ್ನು ಖರೀದಿಸಿದೆ. ಭಾನುವಾರ ಎರಡು ಬುಲೆಟ್ ಪ್ರೂಫ್ ಬಸ್ಗಳು ವಿಜಯವಾಡ ತಲುಪಿವೆ. ಉಳಿದ ವಾಹನಗಳು ಈ ವಾರವೇ ನಗರಕ್ಕೆ ಆಗಮಿಸಲಿವೆ. ಮುಂದಿನ 10 ದಿನಗಳಲ್ಲಿ ಸಾರ್ವತ್ರಿಕ ಚುನಾವಣೆ ವೇಳಾಪಟ್ಟಿ ಪ್ರಕಟವಾಗಲಿದೆ. ನಂತರ ಸುಮಾರು ಎರಡು ತಿಂಗಳ ಕಾಲ ಚುನಾವಣಾ ಪ್ರಚಾರ ನಡೆಯಲಿದೆ.
ಸಿಎಂ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ಈ ಬುಲೆಟ್ ಪ್ರೂಫ್ ಬಸ್‌ಗಳನ್ನು ಸಾರ್ವಜನಿಕರು ಟಿಕೆಟ್ ರೂಪದಲ್ಲಿ ನೀಡಿದ್ದ ಹಣದಿಂದ ಖರೀದಿಸಿದ್ದಾರೆ ಎಂಬ ಟೀಕೆ ವ್ಯಕ್ತವಾಗುತ್ತಿದೆ. ಸಿಎಂ ಪ್ರಚಾರಕ್ಕೆ ಬಳಸುವ ಬಸ್‌ಗಳನ್ನು ಸರ್ಕಾರದ ಆದೇಶದ ಮೇರೆಗೆ ಮಾತ್ರ ಆರ್‌ಟಿಸಿ ಖರೀದಿಸುತ್ತದೆ. ಇವುಗಳ ಬಳಕೆಗೆ ವಿಶೇಷ ದರವಿರುತ್ತದೆ ಮತ್ತು ಅದರಂತೆ ಸರ್ಕಾರವೇ ಆರ್ಟಿಸಿಗೆ ಹಣ ಪಾವತಿಸಲಿದೆ ಎನ್ನುತ್ತವೆ ಆರ್‌ಟಿಸಿ ಮೂಲಗಳು.
ಸಾಮಾನ್ಯವಾಗಿ ಸಿಎಂ ಜಗನ್ ಬಸ್‌ಗಳಲ್ಲಿ ಸ್ವಲ್ಪ ದೂರ ಮಾತ್ರ ಪ್ರಯಾಣಿಸುತ್ತಾರೆ. ಯಾವುದೇ ಜಿಲ್ಲೆಯಲ್ಲಿ ಸಭೆ ನಡೆದರೆ ಹೆಲಿಕಾಪ್ಟರ್ ಮೂಲಕ ತಲುಪುತ್ತಾರೆ. ಅಲ್ಲಿ, ಹೆಲಿಪ್ಯಾಡ್ ಮತ್ತು ವಿಧಾನಸಭೆ ಕ್ಷೇತ್ರದ ನಡುವಿನ ಅಂತರವು 5 ಕಿಲೋಮೀಟರ್‌ಗಿಂತ ಕಡಿಮೆ ಇರುತ್ತದೆ. ಸಭೆ ನಡೆಯುವ ಸ್ಥಳಕ್ಕೆ ಹೋಗಲು ಬುಲೆಟ್ ಪ್ರೂಫ್ ಬಸ್‌ಗಳನ್ನು ಬಳಸಲಾಗುತ್ತದೆ. ಆದರೆ, ಸಿಎಂ ಹೆಲಿಪ್ಯಾಡ್‌ನಿಂದ ಸಭೆ ನಡೆಯುವ ಸ್ಥಳಕ್ಕೆ ಹೋಗುವವರೆಗೂ ಬ್ಯಾರಿಕೇಡ್‌ಗಳನ್ನು ಹಾಕಿ, ಕರ್ಟನ್ ಹಾಕಿ, ಮಧ್ಯ ಯಾರೂ ಸುಳಿಯದಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಹೀಗಿರುವಾಗ ಸದ್ಯ ಇರುವ ಬಸ್‌ಗಳನ್ನು ಬಳಸುವ ಬದಲು ಹೊಸ ಬಸ್‌ಗಳನ್ನು ಖರೀದಿಸುವ ಅಗತ್ಯ ಏನಿದೆ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ.
ಇತ್ತೀಚೆಗಷ್ಟೇ ಸಿಎಂ ಜಗನ್ ಅವರ ಭದ್ರತೆಗೆ ಅಪಾಯ ಇರುವುದರಿಂದ ಅವರ ಪ್ರಯಾಣಕ್ಕೆ ಎರಡು ಹೊಸ ಹೆಲಿಕಾಪ್ಟರ್‌ಗಳನ್ನು ಒದಗಿಸಲು ಸರ್ಕಾರ ಆದೇಶಿಸಿತ್ತು. ಡಬಲ್ ಎಂಜಿನ್ ಹೊಂದಿರುವ ಈ ಎರಡು ಹೆಲಿಕಾಪ್ಟರ್‌ಗಳಿಗೆ ತಿಂಗಳಿಗೆ 3.85 ಕೋಟಿ ರೂಪಾಯಿ ಬಾಡಿಗೆ ನೀಡುತ್ತಿದ್ದಾರೆ. ಒಂದು ವಿಜಯವಾಡದ ಗನ್ನವರಂ ವಿಮಾನ ನಿಲ್ದಾಣದಲ್ಲಿ ಇದ್ರೆ, ಇನ್ನೊಂದನ್ನು ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ಇರಿಸಲಾಗಿದೆ. ಕಳೆದ ವರ್ಷ ಸಿಎಂ ಜಗನ್ ಬೆಂಗಾವಲು ಪಡೆಯಲ್ಲಿ ಬಳಸಲಾಗಿದ್ದ ಬುಲೆಟ್ ಪ್ರೂಫ್ ವಾಹನಗಳಿಗೆ ಸುಮಾರು 15 ಕೋಟಿ ರೂ. ಖರ್ಚು ಮಾಡಲಾಗಿದೆ. 19 ಟೊಯೊಟಾ ಫಾರ್ಚುನರ್ ವಾಹನಗಳನ್ನು ಖರೀದಿಸಿ ಬುಲೆಟ್ ಪ್ರೂಫ್ ವಾಹನಗಳಾಗಿ ಪರಿವರ್ತಿಸಲಾಗಿತ್ತು.
ಓದಿ: ಹಳೆ ಬಟ್ಟೆ ಹಾಕಿದ್ದಾನೆ ಎಂದು ರೈತನನ್ನು ತಡೆದ ಮೆಟ್ರೋ ಸಿಬ್ಬಂದಿ: ಸಾರ್ವಜನಿಕರಿಂದ ಆಕ್ರೋಶ, ಸಿಬ್ಬಂದಿ ವಜಾ