ಅಹಮದಾಬಾದ್: ಇಬ್ಬರು ಸಹೋದರರು ಒಂದೇ ಹಂತದ ಹುದ್ದೆ ಅಲಂಕರಿಸಿದ ಕಾಕತಾಳೀಯ ವಿದ್ಯಮಾನಕ್ಕೆ ಪೊಲೀಸ್ ಇಲಾಖೆ ಸಾಕ್ಷಿಯಾಗಿದೆ. ಎರಡು ಬೇರೆ ಬೇರೆ ರಾಜ್ಯಗಳಲ್ಲಿ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ) ಇವರು ಸೇವೆ ಸಲ್ಲಿಸುತ್ತಿದ್ದಾರೆ.
ಬಿಹಾರ ಮೂಲದ ಐಪಿಎಸ್ ಅಧಿಕಾರಿಗಳಾದ ವಿಕಾಸ್ ಸಹಾಯ್ ಮತ್ತು ವಿವೇಕ್ ಸಹಾಯ್ ಪೊಲೀಸ್ ಇಲಾಖೆಯಲ್ಲಿ ಡಿಜಿಪಿ ಹುದ್ದೆಯನ್ನು ಅಲಂಕರಿಸಿದ ಇಬ್ಬರು ಸಾಧಕರಾಗಿದ್ದಾರೆ. ಪಶ್ಚಿಮ ಬಂಗಾಳದ ಡಿಜಿಪಿ ಹುದ್ದೆಗೆ ವಿವೇಕ್ ಸಹಾಯ್ ಅವರನ್ನು ಇತ್ತೀಚೆಗೆ ನೇಮಕ ಮಾಡುವುದರೊಂದಿಗೆ ಅಭೂತಪೂರ್ವ ಕಾಕತಾಳೀಯ ಘಟನೆ ನಡೆದಿದೆ. ಇವರ ಸಹೋದರ ವಿಕಾಸ್ ಸಹಾಯ್ ಕಳೆದ 1 ವರ್ಷದಿಂದ ಗುಜರಾತ್ ಡಿಜಿಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಸಹಾಯ್ ಸಹೋದರರಿಬ್ಬರು ಎರಡು ರಾಜ್ಯಗಳ ಡಿಜಿಪಿಯಾಗಿದ್ದಾರೆ. ದೇಶದ ಪೊಲೀಸ್ ಇಲಾಖೆಯ ಇತಿಹಾಸದಲ್ಲೇ ಮೊದಲ ವಿಶಿಷ್ಟ ವಿದ್ಯಮಾನ ಇದಾಗಿದೆ.
ಸಹಾಯ್ ಕುಟುಂಬದಲ್ಲಿ ಸಂತಸ: ಬಿಹಾರ ಮೂಲದ ಸಹಾಯ್ ಕುಟುಂಬದ ಇಬ್ಬರು ಸಹೋದರರು 2 ಪ್ರತ್ಯೇಕ ರಾಜ್ಯಗಳ ಡಿಜಿಪಿ ಆಗಿರುವುದು ಸಂತಸ ತಂದಿದೆ. ಪೊಲೀಸ್ ಇಲಾಖೆಯಲ್ಲಿಯೇ ಇಂತಹ ಅನೂಹ್ಯ ಘಟನೆ ಮೊದಲ ಬಾರಿಗೆ ಸಂಭವಿಸಿದೆ. ಸಹೋದರರ ಈ ಸಾಧನೆಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ನೇಹಿತರು, ಬಂಧುಗಳು ಹಾಗೂ ಪೊಲೀಸ್ ಇಲಾಖೆಯಿಂದ ಅಭಿನಂದನೆ ಸಲ್ಲಿಸಲಾಗುತ್ತಿದೆ. ವಿಶೇಷವೆಂದರೆ ಸಹಾಯ್ ಕುಟುಂಬದಲ್ಲಿ ಮೂವರು ಸಹೋದರರೂ ಸರ್ಕಾರಿ ಅಧಿಕಾರಿಗಳಾಗಿದ್ದಾರೆ. ವಿವೇಕ್ ಸಹಾಯ್ ಮತ್ತು ವಿಕಾಸ್ ಸಹಾಯ್ ಡಿಜಿಪಿಗಳಾಗಿದ್ದರೆ, ಮೂರನೇ ಮತ್ತು ಕಿರಿಯ ಸಹೋದರ ವಿಕ್ರಮ್ ಸಹಾಯ್ 1992 ರ ಬ್ಯಾಚ್ನ ಐಆರ್ಎಸ್ ಅಧಿಕಾರಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿವೇಕ್ ಸಹಾಯ್ ಬಗ್ಗೆ ಒಂದಿಷ್ಟು ಮಾಹಿತಿ: ಸಹಾಯ್ ಕುಟುಂಬದ ಹಿರಿಯ ಪುತ್ರ ವಿವೇಕ್ ಸಹಾಯ್ ಅವರು ಪಶ್ಚಿಮ ಬಂಗಾಳ ಕೇಡರ್‌ನ 1988 ರ ಬ್ಯಾಚ್ನ ಐಪಿಎಸ್ ಅಧಿಕಾರಿ. 2024 ರ ಮೇ ಅಂತ್ಯಕ್ಕೆ ನಿವೃತ್ತಿ ಆಗಲಿರುವ ವಿವೇಕ್ ಅವರನ್ನು ಪಶ್ಚಿಮ ಬಂಗಾಳದ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಡಿಜಿಪಿ ಹುದ್ದೆಗೆ ಮೂವರ ಹೆಸರನ್ನು ಪರಿಗಣಿಸಲಾಗಿತ್ತು. ಇದರಲ್ಲಿ ವಿವೇಕ್ ಸಹಾಯ್ ಹೆಸರು ಅಗ್ರಸ್ಥಾನದಲ್ಲಿತ್ತು. ಗೃಹರಕ್ಷಕ ದಳದ ಡಿಜಿ ಹುದ್ದೆಯಲ್ಲಿದ್ದ ಅವರಿಗೆ ಬಡ್ತಿ ನೀಡಲಾಗಿದೆ. ರಾಜೀವ್ಕುಮಾರ್ ಅವರನ್ನು ಹುದ್ದೆಯಿಂದ ವರ್ಗ ಮಾಡಿದ ಬಳಿಕ ತೆರವಾಗಿದ್ದ ಸ್ಥಾನಕ್ಕೆ ವಿವೇಕ್ ಸಹಾಯ್ ಅವರನ್ನು ಚುನಾವಣಾ ಆಯೋಗ ಪರಿಗಣಿಸಿದೆ.
ವಿಕಾಸ್ ಸಹಾಯ್ ಯಾರು?: ಸಹಾಯ್ ಕುಟುಂಬದ ಎರಡನೇ ಪುತ್ರರಾದ ವಿಕಾಸ್ ಸಹಾಯ್ ಅವರು 1989 ರ ಬ್ಯಾಚ್ನ ಐಪಿಎಸ್ ಅಧಿಕಾರಿ. ವಿವೇಕ್ ಅವರು 1999ರಲ್ಲಿ ಎಸ್‌ಪಿಯಾಗಿ ಆಯ್ಕೆಯಾದರು. 2001 ರಲ್ಲಿ ಅಹಮದಾಬಾದ್ ಗ್ರಾಮಾಂತರದಲ್ಲಿ ಎಸ್‌ಪಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಈ ವೇಳೆ ನಡೆದ ಗೋಧ್ರಾ ಘಟನೆಯಲ್ಲಿ ಗಾಯಗೊಂಡಿದ್ದರು. 2002 ರಲ್ಲಿ ಅವರನ್ನು ಅಹಮದಾಬಾದ್‌ನಲ್ಲಿಯೇ ವಲಯ 2 ಮತ್ತು 3 ರ ಡಿಸಿಪಿಯಾಗಿ ನಿಯೋಜಿಸಲಾಯಿತು. 2004ರಲ್ಲಿ ಟ್ರಾಫಿಕ್ ಡಿಸಿಪಿ, 2005ರಲ್ಲಿ ಅಹಮದಾಬಾದ್‌ನಲ್ಲಿ ಹೆಚ್ಚುವರಿ ಟ್ರಾಫಿಕ್ ಸಿಪಿ. 2007 ರಲ್ಲಿ ಅವರನ್ನು ಹೆಚ್ಚುವರಿ ಸಿಪಿಯಾಗಿ ಸೂರತ್‌ಗೆ ನಿಯೋಜಿಸಲಾಗಿತ್ತು. 2008 ರಲ್ಲಿ ಜಂಟಿ ಸಿಪಿಯಾದರೆ, 2009 ರಲ್ಲಿ ಐಜಿ (ಭದ್ರತೆ), 2010 ರಲ್ಲಿ ಐಜಿ (ಸಿಐಡಿ) ಮತ್ತು ಸೂರತ್‌ನಲ್ಲಿ ಐಜಿ, ಐಬಿ ಆಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನು ಓದಿ: ಮಗಳ ಸಾವಿನಿಂದ ಕೋಪಗೊಂಡ ಪೋಷಕರಿಂದ ಮನೆಗೆ ಬೆಂಕಿ: ಅತ್ತೆ, ಮಾವ ಸುಟ್ಟು ಕರಕಲು