ಮುಂಬೈ: ನೇಪಾಳದ ತನಾಹುನ್ ಜಿಲ್ಲೆಯ ಮಾರ್ಸ್ಯಾಂಗ್ಡಿ ನದಿಗೆ ಬಸ್ ಉರುಳಿದ ಪರಿಣಾಮ ಮಹಾರಾಷ್ಟ್ರದ ಹಲವಾರು ಪ್ರವಾಸಿಗರು ಸಾವನ್ನಪ್ಪಿದ್ದಾರೆ ಮತ್ತು ಇತರರು ಗಾಯಗೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯ 41 ಪ್ರಯಾಣಿಕರನ್ನು ಹೊತ್ತ ಬಸ್ ಶುಕ್ರವಾರ ಬೆಳಿಗ್ಗೆ ಪೋಖಾರಾದ ಪ್ರವಾಸಿ ರೆಸಾರ್ಟ್ನಿಂದ ನೇಪಾಳದ ರಾಜಧಾನಿ ಕಠ್ಮಂಡುವಿಗೆ ಚಲಿಸುತ್ತಿದ್ದಾಗ ನದಿಗೆ ಬಿದ್ದಿದೆ.
ಬಸ್ ದುರಂತದಲ್ಲಿ ಮಹಾರಾಷ್ಟ್ರದ ಕೆಲ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನ ಗಾಯಗೊಂಡಿದ್ದಾರೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಬಸ್ನಲ್ಲಿ ಸುಮಾರು 41 ಪ್ರಯಾಣಿಕರು ಇದ್ದರು. ಅವರಲ್ಲಿ 14 ಜನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಸುಮಾರು 17 ಜನ ಗಾಯಗೊಂಡಿದ್ದಾರೆ. ಅದರಲ್ಲಿ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ಇನ್ನೂ 11 ಜನ ಕಾಣೆಯಾಗಿದ್ದಾರೆ.
ಮಹಾರಾಷ್ಟ್ರ ಸರ್ಕಾರವು ದೆಹಲಿಯ ನೇಪಾಳ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದೆ ಮತ್ತು ಜಲ್ಗಾಂವ್ನ ಜಿಲ್ಲಾಧಿಕಾರಿಗಳು ಭಾರತ-ನೇಪಾಳ ಗಡಿಯಲ್ಲಿರುವ ಉತ್ತರ ಪ್ರದೇಶದ ಮಹಾರಾಜ್ಗಂಜ್ ಜಿಲ್ಲಾಧಿಕಾರಿ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದು, ಸಂತ್ರಸ್ತರ ನೆರವಿಗೆ ಪ್ರಯತ್ನಿಸಲಾಗುತ್ತಿದೆ. ಬಸ್ ಉತ್ತರ ಪ್ರದೇಶದ ನೋಂದಣಿ ಸಂಖ್ಯೆಯನ್ನು ಹೊಂದಿದ್ದರಿಂದ ಮಹಾರಾಜ್ ಗಂಜ್ ಕಲೆಕ್ಟರೇಟ್ನ ಒಂದಿಬ್ಬರು ಅಧಿಕಾರಿಗಳು ಸಹಾಯ ಮಾಡಲು ಗಡಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
"ಯುಪಿ (ಉತ್ತರ ಪ್ರದೇಶ) ಎಫ್ ಟಿ 7623 ನಂಬರ್ ಪ್ಲೇಟ್ ಹೊಂದಿರುವ ಬಸ್ ನದಿಗೆ ಬಿದ್ದಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.
ನೇಪಾಳದಿಂದ ಮೃತ ವ್ಯಕ್ತಿಗಳ ಶವಗಳನ್ನು ತರಲು ಮಹಾರಾಷ್ಟ್ರ ಸರ್ಕಾರವು ಉತ್ತರ ಪ್ರದೇಶ ಸರ್ಕಾರ ಮತ್ತು ನೇಪಾಳ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಫಡ್ನವೀಸ್ ಹೇಳಿದರು. ಮಹಾರಾಷ್ಟ್ರ ವಿಪತ್ತು ನಿರ್ವಹಣೆ ಪಡೆಯೊಂದಿಗೆ ರಾಜ್ಯ ಸಚಿವರಾದ ಗಿರೀಶ್ ಮಹಾಜನ್ ಮತ್ತು ಅನಿಲ್ ಪಾಟೀಲ್ ಅವರು ಬಸ್ ದುರಂತದಲ್ಲಿ ಸಾವನ್ನಪ್ಪಿದ ಭಾರತೀಯರ ಶವಗಳನ್ನು ಮರಳಿ ತರುವ ಕಾರ್ಯಾಚರಣೆಯನ್ನು ಸಂಯೋಜಿಸುತ್ತಿದ್ದಾರೆ.
ನೇಪಾಳ ಪೊಲೀಸರು ಮತ್ತು ಸೇನೆ ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಆದರೆ ಮೃತರು ಸೇರಿದಂತೆ ಇತರ ವ್ಯಕ್ತಿಗಳ ಗುರುತು, ಹೆಸರುಗಳ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಇನ್ನು ಬಸ್ ಅಪಘಾತಕ್ಕೀಡಾಗಲು ಏನು ಕಾರಣ ಎಂಬುದು ಕೂಡ ತಿಳಿದಿಲ್ಲ.
ಇದನ್ನೂ ಓದಿ : ಅನುಮತಿ ಪಡೆಯದೆ ಧಾರ್ಮಿಕ ಚಟುವಟಿಕೆ ಆರೋಪ: ಕತಾರ್ನಲ್ಲಿ ಗುರು ಗ್ರಂಥ ಸಾಹಿಬ್ ವಶಕ್ಕೆ - Guru Granth Sahib