ಅಯೋಧ್ಯೆ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಅಯೋಧ್ಯೆಯು ಈಗ ಸಂಪೂರ್ಣವಾಗಿ ರಾಮಮಯವಾಗಿದೆ. ಜನವರಿ 22ರಂದು ನಡೆಯುವ ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಭರದ ಸಿದ್ಧತೆಗಳು ಜರುಗುತ್ತಿವೆ. ಎಲ್ಲೆಲ್ಲೂ ರಾಮಭಕ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಈಗಾಗಲೇ ವಿವಿಧ ಕೈಂಕರ್ಯಗಳು ನಡೆಯುತ್ತಿವೆ. ದೇವರ ಪ್ರತಿಷ್ಠಾಪನೆ ಕಾರ್ಯಕ್ಕೆ ದೇಶದ ವಿವಿಧ ಭಾಗಗಳಿಂದ 14 ದಂಪತಿಗಳು 'ಯಜಮಾನ'ರಾಗಿ (ಪೂಜೆಯ ಆತಿಥ್ಯ ವಹಿಸುವ) ಕರ್ತವ್ಯ ನಿರ್ವಹಿಸಲಿದ್ದಾರೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನೀಡಿದ ಮಾಹಿತಿಯ ಪ್ರಕಾರ, ಜನವರಿ 16 ರಿಂದಲೇ ರಾಮ ಮಂದಿರದಲ್ಲಿ ಧಾರ್ಮಿಕ ವಿಧಿವಿಧಾನಗಳು ಪ್ರಾರಂಭವಾಗಿವೆ. ಶನಿವಾರ ಐದನೇ ದಿನವಾಗಿದೆ. ಇಂದು ನಡೆದ ಧಾರ್ಮಿಕ ಕೈಂಕರ್ಯಗಳಲ್ಲಿ ರಾಮನ ವಿಗ್ರಹಕ್ಕೆ ಸಕ್ಕರೆ ಮತ್ತು ದೇಶದ ವಿವಿಧ ಪ್ರದೇಶಗಳಿಂದ ಬಂದ ಹೂವುಗಳನ್ನು ಅರ್ಪಿಸಲಾಯಿತು. ಪುಷ್ಪಾಧಿವಾಸ್ ಎಂದು ಕರೆಯಲ್ಪಡುವ ಆಚರಣೆಗಾಗಿ ಪುಷ್ಪಗಳು ವಿಶೇಷ ವಿಮಾನಗಳು ಅಥವಾ ಮಾರ್ಗದ ಮೂಲಕ ಅಯೋಧ್ಯೆಗೆ ತಲುಪಿದ್ದವು. ಸಮಾರಂಭದ ಮತ್ತೊಂದು ಮಹತ್ವದ ಅಂಶವೆಂದರೆ ವಿಗ್ರಹದ ಸ್ನಾನ ಮತ್ತು 81 ಪವಿತ್ರ ಕಲಶಗಳಲ್ಲಿ ಸಂಗ್ರಹಿಸಲಾದ ರಾಷ್ಟ್ರದಾದ್ಯಂತ ವಿವಿಧ ಧಾರ್ಮಿಕ ಸ್ಥಳಗಳಿಂದ ಸಂಗ್ರಹಿಸಿದ ನೀರಿನಿಂದ ಗರ್ಭಗಡಿ ಶುದ್ಧೀಕರಿಸಲಾಗಿದೆ.
14 ದಂಪತಿಗಳಿಗೆ ಅವಕಾಶ: ದೇವಾಲಯದ ಪೂಜೆಯು ಹಿಂದೂ ಧರ್ಮದಂತೆ ಸಮಗ್ರ ಆಚರಣೆಗಳನ್ನು ಹೊಂದಿದೆ. ಪ್ರಮುಖ ಪ್ರಾಣ ಪ್ರತಿಷ್ಠಾ ಪೂಜೆಯಲ್ಲಿ 14 ಜೋಡಿಗಳು ಭಾಗವಹಿಸಲಿವೆ. ದೇಶದ ಉತ್ತರ, ಪೂರ್ವ, ಪಶ್ಚಿಮ, ದಕ್ಷಿಣ ಮತ್ತು ಈಶಾನ್ಯ ಭಾಗದ ಈ ದಂಪತಿಗಳು 'ಮುಖ್ಯ ಯಜಮಾನ' (ಮುಖ್ಯ ಆತಿಥೇಯರು) ಆಗಿರುತ್ತಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ತಿಳಿಸಿದ್ದಾರೆ.
ಯಜಮಾನ ಪಟ್ಟಿಯಲ್ಲಿ ಕನ್ನಡಿಗ: ದೇವರ ಪ್ರತಿಷ್ಠಾಪನೆ ಕಾರ್ಯದ ಯಜಮಾನ ಪಟ್ಟಿಯಲ್ಲಿ ಉದಯಪುರದ ರಾಮಚಂದ್ರ ಖರಾಡಿ, ಅಸ್ಸೋಂನ ರಾಮ್ ಕುಯಿ ಜೆಮಿ, ಜೈಪುರದ ಗುರುಚರಣ್ ಸಿಂಗ್ ಗಿಲ್, ಹರ್ದೋಯಿದ ಕೃಷ್ಣ ಮೋಹನ್; ಮುಲ್ತಾನಿಯ ರಮೇಶ್ ಜೈನ್; ತಮಿಳುನಾಡಿನ ಅಡಲರಸನ್, ಮಹಾರಾಷ್ಟ್ರದ ವಿಠ್ಠಲ್ ರಾವ್, ಲಾತೂರ್‌ನ ಘುಮಂತು ಸಮಾಜ ಟ್ರಸ್ಟ್‌ನಿಂದ ಮಹದೇವ್ ರಾವ್ ಗಾಯಕ್ವಾಡ್; ಕರ್ನಾಟಕದ ಲಿಂಗರಾಜ್ ಬಸವರಾಜ್; ಲಕ್ನೋದ ದಿಲೀಪ್ ವಾಲ್ಮೀಕಿ, ದೊಮ್ ರಾಜನ ಮನೆತನದ ಅನಿಲ್ ಚೌಧರಿ, ಕಾಶಿಯ ಕೈಲಾಶ್ ಯಾದವ್, ಹರಿಯಾಣದ ಅರುಣ್ ಚೌಧರಿ ಮತ್ತು ಕಾಶಿಯ ಕವೀಂದ್ರ ಪ್ರತಾಪ್ ಸಿಂಗ್ ಅವರ ಹೆಸರಿದೆ. ಇವರು ಸಮಾರಂಭದಲ್ಲಿ ತಮ್ಮ ಪತ್ನಿಯರೊಂದಿಗೆ ಭಾಗವಹಿಸುತ್ತಾರೆ. ಧಾರ್ಮಿಕ ಗ್ರಂಥಗಳಲ್ಲಿ ಸೂಚಿಸಿದಂತೆ ಸಮಗ್ರ ಪೂಜೆಯನ್ನು ನಡೆಸಲಾಗುತ್ತದೆ ಎಂದು ಅಂಬೇಕರ್ ಮಾಹಿತಿ ನೀಡಿದರು.
ದೇಶದ ಎಲ್ಲ ಭಾಗಗಳ ಜನರು ಭಗವಾನ್ ರಾಮನ ಜನ್ಮಸ್ಥಳದಲ್ಲಿ ದೇವಾಲಯ ನಿರ್ಮಿಸಬೇಕೆಂದು ಬಯಸಿದ್ದರು. ಅದಕ್ಕಾಗಿ ಹಲವಾರು ಜನರು ಹೋರಾಡಿದರು. ಈಗ ದೇವಾಲಯ ನಿರ್ಮಾಣ ಮತ್ತು ಪ್ರಾಣ ಪ್ರತಿಷ್ಠಾಪನೆ ಸಮಾರಂಭವು ಐತಿಹಾಸಿಕ ಕ್ಷಣವಾಗಿದೆ. ಇದು ಭಾರತದ ಹಬ್ಬ ಮತ್ತು ಹಿಂದೂ ಸಮಾಜದ ಏಕತೆಯ ಹಬ್ಬವಾಗಿದೆ ಎಂದು ಅವರು ಹೇಳಿದರು.
ಪೊಲೀಸ್ ಸರ್ಪಗಾವಲು: ಮಹಾಮಸ್ತಕಾಭಿಷೇಕ ಸಮಾರಂಭಕ್ಕೆ ಕೇವಲ ಎರಡು ದಿನಗಳು ಬಾಕಿ ಇದೆ. ಅಯೋಧ್ಯೆಯ ಭವ್ಯವಾದ ರಾಮ ಮಂದಿರವನ್ನು ಪುಷ್ಪಗಳು ಮತ್ತು ವಿಶೇಷ ದೀಪಗಳಿಂದ ಅಲಂಕರಿಸಲಾಗಿದೆ. ಇಡೀ ಪಟ್ಟಣವು ಧಾರ್ಮಿಕ ಉತ್ಸಾಹದಲ್ಲಿ ಮುಳುಗಿದೆ. ಜನವರಿ 22ರಂದು ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ 51 ಇಂಚಿನ ಬಾಲ ರಾಮನ ಹೊಸ ವಿಗ್ರಹವನ್ನು ಗುರುವಾರ ದೇವಸ್ಥಾನದ ಗರ್ಭಗುಡಿಯಲ್ಲಿ ಇರಿಸಲಾಗಿದೆ. ಮತ್ತೊಂದೆಡೆ, ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಇಡೀ ಅಯೋಧ್ಯೆಯು ಪೊಲೀಸ್ ಸರ್ಪಗಾವಲಿನ ಕೋಟೆಯಾಗಿ ಮಾರ್ಪಟ್ಟಿದೆ.
ಇದನ್ನೂ ಓದಿ: ಶ್ರೀರಾಮನ ನೇತ್ರಗಳು ಕಾಣಿಸುವ ವಿಗ್ರಹವು ನಿಜವಾದುದ್ದಲ್ಲ: ಅಯೋಧ್ಯೆ ಪ್ರಧಾನ ಅರ್ಚಕ