ಜೈಪುರ(ರಾಜಸ್ಥಾನ):ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆ ಹಾಗೂ ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ದೇಶಾದ್ಯಂತ ಕಲಾವಿದರು ವಿವಿಧ ವಸ್ತುಗಳಲ್ಲಿ ಚಿತ್ರ, ಕಲಾಕೃತಿ ರಚಿಸುವ ಮೂಲಕ ಶ್ರೀರಾಮನ ಬಗ್ಗೆ ಇರುವ ತಮ್ಮ ಭಕ್ತಿ ಪರಾಕಾಷ್ಠತೆ ಪ್ರದರ್ಶಿಸುತ್ತಿದ್ದಾರೆ.
ಆದರೆ, ಇಲ್ಲೊಬ್ಬ ಶಿಲ್ಪ ಕಲಾವಿದನು ಪೆನ್ಸಿಲ್ ತುದಿಯಲ್ಲಿ ಶ್ರೀರಾಮನ ಕಲಾಕೃತಿ ರಚಿಸಿ ದಾಖಲೆ ಬರೆದಿದ್ದಾರೆ. ರಾಜಸ್ಥಾನದ ಶಿಲ್ಪ ಕಲಾವಿದ ನವರತ್ನ ಪ್ರಜಾಪತಿ ಅವರು ಪೆನ್ಸಿಲ್‌ನ ತುದಿಯಲ್ಲಿ ಶ್ರೀರಾಮನ ಕಲಾಕೃತಿ ರಚಿಸಿದ್ದು, ಇದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ದಾಖಲಾಗಿದೆ. ಜೈಪುರದ ಮಹೇಶ್ ನಗರದ ನಿವಾಸಿ ಆಗಿರುವ ಶಿಲ್ಪ ಕಲಾವಿದ ನವರತ್ನ ಪ್ರಜಾಪತಿ ಅವರು ಪೆನ್ಸಿಲ್‌ನ ತುದಿಯಲ್ಲಿ ಶ್ರೀರಾಮನ ಕಲಾಕೃತಿ ರಚಿಸಲು ಐದು ದಿನ ಕಾಲ ತೆಗೆದುಕೊಂಡಿದ್ದಾರೆ. ಆದರೆ, ಈ ವಿಗ್ರಹ ಕೇವಲ 1.3 ಸೆಂ.ಮೀ ಎತ್ತರ ವಿನ್ಯಾಸದಲ್ಲಿ ಕೆತ್ತಲಾಗಿದೆ. ಈ ಪೆನ್ಸಿಲ್ ತುದಿಯ ಶ್ರೀರಾಮ ಒಂದು ಕೈಯಲ್ಲಿ ಬಿಲ್ಲು ಮತ್ತು ಇನ್ನೊಂದು ಕೈಯಲ್ಲಿ ಬಾಣ ಹಿಡಿದಿದ್ದು ನೋಡಲು ಮನಮೋಹಕವಾಗಿದೆ.
ಕಲಾವಿದ ಪ್ರಜಾಪತಿ ಪೆನ್ಸಿಲ್ ತುದಿಯ ಶ್ರೀರಾಮನ ಕಲಾಕೃತಿಯನ್ನು ಅಯೋಧ್ಯೆಯ ಶ್ರೀರಾಮ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ನೀಡಲು ನಿರ್ಧರಿಸಿದ್ದಾರೆ.
ಕಳೆದ ವರ್ಷವೂ ಚಿಕ್ಕ ಚಮಚ ರಚಿಸಿ ದಾಖಲೆ ಬರೆದಿದ್ದ ಪ್ರಜಾಪತಿ: ಕಳೆದ ವರ್ಷವೂ ಕಲಾವಿದ ಪ್ರಜಾಪತಿ ಅವರು 1.6 ಎಂ ಎಂ ಅಳತೆಯ ವಿಶ್ವದ ಅತ್ಯಂತ ಚಿಕ್ಕ ಚಮಚವನ್ನು ಕಟ್ಟಿಗೆಯಲ್ಲಿ ರಚಿಸುವ ಮೂಲಕ ದಾಖಲೆ ನಿರ್ಮಿಸಿದ್ದರು. ಸಣ್ಣ ಕಟ್ಟಿಗೆಯಲ್ಲಿ ಚಾಕು ಮತ್ತು ಸರ್ಜಿಕಲ್ ಬ್ಲೇಡ್ ಬಳಸಿ ಚಮಚ ತಯಾರಿಸಿದ್ದರು.
ಕಲಾವಿದ ಕೈಯಲ್ಲಿ ಅರಳಿದ ವಿವಿಧ ಕಲಾಕೃತಿ: ಕಲಾವಿದ ನವರತ್ನ ಪ್ರಜಾಪತಿ ಅವರು ಗಣಪತಿ, ಭಗವಾನ್ ಮಹಾವೀರ , ಮಹಾರಾಣಾ ಪ್ರತಾಪ್, ವಲ್ಲಭಭಾಯಿ ಪಟೇಲ್, ಮಹಾತ್ಮ ಗಾಂಧಿ, ಡಾ. ಭೀಮರಾವ್ ಅಂಬೇಡ್ಕರ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೂರ್ತಿ ಶಿಲ್ಪಗಳನ್ನು ರಚಿಸಿದ್ದು, ಅವು ಸಹ ವಿಖ್ಯಾತಿ ಪಡೆದಿವೆ. ಕೊರಳಲ್ಲಿ ಸುಲಭವಾಗಿ ಧರಿಸಬಹುದಾದ 101 ಕೊಂಡಿಗಳಿರುವ ಸರಪಳಿ ಶಿಲ್ಪದ ಸರಪಳಿಯನ್ನುತಯಾರಿಸಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆ ನಿಮಿತ್ತ ಇವರಿಗಿಂತ ಮುಂಚೆ ಬಹಳಷ್ಟು ಕಲಾವಿದರು ಶ್ರೀರಾಮ ಚಿತ್ರಗಳನ್ನು ಬಿಡಿಸಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇವರಂತೆ ಅಜ್ಮೀರ್ ಜಿಲ್ಲೆಯ ಪುಷ್ಕರ್ ನಗರದ ಅಜಯ್ ರಾವತ್ ಎಂಬ ಮರಳು ಕಲಾವಿದರೊಬ್ಬರು ಮರಳಿನಲ್ಲಿ ಶ್ರೀರಾಮ ಮಂದಿರ ಚಿತ್ರಿಸಿ ಹೆಸರು ಮಾಡಿದ್ದಾರೆ. ಪಶ್ಚಿಮ ಬಂಗಾಳದ ಕಲಾವಿದರೊಬ್ಬರು ಪಾರ್ಲೆ-ಜಿ ಬಿಸ್ಕೆಟ್‌ಗಳಿಂದ ದೇವಾಲಯದ ಪ್ರತಿಕೃತಿ ನಿರ್ಮಿಸಿ, ವಿಖ್ಯಾತಿ ಗಳಿಸಿದ್ದಾರೆ.
ಇದನ್ನೂಓದಿ:ಕೋಟ್ಯಂತರ ಜನರ ಕನಸು ಸಾಕಾರ; ಅಯೋಧ್ಯೆದಲ್ಲಿ ಪ್ರತಿಷ್ಠಾಪನೆಯಾದ ಶ್ರೀರಾಮ