ಬಿಹಾರ- ಗುಜರಾತ್ನಲ್ಲಿ ಭಾರಿ ಮಳೆ: ನದಿಯಲ್ಲಿ ಮುಳುಗಿದ 2 ಟ್ರಕ್, ಮಧ್ಯದಲ್ಲಿ ಸಿಲುಕಿದ 28 ಲಾರಿಗಳು - ವಂಥಲಿ ಓಝತ್ ವಿಯಾರ್ ಅಣೆಕಟ್ಟಿ
🎬 Watch Now: Feature Video
ಪಾಟ್ನಾ/ಅಹಮದಾಬಾದ್ : ದೇಶದ ಹಲವು ಕಡೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಬಿಹಾರದಲ್ಲೂ ಭಾರಿ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳು ಜಲಾವೃತವಾಗಿವೆ. ಜುಲೈ 3ರ ವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇಲ್ಲಿನ ಸೋನ್ ನದಿಯಲ್ಲಿ ಏಕಾಏಕಿ ನೀರಿನ ಪ್ರಮಾಣದಲ್ಲಿ ಹೆಚ್ಚಳ ಉಂಟಾದ ಹಿನ್ನೆಲೆಯಲ್ಲಿ ಎರಡು ಬೃಹತ್ ಟ್ರಕ್ಗಳು ನೀರುಪಾಲಾಗಿವೆ. ಒಟ್ಟು 28 ಟ್ರಕ್ಗಳು ಇಲ್ಲಿನ ಕಟರ್ ಬಾಲು ಘಾಟ್ನ ನದಿ ಮಧ್ಯೆ ಸಿಲುಕಿಕೊಂಡಿದೆ. ಕಳೆದ ಮೂರು ದಿನಗಳಿಂದ ಈ ಟ್ರಕ್ಗಳು ನದಿ ಮಧ್ಯೆ ಸಿಲುಕಿಕೊಂಡಿದ್ದು, ಇಲ್ಲಿನ ಸ್ಥಳೀಯಾಡಳಿತ ಇವುಗಳನ್ನು ತೆರವುಗೊಳಿಸಲು ಕಾರ್ಯಾಚರಣೆ ನಡೆಸುತ್ತಿದೆ. ಈ ಟ್ರಕ್ಗಳು ನದಿ ಮಧ್ಯೆ ಸಿಲುಕಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶುಕ್ರವಾರದಿಂದ ಟ್ರಕ್ಗಳ ಸ್ಥಳಾಂತರ ಕಾರ್ಯ ನಡೆಯುತ್ತಿದ್ದು, ನದಿ ಮಧ್ಯೆ 100 ಮೀಟರ್ ರಸ್ತೆ ನಿರ್ಮಾಣ ಮಾಡಲಾಗಿದೆ. ನದಿ ನೀರಿನ ಮಟ್ಟದಲ್ಲಿ ಏರಿಕೆ ಕಾಣುತ್ತಿದ್ದು, ಕಾರ್ಯಾಚರಣೆಗೆ ತೊಡಕು ಉಂಟಾಗಿದೆ.
ಗುಜರಾತ್ನಲ್ಲೂ ಮಾನ್ಸೂನ್ ಮಳೆಯ ಅಬ್ಬರ ಮುಂದುವರೆದಿದ್ದು, ಇಲ್ಲಿನ ಡ್ಯಾಂಗಳು ತುಂಬಿ ಹರಿಯುತ್ತಿವೆ. ಜುನಾಗಢ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಇಲ್ಲಿನ ವಂಥಲಿ ಓಝತ್ ವಿಯಾರ್ ಅಣೆಕಟ್ಟಿನಲ್ಲಿ ನೀರು ಅಪಾಯಮಟ್ಟವನ್ನು ಮೀರಿ ಹರಿಯುತ್ತಿದೆ. ಜೊತೆಗೆ ಡ್ಯಾಂಗ್ ಜಿಲ್ಲೆಯ ಅಂಬಿಕಾ ನದಿಯ ಗಿರಾ ಜಲಪಾತದಲ್ಲಿ ನೀರು ಧುಮ್ಮಕ್ಕುತ್ತಿರುವ ದೃಶ್ಯ ಕಣ್ಣು ಕುಕ್ಕುವಂತಿದೆ.
ಇದನ್ನೂ ಓದಿ : ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಧಗಧಗನೆ ಹೊತ್ತಿ ಉರಿದ ಕಾರು - ವಿಡಿಯೋ