ಬೆಟ್ಟದಿಂದ ರಸ್ತೆಗುರುಳಿದ ಬೃಹತ್ ಬಂಡೆ, ಕಾರುಗಳು ಧ್ವಂಸ, ಇಬ್ಬರು ಸಾವು: ಭಯಾನಕ ವಿಡಿಯೋ
🎬 Watch Now: Feature Video
ನಾಗಾಲ್ಯಾಂಡ್: ನಾಗಾಲ್ಯಾಂಡ್‌ನ ದಿಮಾಪುರ್ ಜಿಲ್ಲೆಯಲ್ಲಿ ಮಂಗಳವಾರ ಸುರಿದ ಭಾರಿ ಮಳೆಗೆ ಬೆಟ್ಟದಿಂದ ಉರುಳಿ ಬಿದ್ದ ಬೃಹತ್ ಗಾತ್ರದ ಬಂಡೆಗಳು ರಸ್ತೆಯಲ್ಲಿ ನಿಂತಿದ್ದ ಮೂರು ಕಾರುಗಳನ್ನು ಧ್ವಂಸಗೊಳಿಸಿತು. ಕಾರುಗಳಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂವರು ಗಂಭೀರವಾಗಿ ಗಾಯಗೊಂಡರು ಎಂದು ಅಲ್ಲಿನ ಪೊಲೀಸರು ಮಾಹಿತಿ ನೀಡಿದ್ದಾರೆ.
ಸಂಜೆ 5 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 29ರ ಚೆಕ್ಪೋಸ್ಟ್ ಬಳಿಕ ಚುಮೌಕೆಡಿಮಾ ಪ್ರದೇಶದಲ್ಲಿ ಘಟನೆ ನಡೆಯಿತು. ಬಂಡೆಗಳಿಂದ ನಜ್ಜುಗುಜ್ಜಾದ ಕಾರುಗಳ ಹಿಂದಿದ್ದ ಮತ್ತೊಂದು ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮರಾದಲ್ಲಿ ಅವಘಡದ ದೃಶ್ಯ ಸೆರೆಯಾಗಿದೆ. ಮೃತರ ಗುರುತಿನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಭಯಾನಕ ವಿಡಿಯೋ: ದೊಡ್ಡ ಬಂಡೆಯೊಂದು ಬೆಟ್ಟದ ಮೇಲಿಂದ ಕೆಳಗುರುಳಿ ಬಂದು ರಸ್ತೆಯಲ್ಲಿ ನಿಂತಿದ್ದ SUV ಮತ್ತು ಹ್ಯಾಚ್‌ಬ್ಯಾಕ್ ಕಾರನ್ನು ಪುಡಿಮಾಡಿದೆ. ಈ ಕಾರಿನ ಮುಂದಿದ್ದ ಮೂರನೇ ಕಾರಿನ ಮೇಲೆ ಮತ್ತೊಂದು ಬಂಡೆ ಉರುಳಿತು. ಎರಡು ಭಾರಿ ಗಾತ್ರದ ಬಂಡೆಗಳು ಬಿದ್ದ ರಭಸ ಎಷ್ಟಿತ್ತೆಂದರೆ ಒಂದು ಬಂಡೆ ಎರಡು ಕಾರುಗಳನ್ನು ಕ್ಷಣಮಾತ್ರದಲ್ಲಿ ಅಪ್ಪಚ್ಚಿಗೊಳಿಸಿದ್ರೆ, ಇನ್ನೊಂದು ಬಂಡೆ ಮತ್ತೊಂದು ಕಾರಿನ ಮೇಲೆ ಬಿದ್ದು ಸಂಪೂರ್ಣವಾಗಿ ಜಖಂಗೊಳಿಸಿತು.
ಈ ಅವಘಡ ಸಂಭವಿಸಿದ ಸ್ಥಳವನ್ನು ಸಾಮಾನ್ಯವಾಗಿ "ಪಕಲಾ ಪಹಾರ್" ಎಂದು ಕರೆಯಲಾಗುತ್ತದೆ. ಇದು ಆಗಾಗ್ಗೆ ಭೂಕುಸಿತ ಮತ್ತು ಬಂಡೆಗಳ ಕುಸಿತಕ್ಕೆ ಹೆಚ್ಚು ಕುಖ್ಯಾತಿ ಗಳಿಸಿದೆ. ದುರಂತದ ಕುರಿತು ಮುಖ್ಯಮಂತ್ರಿ ನೆಫಿಯು ರಿಯೊ ಟ್ವೀಟ್ ಮಾಡಿ, ಜೀವಹಾನಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಗುಡ್ಡದ ಜೊತೆ ಉರುಳಿದ ಕಲ್ಲುಬಂಡೆ: ಅಪಾಯದಿಂದ ಪಾರಾದ ಮದುಮಗಳು!