17 ದಿನ ಸುರಂಗದೊಳಗೆ ಸಮಯ ಕಳೆದಿದ್ದು ಹೇಗೆ? ಪ್ರಧಾನಿ ಮೋದಿಗೆ ವಿವರಿಸಿದ ಕಾರ್ಮಿಕರು- ವಿಡಿಯೋ

By ETV Bharat Karnataka Team

Published : Nov 29, 2023, 11:51 AM IST

thumbnail

ನವದೆಹಲಿ: ಉತ್ತರಾಖಂಡದಲ್ಲಿ ನಿರ್ಮಾಣ ಹಂತದ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಯಶಸ್ವಿಯಾಗಿ ನಡೆದಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಶ್ಲಾಘಿಸಿದರು. ಬಳಿಕ ದೂರವಾಣಿ ಕರೆ ಮೂಲಕ ಕಾರ್ಮಿಕರೊಂದಿಗೆ ಮಾತನಾಡಿದ ಮೋದಿ, ಯೋಗಕ್ಷೇಮ ವಿಚಾರಿಸಿದರು. ವಿವಿಧ ಸಂಸ್ಥೆಗಳಿಂದ ನಡೆದ ಈ ರಕ್ಷಣಾ ಕಾರ್ಯಾಚರಣೆ ಎಲ್ಲರನ್ನೂ ಭಾವುಕರನ್ನಾಗಿಸಿದೆ ಎಂದರು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಚಾರ್ ಧಾಮ್ ಯೋಜನೆಯಲ್ಲಿ ಒಳಗೊಂಡಿರುವ ಸಿಲ್ಕ್ಯಾರಾ ಸುರಂಗದ ಒಂದು ಭಾಗ ನವೆಂಬರ್ 12ರಂದು ಭೂಕುಸಿತದಿಂದ ಕುಸಿದು ಬಿದ್ದ ನಂತರ ಸಿಕ್ಕಿಬಿದ್ದ ಎಲ್ಲಾ 41 ಕಾರ್ಮಿಕರನ್ನು ನಿನ್ನೆ (ಮಂಗಳವಾರ) ಸಂಜೆ ರಕ್ಷಣಾ ಕಾರ್ಯಕರ್ತರು ರಕ್ಷಿಸಿದರು. 17 ದಿನಗಳ ನಂತರ ಈ ಕಾರ್ಮಿಕರನ್ನು ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆಗಾಗಿ ಚಿನ್ಯಾಲಿಸೌರ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು.

ಕಾರ್ಮಿಕರೊಂದಿಗೆ ಮಾತನಾಡಿದ ಮೋದಿ, ''ನಾನು ನಿಮಗೆ ಮತ್ತು ನಿಮ್ಮ ಎಲ್ಲಾ ಸಹೋದ್ಯೋಗಿಗಳನ್ನು ಅಭಿನಂದಿಸುತ್ತೇನೆ. ಕಾರ್ಯಾಚರಣೆ ಯಶಸ್ವಿಯಾಗಿರುವುದು ನನಗೆ ತುಂಬಾ ಸಂತೋಷದ ವಿಷಯ. ಅದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಕೇದಾರನಾಥ ಬಾಬಾ ಮತ್ತು ಬದರಿನಾಥ್ ಜೀ ಕೃಪೆಯಿಂದ ನೀವೆಲ್ಲರೂ ಕ್ಷೇಮವಾಗಿ ಹೊರಬಂದಿದ್ದೀರಿ. ಕಾರ್ಮಿಕರ ಧೈರ್ಯ ಮತ್ತು ತಾಳ್ಮೆ ಎಲ್ಲರಿಗೂ ಸ್ಫೂರ್ತಿ. ಸುದೀರ್ಘ ಕಾಯುವಿಕೆಯ ನಂತರ ತಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುತ್ತಿರುವುದು ಅತ್ಯಂತ ತೃಪ್ತಿ ತಂದಿದೆ. ನಿಮ್ಮ ಕುಟುಂಬ ಸದಸ್ಯರ ತಾಳ್ಮೆ, ಧೈರ್ಯವನ್ನು ಎಷ್ಟು ಹೊಗಳಿದರೂ ಸಾಲದು'' ಎಂದರು.

ಇದೇ ವೇಳೆ ಕಾರ್ಮಿಕರೊಬ್ಬರು ಮಾತನಾಡಿ, ''ಸುರಂಗದಲ್ಲಿ ಎಲ್ಲ ಸಮಯದಲ್ಲೂ ಎಲ್ಲ ಕಾರ್ಮಿಕರು ಒಟ್ಟಿಗಿರುತ್ತಿದ್ದರಿಂದ ಯಾರಿಗೂ ಎಂದಿಗೂ ಭಯವಾಗಲಿಲ್ಲ. ಯಾವುದೇ ರೀತಿ ಮಾನಸಿಕ ಖಿನ್ನತೆಗೆ ನಾವು ಒಳಗಾಗಲಿಲ್ಲ. ಒಟ್ಟಿಗೆ ರಾತ್ರಿಯ ಊಟ ಮಾಡುತ್ತಿದ್ದೆವು. ನಂತರ ಎಲ್ಲರೂ ಒಟ್ಟು ಸೇರಿ ವಾಕ್​ ಮಾಡುತ್ತಿದ್ದೆವು. ನಾವು ಸಿಕ್ಕಿಬಿದ್ದ ಸ್ಥಳದಿಂದ ಸುಮಾರು 2.5 ಕಿಲೋಮೀಟರ್​ಗಳಷ್ಟು ದೂರದವರೆಗೆ ಜಾಗವಿತ್ತು. ಈ ಸಮಯದಲ್ಲಿ ನಮಗೆ ಯಾವುದೇ ಕೆಲಸವಿರಲಿಲ್ಲ. ಈ ಪ್ರದೇಶದಲ್ಲಿಯೇ ಬೆಳಿಗ್ಗೆ ಯೋಗ ಮಾಡುತ್ತಿದ್ದೆವು. ಈ ದಿನಗಳಲ್ಲಿ ನಮ್ಮನ್ನು ಬೆಂಬಲಿಸಿದ ಉತ್ತರಾಖಂಡ ಸರ್ಕಾರಕ್ಕೆ ಧನ್ಯವಾದ ಹೇಳ ಬಯಸುತ್ತೇನೆ. ಜೊತೆಗೆ ಸಿಎಂ ಪುಷ್ಕರ್ ಸಿಂಗ್ ಧಾಮಿ, ಜನರಲ್ ವಿ.ಕೆ.ಸಿಂಗ್ ಅವರಿಗೂ ಕೃತಜ್ಞತೆಗಳು'' ಎಂದರು.

ಇದನ್ನೂ ಓದಿ: 17 ದಿನಗಳ ಬಳಿಕ ಕಾರ್ಮಿಕರು ಸುರಂಗದಿಂದ ಒಬ್ಬೊಬ್ಬರಾಗಿ ಹೊರಬಂದ ದೃಶ್ಯ- ನೋಡಿ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.