ಜೆಡಿಎಸ್ ಕಚೇರಿ ಕಾಂಪೌಂಡ್ ಮೇಲೆ ಪೋಸ್ಟರ್ ಅಂಟಿಸಿದ ಕಿಡಿಗೇಡಿಗಳು; ಪೊಲೀಸರಿಂದ ತೆರವು- ವಿಡಿಯೋ - ವಿದ್ಯುತ್ ಸಂಪರ್ಕ
🎬 Watch Now: Feature Video
Published : Nov 15, 2023, 10:36 AM IST
ಬೆಂಗಳೂರು: ಜೆಡಿಎಸ್ ಕಚೇರಿ ಜೆ.ಪಿ.ಭವನದ ಕಾಂಪೌಂಡ್ ಗೋಡೆ ಮೇಲೆ 'ವಿದ್ಯುತ್ ಕಳ್ಳ ಕುಮಾರಸ್ವಾಮಿ' ಎಂಬ ಪೋಸ್ಟರ್ ಅಂಟಿಸಲಾಗಿದೆ. ಇದು ಕಿಡಿಗೇಡಿಗಳ ಕೃತ್ಯವೇ? ಅಥವಾ ಯಾವುದಾದರೂ ಪಕ್ಷದ ಕಾರ್ಯಕರ್ತರ ಕೆಲಸವೇ? ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಆದರೆ, ಪೊಲೀಸರು ಪೋಸ್ಟರ್ಗಳನ್ನು ತೆಗೆದು ಹಾಕಿದ್ದಾರೆ.
ಪೋಸ್ಟರ್ ಅಂಟಿಸಿರುವ ಕಿಡಿಗೇಡಿಗಳು ಅದರಲ್ಲಿ 200 ಯೂನಿಟ್ ಉಚಿತ ವಿದ್ಯುತ್, ನೆನಪಿಟ್ಟುಕೊಳ್ಳಿ. ಹೆಚ್ಚು ಕದಿಯಬೇಡಿ ಎಂದು ಬರೆದಿದ್ದಾರೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜೆ.ಪಿ.ನಗರದಲ್ಲಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಮನೆಗೆ ದೀಪಾಲಂಕಾರ ಮಾಡುವ ಸಂದರ್ಭದಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯಲಾಗಿತ್ತು. ಈ ಬಗ್ಗೆ ಸ್ವತಃ ಕುಮಾರಸ್ವಾಮಿ ಅವರೇ ಅಚಾತುರ್ಯದಿಂದ ತಪ್ಪಾಗಿರುವುದನ್ನು ಒಪ್ಪಿಕೊಂಡು ದಂಡ ಕಟ್ಟುವುದಾಗಿ ಹೇಳಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ವಿರುದ್ಧ ಜಯನಗರದ ಬೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಭಾರತೀಯ ವಿದ್ಯುತ್ ಕಾಯ್ದೆ 135ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ.
ಇದನ್ನೂ ಓದಿ: ವಿದ್ಯುತ್ ಕಳ್ಳತನದ ಬಗ್ಗೆ ಕುಮಾರಸ್ವಾಮಿ ಒಪ್ಪಿಕೊಂಡಿದ್ದಕ್ಕೆ ಅಭಿನಂದನೆ : ಡಿಸಿಎಂ ಡಿ ಕೆ ಶಿವಕುಮಾರ್