ಶಾಸಕರುಗಳಿಗೆ ಬಿಸಿ ಮುಟ್ಟಿಸಿದ ಮತದಾರರು: ಶಾಸಕ ಅಜಯ್ ಸಿಂಗ್, ಮತ್ತಿಮೂಡಗೆ ಇರಿಸು-ಮುರಿಸು - ವಿಧಾನ ಸಭೆ ಚುನಾವಣೆ 2023

🎬 Watch Now: Feature Video

thumbnail

By

Published : Mar 22, 2023, 11:10 AM IST

Updated : Mar 22, 2023, 5:59 PM IST

ಕಲಬುರಗಿ: ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಕ್ಷೇತ್ರದ ಸಂಚಾರ ಆರಂಭಿಸಿದ ಜೇವರ್ಗಿ ಹಾಗೂ ಗ್ರಾಮೀಣ ಮತಕ್ಷೇತ್ರದ ಶಾಸಕರು, ಜನರ ಕೈಗೆ ಸಿಕ್ಕು ಇರಿಸು‌ಮುರಿಸು ಅನುಭವಿಸಿದರು.

ಜೇವರ್ಗಿ ಶಾಸಕ ಅಜಯ್ ಸಿಂಗ್ ಅವರಿಗೆ ರೈತನೋರ್ವ ವೇದಿಕೆ ಮೇಲೇರಿ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ತಾಲೂಕಿನ ಸುಂಬಡ ಗ್ರಾಮದಲ್ಲಿ ಸೋಮವಾರ ರಾತ್ರಿ ಆಯೋಜಿಸಿದ್ದ ನೂತನ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಜಯ್ ಸಿಂಗ್ ಉದ್ಘಾಟಕರಾಗಿ ಭಾಗಿಯಾಗಿದ್ದರು. ಅಜಯ್ ಸಿಂಗ್ ವೇದಿಕೆ ಮೇಲೆ ಮಾತಾಡುತ್ತಿದ್ದರು. ಈ ವೇಳೆ ಮುಂದೆ ಕುಳಿತಿದ್ದ ರೈತನೋರ್ವ ಪಟಪಟನೇ ವೇದಿಕೆ ಮೇಲೇರಿ ನಮ್ಮ ಸುಂಬಡ ಗ್ರಾಮಕ್ಕೆ ನೀವು ಏನು ಅಭಿವೃದ್ಧಿ ಕೆಲಸ ಮಾಡಿದ್ದೀರಿ? ಹೇಳಿ ಎಂದು ಪ್ರಶ್ನಿಸಿದರು. 

ರೈತ ಪ್ರಶ್ನೆ ಮಾಡುತ್ತಿದ್ದ ಹಾಗೆಯೇ ಮೌನವಾದ ಶಾಸಕ ಭಾಷಣ ನಿಲ್ಲಿಸಿ ಮುಜುಗರ ಅನುಭವಿಸಿದರು. ಈ ಸಂದರ್ಭದಲ್ಲಿ ಅವರು ನಿಲ್ಲಲು ಆಗದೇ ವಾಪಸ್ ಕುರ್ಚಿ ಮೇಲೆ ಹೋಗಿ ಕುಳಿತುಕೊಳ್ಳಲೂ ಆಗದೇ ಪರದಾಡಿದ್ದು ಕಂಡುಬಂತು. ತಕ್ಷಣ ಶಾಸಕರ ಬೆಂಬಲಿಗರು ಮತ್ತು ಗ್ರಾಮದ ಕೆಲವರು ಪ್ರಶ್ನೆ ಮಾಡಿದ ರೈತನನ್ನು ಒತ್ತಾಯ ಪೂರ್ವಕವಾಗಿ ವೇದಿಕೆ ಕೆಳಗಿಳಿಸಿ ಕಾರ್ಯಕ್ರಮದಿಂದ ಹೊರ ಕಳಿಸಿರು. ನಂತರ ಮತ್ತೆ ಅಜಯ್ ಸಿಂಗ್ ಕಾರ್ಯಕ್ರಮ ಉದ್ದೇಶಿಸಿ ಮಾತು ಮುಂದುವರೆಸಿದರು.  

ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ‌ ಮತ್ತಿಮೂಡ ಅವರಿಗೂ ಜನ‌ರು ಬಿಸಿ ಮುಟ್ಟಿಸಿದ್ದಾರೆ.‌ ನರೋಣಾ ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮದ ಕೆಲವು ಮಹಿಳೆಯರು, ಯುವಕರು ತರಾಟೆಗೆ ತೆಗೆದುಕೊಂಡಿದ್ದಾರೆ. ನೀರು, ಚರಂಡಿಯಂತಹ ಮೂಲಭೂತ ಸೌಕರ್ಯಕ್ಕಾಗಿ ಶಾಸಕ ಮತ್ತಿಮೂಡ ಜತೆ ವಾಗ್ವಾದಕ್ಕೆ ಇಳಿದಿದ್ದರು. ಮಾತಿಗೆ ಮಾತು ಬೆಳೆಯುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ಶಾಸಕರು ಘಟನೆ ದೃಶ್ಯ ಸೆರೆ ಹಿಡಿಯುತ್ತಿದ್ದ ಯುವಕನ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡು ನೆಲಕ್ಕೆಸೆದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಗ್ರಾಮದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಶಾಸಕರು ಮುಜುಗರ ಅನುಭವಿಸಬೇಕಾಯಿತು. ಗ್ರಾಮದ ಮುಖಂಡರು ಶಾಸಕರ ಬೆಂಬಲಿಗರು ವಾತಾವರಣ ತಿಳಿಗೊಳಿಸಿ ಶಾಸಕರನ್ನು ಅಲ್ಲಿಂದ ಕರೆದೊಯ್ದರು. ಶಾಸಕರ ವರ್ತನೆಗೆ ಗ್ರಾಮಸ್ಥರು ಕಿಡಿಕಾರಿದ್ದಾರೆ. ಇದನ್ನೇ ಬಳಸಿಕೊಂಡ ಕಾಂಗ್ರೆಸ್ ಹಾಗೂ ಇತರೆ ಪಕ್ಷದ ನಾಯಕರು ಶಾಸಕ ಮತ್ತಿಮೂಡ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಪ್ರತಿಭಟನೆ ನಡೆಸಿ ಶಾಸಕರ ವರ್ತನೆಯನ್ನು ಖಂಡಿಸಿದ್ದಾರೆ.

ಇದನ್ನೂ ಓದಿ: ಮಾರ್ಚ್ 23ಕ್ಕೆ ಅಮಿತ್ ಶಾ ಕರ್ನಾಟಕ ಪ್ರವಾಸ

Last Updated : Mar 22, 2023, 5:59 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.