ಇಬ್ಬರು ಭಯೋತ್ಪಾದಕ ಶಂಕಿತರನ್ನು ಬಂಧಿಸಿದ ಪುಣೆ ಪೊಲೀಸರು! - ಪೊಲೀಸ್ ಕಮಿಷನರ್ ರಿತೇಶ್ ಕುಮಾರ್
🎬 Watch Now: Feature Video
ಮಹಾರಾಷ್ಟ್ರ: ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗೆ ಬೇಕಾಗಿದ್ದ ಇಬ್ಬರು ಭಯೋತ್ಪಾದಕ ಶಂಕಿತರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಶಂಕಿತ ಆರೋಪಿಗಳನ್ನು ಮೊಹಮ್ಮದ್ ಇಮ್ರಾನ್ ಮೊಹಮ್ಮದ್ ಯೂನಸ್ ಖಾನ್ (23) ಮತ್ತು ಮೊಹಮ್ಮದ್ ಯೂನಸ್ ಮೊಹಮ್ಮದ್ ಯಾಕೂಬ್ ಸಾಕಿ (24) ಎಂದು ಗುರುತಿಸಲಾಗಿದ್ದು, ಇವರು ಗ್ರಾಫಿಕ್ ಡಿಸೈನರ್‌ಗಳಾಗಿ ಕೆಲಸ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ. ಇವರು ಮಧ್ಯಪ್ರದೇಶದ ರತ್ಲಾಮ್ ಮೂಲದವರು.
ಪುಣೆಯ ಕೊತ್ರುದ್ ಪ್ರದೇಶದಲ್ಲಿ ಮೋಟಾರ್ ಸೈಕಲ್ ಕದಿಯಲು ಯತ್ನಿಸುತ್ತಿದ್ದ ಶಂಕಿತ ಮೂವರನ್ನು ಪೆಟ್ರೋಲಿಂಗ್ ತಂಡ ಬಂಧಿಸಿದ ಬಳಿಕ ಈ ಬಂಧನ ನಡೆದಿದೆ. ತಪಾಸಣೆ ವೇಳೆ ಓರ್ವ ಆರೋಪಿ ಪರಾರಿಯಾಗಿದ್ದಾನೆ. ಬಂಧಿತ ಇಬ್ಬರು ಶಂಕಿತರು ರಾಜಸ್ಥಾನದ ಭಯೋತ್ಪಾದನೆ ಸಂಬಂಧಿತ ಪ್ರಕರಣದಲ್ಲಿ ಎನ್‌ಐಎಗೆ ಬೇಕಾಗಿದ್ದಾರೆ ಮತ್ತು ಕಳೆದ 16 ತಿಂಗಳುಗಳಿಂದ ಪುಣೆಯ ಕೊಂಡ್ವಾ ಪ್ರದೇಶದಲ್ಲಿ ಇವರು ನೆಲೆಸಿದ್ದರು ಎಂಬುದಾಗಿ ತಿಳಿದು ಬಂದಿದೆ.
ಅವರ ಬಂಧನದ ಸಮಯದಲ್ಲಿ, ಪೊಲೀಸರು ಅವರ ನಿವಾಸದಿಂದ ಲೈವ್ ಕಾರ್ಟ್ರಿಡ್ಜ್, ಎರಡು ಹೋಲ್ಸ್ಟರ್‌ಗಳು, ನಾಲ್ಕು ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್ ಅನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಬಳಿ ಬಂದೂಕುಗಳಿವೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಗಳು ಬೇಕಾಗಿದ್ದಾರೆ ಎಂದು ತಿಳಿಸಿದ ಪೊಲೀಸರು ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಪ್ರಥಮ ದರ್ಜೆ) ನ್ಯಾಯಾಲಯದಲ್ಲಿ ಶಂಕಿತರನ್ನು ಎಂಟು ದಿನಗಳ ಕಸ್ಟಡಿಗೆ ಕೋರಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದ ರಜೌರಿಯಲ್ಲಿ ಎನ್‌ಕೌಂಟರ್; ಓರ್ವ ಉಗ್ರನ ಹತ್ಯೆ