ಹೆಚ್ಚುವರಿ ದಾಸ್ತಾನಿದ್ದರೂ ಕೇಂದ್ರ ಸರ್ಕಾರದಿಂದ ಅಕ್ಕಿ ನಿರಾಕರಣೆ: ಸಚಿವ ಕೆ.ಹೆಚ್. ಮುನಿಯಪ್ಪ - KH Muniyappa Meeting With Union Minister
🎬 Watch Now: Feature Video
ನವದೆಹಲಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಅಕ್ಕಿ ಒದಗಿಸುವ ಅನ್ನಭಾಗ್ಯ ಯೋಜನೆ ಹಿನ್ನೆಲೆಯಲ್ಲಿ ಇಂದು ಕೇಂದ್ರದ ಮೊರೆ ಹೋಗಿದ್ದ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಬರಿಗೈಯಲ್ಲಿ ರಾಜ್ಯಕ್ಕೆ ಆಗಮಿಸಿದ್ದಾರೆ. ಹೆಚ್ಚುವರಿ ಅಕ್ಕಿ ಖರೀದಿ ವಿಚಾರವಾಗಿ ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗತ್ಯ ಅಕ್ಕಿ ಪೂರೈಕೆಗೆ ಮನವಿ ಮಾಡಿದ್ದೇನೆ. ಆದರೆ, ಪೂರೈಕೆ ಮಾಡಲು ಸಾಧ್ಯವಿಲ್ಲವೆಂದು ಕೇಂದ್ರ ಸಚಿವರು ಹೇಳಿದ್ದಾರೆ. ಹೆಚ್ಚುವರಿ ದಾಸ್ತಾನು ಇರುವುದಾಗಿ ಭಾರತ ಆಹಾರ ನಿಗಮ ತಿಳಿಸಿದೆ. ಹೀಗಿದ್ದರೂ ಅಕ್ಕಿ ಕೊಡಲು ಆಗುವುದಿಲ್ಲ ಎಂದರು. ಉಚಿತವಾಗಿ ಅಲ್ಲ, ಹಣ ನೀಡಿಯೇ ಅಕ್ಕಿ ಖರೀದಿ ಮಾಡಲಾಗುತ್ತದೆ ಅಂತ ಹೇಳಿದ್ದೇವೆ. ಆದರೂ ಕೇಂದ್ರ ಅಕ್ಕಿ ಕೊಡದೇ ರಾಜಕೀಯ ಮಾಡುತ್ತಿದೆ. ಹೀಗಾಗಿ, ನಾವು ನಮ್ಮ ದಾರಿ ಕಂಡುಕೊಳ್ಳಬೇಕಿದೆ. ಅನ್ನಭಾಗ್ಯ ಘೋಷಣೆ ಮಾಡಿದ್ದೇವೆ. ಅದನ್ನು ಜಾರಿ ಮಾಡಿಯೇ ಮಾಡುತ್ತೇವೆ ಎಂದರು.
ಈ ಬಗ್ಗೆ ಟ್ವೀಟ್ ಕೂಡ ಮಾಡಿರುವ ಮುನಿಯಪ್ಪ, ಕರ್ನಾಟಕ ರಾಜ್ಯವು ಭಾರತದ ಒಕ್ಕೂಟ ವ್ಯವಸ್ಥೆಯ ಭಾಗ. ನಾವು ಕೇಂದ್ರಕ್ಕೆ ಉಚಿತ ಅಕ್ಕಿ ಕೇಳಿರಲಿಲ್ಲ. ಅವರು ಕೇಳಿದಷ್ಟು ಹಣ ಕೊಡಲು ಸಿದ್ಧರಿದ್ದೇವೆ. ಏಳು ಲಕ್ಷ ಟನ್ ಆಹಾರ ಧಾನ್ಯ ದಾಸ್ತಾನಿದ್ದರೂ ಕೊಡದೆ ರಾಜಕೀಯ ಮಾಡುತ್ತಿದ್ದಾರೆ. ಇದು ಒಕ್ಕೂಟ ವ್ಯವಸ್ಥೆಗೆ ಒಳ್ಳೆಯದಲ್ಲ ಎಂದು ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ: ಅಕ್ಕಿ ವಿತರಣೆಗೆ ಒಂದೆರಡು ತಿಂಗಳು ತಡವಾದರೆ ಸಮಸ್ಯೆ ಏನೂ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ