ದಕ್ಷಿಣ ಕನ್ನಡದಲ್ಲಿ ಮುಂದುವರಿದ ಮಳೆ ಆರ್ಭಟ: ಪರೀಕ್ಷೆ ಹಿನ್ನೆಲೆ ಅಪಾಯಕಾರಿ ಸ್ಥಿತಿಯಲ್ಲೇ ಸಂಚರಿಸಿದ ಪದವಿ ವಿದ್ಯಾರ್ಥಿಗಳು
🎬 Watch Now: Feature Video
ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಕೂಡ ಭಾರಿ ಮಳೆ ಮುಂದುವರಿದಿದ್ದು, ಸುಬ್ರಹ್ಮಣ್ಯ ಸಮೀಪದ ಕುಮಾರಧಾರ ಬಳಿ ಹೆದ್ದಾರಿ ಜಲಾವೃತಗೊಂಡಿದ್ದು, ಪದವಿ ವಿದ್ಯಾರ್ಥಿಗಳು ಅಪಾಯಕಾರಿ ಸ್ಥಿತಿಯಲ್ಲಿ ಸಂಚರಿಸಿ ಪರೀಕ್ಷೆಗೆ ಹಾಜರಾಗಬೇಕಾದ ಸ್ಥಿತಿ ಉಂಟಾಯಿತು. ಮಂಗಳೂರು ಯುನಿವರ್ಸಿಟಿ ಸೆಮಿಸ್ಟರ್ ಪರೀಕ್ಷೆಗಳು ನಡೆಯುತ್ತಿದ್ದು, ಭೀಕರ ಮಳೆ ಸುರಿಯುತ್ತಿದ್ದರೂ ಪರೀಕ್ಷೆ ಮುಂದೂಡಿಕೆ ಆಗಿರಲಿಲ್ಲ.
ಈ ಪರಿಣಾಮದಿಂದಾಗಿ ಪಂಜ ಭಾಗದಿಂದ ಕುಕ್ಕೆ ಸುಬ್ರಹ್ಮಣ್ಯದ ಕೆಎಸ್ಎಸ್ ಕಾಲೇಜಿಗೆ ಪರೀಕ್ಷೆಗಾಗಿ ಹಾಜರಾಗಲು ಬರುವ ವಿದ್ಯಾರ್ಥಿಗಳು ಮೊಣಕಾಲಿಗಿಂತ ಮೇಲಕ್ಕೆ ಜಲಾವೃತಗೊಂಡ ರಸ್ತೆಯಲ್ಲೇ ಸಂಚರಿಸಿ ಪರೀಕ್ಷಾ ಕೇಂದ್ರಗಳತ್ತ ಬಂದಿದ್ದಾರೆ. ಇನ್ನೂ ಕೆಲವರು ಕಾಡುದಾರಿಗಳ ಮೂಲಕ, ಮತ್ತು ಮತ್ತೆ ಕೆಲವರು ಕಿಲೋಮೀಟರ್ ಗಟ್ಟಲೆ ಸುತ್ತು ಬಳಸಿ ಕಾಲೇಜಿಗೆ ಬರುವಂತಾಯಿತು. ಮಂಗಳೂರು ಭಾಗದಲ್ಲಿ ಇಂದು ಹೆಚ್ಚಿನ ಪ್ರಮಾಣದಲ್ಲಿ ಮಳೆ ಇಲ್ಲದಿದ್ದರೂ ಕಡಬ, ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳಲ್ಲಿನ ಹಲವು ಕಡೆಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಮಳೆ ಸುರಿದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ವಿಶ್ವವಿದ್ಯಾಲಯ ಸೆಮಿಸ್ಟರ್ ಪರೀಕ್ಷೆ ಮುಂದೂಡಲಿ ಎಂಬ ಆಗ್ರಹ ಈ ಭಾಗದ ವಿದ್ಯಾರ್ಥಿಗಳಿಂದ ವ್ಯಕ್ತವಾಗಿದೆ.
ಬೆಳಗ್ಗೆ ಹಾಗೂ ಮಧ್ಯಾಹ್ನ ಪರೀಕ್ಷೆಗಳು ನಡೆಯುತ್ತಿವೆ. ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಇದೀಗ ಸಂಜೆ ಸಮಯದಲ್ಲೂ ಕಡಬ ತಾಲೂಕಿನಾದ್ಯಾಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಅಲ್ಲಲ್ಲಿ ವಿದ್ಯುತ್ ಕಂಬಗಳು, ಮರಗಳು ಬೀಳುವುದು, ಗುಡ್ಡ ಕುಸಿತದ ಘಟನೆಗಳು ನಡೆಯುತ್ತಿವೆ.
ಇದನ್ನೂ ಓದಿ: Watch: ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ನೀರಿನಲ್ಲಿ ಕೊಚ್ಚಿಹೋದ ಯುವಕ.. ದೃಶ್ಯ ಮೊಬೈಲ್ನಲ್ಲಿ ಸೆರೆ