'ಕಾವೇರಿ'ದ ಕಿಚ್ಚು: ತಮಿಳು ನಟ ಸಿದ್ಧಾರ್ಥ್ ಬಳಿ ಕ್ಷಮೆಯಾಚಿಸಿದ ಶಿವ ರಾಜ್ಕುಮಾರ್ - ಈಟಿವಿ ಭಾರತ ಕನ್ನಡ
🎬 Watch Now: Feature Video
Published : Sep 29, 2023, 8:27 PM IST
ರಾಜ್ಯಾದ್ಯಂತ ಕಾವೇರಿ ಕಿಚ್ಚು ಜೋರಾಗಿದೆ. ಎಲ್ಲೆಡೆ ಹೋರಾಟಗಳು ಮುಂದುವರೆದಿದೆ. ಸ್ಯಾಂಡಲ್ವುಡ್ ತಾರೆಯರು ಕೂಡ ಕಾವೇರಿಗಾಗಿ ಧ್ವನಿ ಎತ್ತಿದ್ದಾರೆ. ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರಮ ಖಂಡಿಸಿ ಇಂದು ಕರ್ನಾಟಕ ಬಂದ್ ಕೂಡ ಮಾಡಲಾಗಿದೆ. ತಮಿಳು ನಟ ಸಿದ್ಧಾರ್ಥ್ ಅವರ ಮೇಲೂ ಕಾವೇರಿ ಕಾವು ತಟ್ಟಿದ್ದು, ಇಂಡಸ್ಟ್ರಿ ಪರವಾಗಿ ಕರುನಾಡ ಚಕ್ರವರ್ತಿ ಶಿವ ರಾಜ್ಕುಮಾರ್ ಕ್ಷಮೆಯಾಚಿಸಿದ್ದಾರೆ.
'ಚಿಕ್ಕು' ಸಿನಿಮಾದ ಪ್ರಚಾರಕ್ಕಾಗಿ ಸಿದ್ಧಾರ್ಥ್ ಅವರು ನಿನ್ನೆ ಬೆಂಗಳೂರಿಗೆ ಬಂದಿದ್ದರು. ಮಲ್ಲೇಶ್ವರಂನ ಎಸ್ಆರ್ವಿ ಚಿತ್ರಮಂದಿರದಲ್ಲಿ ಸಿನಿಮಾ ಪ್ರೆಸ್ಮೀಟ್ ಆಯೋಜನೆ ಮಾಡಿದ್ದರು. ಅವರು ತಮಿಳು ನಟನಾದರೂ ಕನ್ನಡದಲ್ಲಿಯೇ ಮಾತನಾಡಿ ಕನ್ನಡ ಪ್ರೇಮವನ್ನು ಹೋರಹಾಕಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಕನ್ನಡ ಪರ ಹೋರಾಟಗಾರರು ಮಾಧ್ಯಮಗೋಷ್ಠಿಗೆ ವಿರೋಧ ವ್ಯಕ್ತಪಡಿಸಿ, ನಟನನ್ನು ಹೊರಕ್ಕೆ ಕಳುಹಿಸಿದ್ದರು.
ಈ ನಡೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಈ ವಿಚಾರವನ್ನು ನಟ ಶಿವ ರಾಜ್ಕುಮಾರ್ ಕಾವೇರಿ ಹೋರಾಟದ ವೇಳೆ ಪ್ರಸ್ತಾಪಿಸಿದ್ದಾರೆ. "ನಿನ್ನೆ ನಡೆದ ಈ ವಿಚಾರ ನಿಜಕ್ಕೂ ಬೇಸರ ತರಿಸಿದೆ. ನಮ್ಮ ಇಂಡಸ್ಟ್ರಿ ಪರವಾಗಿ ಸಿದ್ಧಾರ್ಥ್ ಅವರಲ್ಲಿ ನಾನು ಕ್ಷಮೆ ಕೇಳುತ್ತೇನೆ. ಸಿದ್ಧಾರ್ಥ್ ವಿ ರಿಯಲಿ ಸಾರಿ. ನಮಗೆ ಬಹಳ ನೋವಾಗಿದೆ. ಈ ತಪ್ಪು ಮತ್ಯಾವತ್ತೂ ಆಗುವುದಿಲ್ಲ" ಎಂದು ನಟ ಸಿದ್ದಾರ್ಥ್ ಅವರಲ್ಲಿ ಶಿವಣ್ಣ ಕ್ಷಮೆ ಕೋರಿದ್ದಾರೆ.
"ಅಲ್ಲದೇ, ಕನ್ನಡ ಜನ ತುಂಬಾ ಒಳ್ಳೆಯವರು. ಅವರು ಎಲ್ಲಾ ಭಾಷೆಯನ್ನೂ ಪ್ರೀತಿಸುತ್ತಾರೆ. ಎಲ್ಲ ಭಾಷೆಯ ಸಿನಿಮಾಗಳನ್ನು ನೋಡುವ ಜನ ಅಂದ್ರೆ ಕರ್ನಾಟಕದವರು ಮಾತ್ರ. ಈ ವಿಚಾರವನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಆ ಮರ್ಯಾದೆಯನ್ನು ನಾವು ಕಾಪಾಡಿಕೊಳ್ಳಬೇಕು" ಎಂದರು.
ಇದನ್ನೂ ಓದಿ: ತಮಿಳು ನಟ ಸಿದ್ಧಾರ್ಥ್ ಸಿನಿಮಾ ಪ್ರಚಾರಕ್ಕೆ ಅಡ್ಡಿ: ಕನ್ನಡಿಗರ ಪರವಾಗಿ ಕ್ಷಮೆಯಾಚಿಸಿದ ಪ್ರಕಾಶ್ ರಾಜ್!