ಯಾರೋ ಬಾರ್ನಲ್ಲಿ ಹೊಡೆದಾಟ ಮಾಡಿಕೊಂಡಿದ್ದಕ್ಕೆ ರಾಜಕೀಯ ಬಣ್ಣ ಕೊಟ್ಟರೆ ಹೇಗೆ?: ಗೃಹ ಸಚಿವ ಆರಗ ಜ್ಞಾನೇಂದ್ರ - ಕಿಮ್ಮನೆ ರತ್ನಾಕರ್ ವಿರುದ್ಧ ವಾಗ್ದಾಳಿ
🎬 Watch Now: Feature Video
ಶಿವಮೊಗ್ಗ: ಕುಡುಕರಿಗೆ ಯಾವ ರಾಜಕೀಯ ಪಕ್ಷವಿದೆ. ಯಾರೋ ಬಾರ್ನಲ್ಲಿ ಕುಳಿತು ಹೊಡೆದಾಟ ಮಾಡಿಕೊಂಡಿದ್ದಕ್ಕೆ ರಾಜಕೀಯ ಬಣ್ಣ ಕೊಟ್ಟರೆ ಹೇಗೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಪ್ರತಿಭಟನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನೆ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿ ಮಾತನಾಡಿದ ಅವರು, ಕುಡುಕರಿಗೆ ಯಾವ ರಾಜಕೀಯ ಪಕ್ಷ ಇದೆ ಹೇಳಿ, ಕುಡುಕರು ಎಲ್ಲಾ ಪಕ್ಷದಲ್ಲಿದ್ದಾರೆ. ಈ ಬಗ್ಗೆ ಏನ್ ಹೇಳೋದು ಹೇಳಿ ಎಂದು ಪ್ರತಿಕ್ರಿಯಿಸಿದ್ದಾರೆ.
ತೀರ್ಥಹಳ್ಳಿಯ ಬಾರ್ನಲ್ಲಿ ಕುಡಿದು ಗಲಾಟೆ ಮಾಡಿಕೊಂಡ ಕೆಲ ಯುವಕರು ಹರೀಶ್ ಎಂಬ ಆಟೋ ಚಾಲಕನ ಮೇಲೆ ರಾಡ್ನಿಂದ ಹಲ್ಲೆ ಮಾಡಿದ್ದರು. ಈತ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ. ನಂತರ ಇದು ರಾಜಕೀಯ ತಿರುವು ಪಡೆದುಕೊಂಡಿತ್ತು. ಹರೀಶ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೆಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಣೆ ನಡೆಸಿದ್ದರು. ಅಲ್ಲದೇ ತೀರ್ಥಹಳ್ಳಿ ಪೊಲೀಸ್ ಠಾಣೆ ಮುಂಭಾಗ ಧರಣಿ ನಡೆಸಿದ್ದರು. ಈ ವೇಳೆಗಾಗಲೇ ಪೊಲೀಸರು ದೂರು - ಪ್ರತಿದೂರು ದಾಖಲಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಯಾರೋ ಬಾರ್ಲ್ಲಿ ಕುಳಿತು ಗಲಾಟೆ ಮಾಡಿದ್ದಕ್ಕೆ ರಾಜಕೀಯ ಬಣ್ಣ ಕೊಟ್ಟರೆ, ನಾವಿದನ್ನು ಎಲ್ಲಿಗೆ ತೆಗೆದುಕೊಂಡು ಹೋಗುವುದು ಹೇಳಿ. ಈ ರೀತಿ ನಾವು ರಾಜಕಾರಣ ಮಾಡಿದರೆ ಅದು ಹೇಸಿಗೆ ಅನಿಸುತ್ತದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಎಣ್ಣೆ ಹಾಕಿ ಹೊಡೆಯುವವರಿಗೆ ಪಕ್ಷ ಇದೆಯಾ? ಎಣ್ಣೆ ಮಂಪರಿನಲ್ಲಿ ಕಾಂಗ್ರೆಸ್ನವರು, ಬಿಜೆಪಿಯವರು, ಯಾವುದೇ ಪಕ್ಷ ಅಲ್ಲದವರು ಕೂಡ ಹೊಡೆದುಕೊಳ್ಳುತ್ತಾರೆ.
ಎಣ್ಣೆ ಮಂಪರಿನಲ್ಲಿ ಪಕ್ಷ, ಧರ್ಮ, ಜಾತಿ ಎಲ್ಲಿ ಬರುತ್ತದೆ. ಇದು ರಾತ್ರಿ ಹಗಲು ಅಡ್ಡ ಮಲಗಿ ಹೋರಾಟ ಮಾಡುವ ವಿಷಯ ಅಲ್ಲ. ಇದು ಬಹಳ ಚೀಪ್ ಮಟ್ಟಕ್ಕೆ ಹೋಗುತ್ತದೆ. ಮೊನ್ನೆ ಮಾಳೂರಿನಲ್ಲಿ, ಮರಳು ಕದ್ದುಕೊಂಡು ಹೋಗುವವನ ಪರವಾಗಿ ಧರಣಿ ಮಾಡಿದ್ದಾರೆ. ಹೋರಾಟಗಳು ಯಾವ ಮಟ್ಟದಲ್ಲಿ ಇದ್ದಾವೆ, ಅವರು ಯಾವ ಮಟ್ಟದಲ್ಲಿ ಇದ್ದಾರೆ ಎಂಬುದು ಗೊತ್ತಾಗುತ್ತಾದೆ ಎಂದು ಪರೋಕ್ಷವಾಗಿ ಕಿಮ್ಮನೆ ರತ್ನಾಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಚಿತ್ರಮಂದಿರಕ್ಕೆ ಬೆಂಕಿ ಬಿದ್ದ ಸುಳ್ಳು ವದಂತಿ: ಥಿಯೇಟರ್‌ನಿಂದ ಹೊರ ಬಂದ ಪ್ರೇಕ್ಷಕರು