ಕೇಪ್ ಟೌನ್( ದಕ್ಷಿಣ ಆಫ್ರಿಕಾ): ಮಹಿಳಾ ಟಿ20 ವಿಶ್ವಕಪ್ನ ಪ್ರಥಮ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಜಯ ಸಾಧಿಸಿರುವ ಭಾರತ ತಂಡವು ಬುಧವಾರ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಎರಡನೇ ಪಂದ್ಯದಲ್ಲಿ ತನ್ನ ಬೌಲಿಂಗ್ ಅನ್ನು ಇನ್ನಷ್ಟು ಸುಧಾರಿಸುವ ಅಗತ್ಯವಿದೆ. ಉಪನಾಯಕಿ ಸ್ಮೃತಿ ಮಂಧಾನ ಅವರ ಅನುಪಸ್ಥಿತಿಯಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿದ್ದು, T20 ವಿಶ್ವಕಪ್‌ನಲ್ಲಿ ತಮ್ಮ ಅತ್ಯಧಿಕ ಯಶಸ್ವಿ ಚೇಸ್ ಅನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಧಾನ ತಮ್ಮ ಬೆರಳಿಗೆ ಆದ ಗಾಯದ ಕಾರಣದಿಂದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಆಡಲಿಲ್ಲ. ಆದರೆ, ಸ್ಟಾರ್ ಓಪನರ್ ಆಗಿರುವ ಅವರು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಸಮಯದಲ್ಲಿ ತಂಡಕ್ಕೆ ಮರಳುವ ಸಾಧ್ಯತೆಯಿದೆ. ವೆಸ್ಟ್ ಇಂಡೀಸ್ ಈಗಾಗಲೇ ಇಂಗ್ಲೆಂಡ್ ವಿರುದ್ಧ ದೊಡ್ಡ ಸೋಲು ಅನುಭವಿಸಿದೆ. ಮಂಧಾನ ಅವರು ಟೂರ್ನಿಯಲ್ಲಿ ಆಡಲು ಫಿಟ್ ಆಗಿದ್ದಾರೆ ಎಂದು ಭಾರತ ತಂಡದ ಬೌಲಿಂಗ್ ಕೋಚ್ ಟ್ರಾಯ್ ಕೂಲಿ ಭರವಸೆ ನೀಡಿದ್ದಾರೆ.
ಮಂಧಾನ ಆಟಕ್ಕೆ ಮರಳಲು ತುಂಬಾ ಶ್ರಮ ಪಡುತ್ತಿದ್ದಾರೆ ಮತ್ತು ತರಬೇತಿಯ ನಂತರ ಅವರ ಆಟವನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಅವರು ಮಾಡಬೇಕಾದ ಎಲ್ಲವನ್ನೂ ಮಾಡಿದ್ದಾರೆ ಮತ್ತು ತರಬೇತಿ ಅವಧಿಯಲ್ಲಿ ಸಾಕಷ್ಟು ಚೇತರಿಸಿಕೊಂಡಿದ್ದಾರೆ ಎಂದು ನಮಗೆ ಸಾಕಷ್ಟು ವಿಶ್ವಾಸವಿದೆ. ಭಾರತದ ಬೌಲರ್‌ಗಳು ಇನ್ನಿಂಗ್ಸ್‌ನ ಅಂತ್ಯದಲ್ಲಿ ಸರಿಯಾಗಿ ಬೌಲಿಂಗ್ ಮಾಡದೇ ಪಾಕಿಸ್ತಾನಕ್ಕೆ ತಮ್ಮ ಇನ್ನಿಂಗ್ಸ್‌ನ ದ್ವಿತೀಯಾರ್ಧದಲ್ಲಿ 91 ರನ್ ಗಳಿಸಲು ಅವಕಾಶ ನೀಡಿದರು ಎಂದು ಕೂಲಿ ಹೇಳಿದರು.
ಭಾರತದ ಆಟಗಾರರು ಈ ಬಾರಿ ಮತ್ತೆ ಉತ್ತಮವಾಗಿ ಆಡುವ ಅವಕಾಶ ಹೊಂದಿದ್ದಾರೆ. ಪಂದ್ಯಾವಳಿ ಮುಂದೆ ಸಾಗಿದಂತೆ ಕಠಿಣ ಎದುರಾಳಿಗಳು ಎದುರಾಗಬಹುದು. ಇಂಥ ಸಂದರ್ಭದಲ್ಲಿ ವೆಸ್ಟ್ ಇಂಡೀಸ್ಗಿಂತ ಉತ್ತಮ ಎದುರಾಳಿ ತಂಡ ಭಾರತಕ್ಕೆ ಮತ್ತೊಂದಿರಲಾರದು. ಏಕೆಂದರೆ ಇತ್ತೀಚೆಗೆ ನಡೆದ 3 ಪಂದ್ಯಗಳ ಟೂರ್ನಮೆಂಟ್ನಲ್ಲಿ ಭಾರತ ವೆಸ್ಟ್ ಇಂಡೀಸ್ ಅನ್ನು ಸೋಲಿಸಿದೆ. ಭಾರತ ಪ್ರಶಸ್ತಿ ಗೆಲ್ಲಬೇಕಾದರೆ ಬ್ಯಾಟಿಂಗ್ ವಿಭಾಗವೂ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ.
ಮೊದಲ ಪಂದ್ಯದಲ್ಲಿ 18ನೇ ಓವರ್‌ನಲ್ಲಿ ಯುವ ರಿಚಾ ಘೋಷ್ ಅವರ ಮೂರು ಬೌಂಡರಿಗಳಿಲ್ಲದಿದ್ದರೆ ಭಾರತಕ್ಕೆ ಗೆಲುವು ಸಾಧ್ಯವಾಗುತ್ತಿರಲಿಲ್ಲ. ಭಾರತವನ್ನು ಚೊಚ್ಚಲ U-19 ವಿಶ್ವಕಪ್ ಪ್ರಶಸ್ತಿಗೆ ಮುನ್ನಡೆಸಿದ ದೊಡ್ಡ ಹಿಟ್ಟರ್ ಆಗಿರುವ ಶಫಾಲಿ ವರ್ಮಾ, ಪಾಕಿಸ್ತಾನದ ವಿರುದ್ಧ ಅಷ್ಟೇ ಪ್ರಭಾವಶಾಲಿಯಾಗಿ ಕಾಣಲಿಲ್ಲ. ದೊಡ್ಡ ಹೊಡೆತಗಳನ್ನು ಪಡೆಯಲು ಆಕೆ ಹೆಣಗಾಡಿದಂತೆ ಕಾಣಿಸಿತು. ಮಂಧಾನ ಅನುಪಸ್ಥಿತಿಯಲ್ಲಿ ಇನ್ನಿಂಗ್ಸ್ ಆರಂಭಿಸಿದ ಯಾಸ್ತಿಕಾ ಭಾಟಿಯಾ ಲಯಕ್ಕಾಗಿ ಹೆಣಗಾಡಿದರೆ, ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಪರಿಣಾಮ ಬೀರಲಿಲ್ಲ.
ತಂಡಗಳು- ಭಾರತ: ಹರ್ಮನ್‌ಪ್ರೀತ್ ಕೌರ್ (ಸಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ರಿಚಾ ಘೋಷ್, ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ದೇವಿಕಾ ವೈದ್ಯ, ರಾಧಾ ಯಾದವ್, ರೇಣುಕಾ ಠಾಕೂರ್, ಅಂಜಲಿ ಸರ್ವಾಣಿ, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡೆ.
ವೆಸ್ಟ್ ಇಂಡೀಸ್: ಹೇಲಿ ಮ್ಯಾಥ್ಯೂಸ್ (ಸಿ), ಶೆಮೈನ್ ಕ್ಯಾಂಪ್‌ಬೆಲ್ (ವಿಸಿ), ಆಲಿಯಾ ಅಲೀನ್, ಶಾಮಿಲಿಯಾ ಕಾನ್ನೆಲ್, ಅಫಿ ಫ್ಲೆಚರ್, ಶಬಿಕಾ ಗಜ್ನಬಿ, ಚಿನೆಲ್ಲೆ ಹೆನ್ರಿ, ತ್ರಿಶನ್ ಹೋಲ್ಡರ್, ಜೈದಾ ಜೇಮ್ಸ್, ಜೆನಾಬಾ ಜೋಸೆಫ್, ಚೆಡಿಯನ್ ನೇಷನ್, ಕರಿಷ್ಮಾ ರಾಮ್‌ಹರಾಕ್, ಸ್ಟಾಕೆರಾ ರಾಮ್‌ಹರಾಕ್, ಸ್ತೆಲೋರ್ , ರಶಾದಾ ವಿಲಿಯಮ್ಸ್.
ಪಂದ್ಯವು 6.30 IST ಕ್ಕೆ (ಫೆ.15, 2023) ಪ್ರಾರಂಭವಾಗುತ್ತದೆ.
ಇದನ್ನೂ ಓದಿ: ಮಹಿಳಾ ಪ್ರೀಮಿಯರ್ ಲೀಗ್ 2023: ಆರ್ಸಿಬಿ ಮೆಂಟರ್ ಆಗಿ ಮೂಗುತಿ ಸುಂದರಿ ಸಾನಿಯಾ ಆಯ್ಕೆ