ನವದೆಹಲಿ: ಹೃದಯ ವೈಫಲ್ಯ ಮತ್ತು ಹೃದಯ ಸಮಸ್ಯೆ ಹೊಂದಿರುವವರಲ್ಲಿ ಯೋಗ ಚಿಕಿತ್ಸೆ ಪ್ರಯೋಜನಕಾರಿಯಾಗಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನಡೆಸಿದ ಅಧ್ಯಯನ ತಿಳಿಸಿದೆ. ಹೃದಯ ವೈಫಲ್ಯ ಎಂಬುದು ಹೃದಯ ರಕ್ತನಾಳ ಸಮಸ್ಯೆಯ ರೂಪ. ಹೃದಯ ಸ್ನಾಯು ತುಂಬಾ ದುರ್ಬಲ ಅಥವಾ ಸರಿಯಾಗಿ ರಕ್ತ ಪಂಪ್ ಮಾಡಲಾಗದೇ ಇರುವ ಸ್ಥಿತಿ. ಇದರಿಂದ ಹೃದಯದಲ್ಲಿ ದ್ರವದ ಶೇಖರಣೆ, ಉಸಿರಾಟದ ಸಮಸ್ಯೆ ಉಂಟಾಗುತ್ತದೆ.
ಕರ್ನಾಟಕದ ಕಸ್ತೂರ್ಬಾ ಕಾಲೇಜ್ ಮತ್ತು ಆಸ್ಪತ್ರೆಯ ಐಸಿಎಂಆರ್ ಸಂಶೋಧಕ ವಿಜ್ಞಾನಿ ಅಜಿತ್ ಸಿಂಗ್ ಅವರು ಈ ಸಂಬಂಧ 75 ರೋಗಿಗಳ ಮೇಲೆ ಅಧ್ಯಯನ ನಡೆಸಿದ್ದಾರೆ. 30 ರಿಂದ 75 ವರ್ಷದ ಭಾಗಿದಾರರ ಮೇಲೆ ಅಧ್ಯಯನ ನಡೆದಿದೆ. ಯೋಗ ಚಿಕಿತ್ಸೆಯೂ ದೈಹಿಕ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಹೃದಯ ವೈಫಲ್ಯದ ರೋಗಿಗಳಲ್ಲಿ ಎಡ ಕುಹರದ ಕಾರ್ಯವನ್ನು ಸುಧಾರಿಸುತ್ತದೆ ಎಂದು ತಿಳಿಸಿದ್ದಾರೆ. ಅಧ್ಯಯನದ ಫಲಿತಾಂಶವನ್ನು ಸೆಪ್ಟೆಂಬರ್ 29ರಿಂದ 30ರವರೆಗೆ ಮನಿಲಾದಲ್ಲಿ ನಡೆಯುವ ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯೋಲಾಜಿ 2023 ಕಾನ್ಫೆರನ್ಸ್ನಲ್ಲಿ ಮಂಡಿಸಲಾಗಿದೆ.
ಎದೆನೋವಿಗೆ ಯೋಗಾಭ್ಯಾಸ ಪ್ರಯೋಜನಕಾರಿ: ಅಧ್ಯಯನದಲ್ಲಿ ಭಾಗಿಯಾದ ರೋಗಿಗಳು ಆರು ಅಥವಾ ಒಂದು ವರ್ಷದೊಳಗೆ ಶೇ 45ರಷ್ಟು ಪರಿಧಮನಿ ಮಧ್ಯಸ್ಥಿಕೆ ಸಾಧನ ಅಳವಡಿಕೆಗೆ ಒಳಗಾಗಿದ್ದಾರೆ. ಈ ಮಧ್ಯಸ್ಥಿತಿಕೆಯ ಗುಂಪಿನಲ್ಲಿನ 35 ಭಾಗಿದಾರರು ವೈದ್ಯಕೀಯ ಚಿಕಿತ್ಸೆ ಮಾರ್ಗದರ್ಶನದಲ್ಲಿ ಯೋಗ ಚಿಕಿತ್ಸೆ ಪಡೆದಿದ್ದಾರೆ. ಮಧ್ಯಸ್ಥಿಕೆ ಹೊಂದಿಲ್ಲದ 40 ಭಾಗಿದಾರರು ವೈದ್ಯಕೀಯ ಚಿಕಿತ್ಸೆ ಮಾರ್ಗದರ್ಶನ ಸ್ವೀಕರಿಸಿದ್ದಾರೆ.
ಹೃದಯ ವೈಫಲ್ಯದ ರೋಗಿಗಳಲ್ಲಿ ಯೋಗ ಚಿಕಿತ್ಸೆ ಯಾವ ರೀತಿ ಪರಿಣಾಮ ಬೀರಿದೆ ಎಂಬುದನ್ನು ತಿಳಿಯಲು ಅನೇಕ ಎಕೋಕಾರ್ಡಿಯೊಗ್ರಾಫಿಕ್ ನಡೆಸಲಾಗಿದೆ. ಯೋಗ ಗುಂಪಿನಲ್ಲಿದ್ದ ಭಾಗಿದಾರರು ಯೋಗ ಚಿಕಿತ್ಸೆಯಾಗಿ ಪ್ರಾಣಾಯಾಮ, ಧ್ಯಾನ ಮತ್ತು ವಿಶ್ರಾಂತಿ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ. ಪ್ರತಿ ಸೆಷನ್ 60 ನಿಮಿಷ ಕಾಲ ಯೋಗಾಭ್ಯಾಸ ನಡೆಸಲಾಗಿದೆ. ಭಾಗಿದಾರರನ್ನು ತರಬೇತಿ ಕೇಂದ್ರದಲ್ಲಿ ಒಂದು ವಾರಗಳ ಕಾಲ ಮೇಲ್ವಿಚಾರಣೆ ನಡೆಸಲಾಗಿದೆ. ಇದಾದ ಬಳಿಕ ಅವರಿಗೆ ಮನೆಯಲ್ಲಿಯೇ ಸ್ವಯಂ ಯೋಗಾಭ್ಯಾಸ ಮಾಡುವಂತೆ ಸೂಚಿಸಲಾಗಿದೆ.
ದೈಹಿಕ ಆರೋಗ್ಯ ಸುಧಾರಣೆ:ವಿಶ್ವ ಆರೋಗ್ಯ ಸಂಸ್ಥೆಯ ಗುಣಮಟ್ಟಣದ ಜೀವನ ಪ್ರಶ್ನಾವಳಿಗಳ ಮೂಲಕ ಸಂಶೋಧಕರು ಮಾಪನ ಮಾಡಿದ್ದಾರೆ. ಈ ವೇಳೆ ಯೋಗ ಗುಂಪಿನಲ್ಲಿ ಸಹಿಷ್ಣುತೆಯ ಸುಧಾರಣೆ, ಶಕ್ತಿ, ಸಮತೋಲನ ಮತ್ತು ಸ್ಥಿರತೆ ಲಕ್ಷಣ, ಜೀವನದ ಗುಣಮಟ್ಟ ಕಂಡು ಬಂದಿದೆ. ಅಲ್ಲದೆ ರೋಗಿಗಳಲ್ಲಿ ದೈಹಿಕ ಮತ್ತು ಮಾನಸಿಕ ಸುಧಾರಣೆ ಕಂಡು ಬಂದಿದೆ. ಆದರೆ, ಸಾಮಾಜಿಕ ಮತ್ತು ಪರಿಸರಾತ್ಮಕ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.
ಈ ಸಂಶೋಧನೆಯು ಹೃದಯ ವೈಫಲ್ಯದ ರೋಗಿಗಳಲ್ಲಿ ವೈದ್ಯಕೀಯ ನಿರ್ವಹಣೆಗೆ ಯೋಗ ಚಿಕಿತ್ಸೆಯನ್ನು ಸೇರಿಸುವುದರಿಂದ ಜೀವನದ ಗುಣಮಟ್ಟದ ಅಭಿವೃದ್ಧಿ ಕಾಣಬಹುದಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ. ಯೋಗ ಅಭ್ಯಾಸ ಮಾಡದ ಗುಂಪಿಗೆ ಹೋಲಿಕೆ ಮಾಡಿದಾಗ ಈ ಗುಂಪಿನ ರೋಗಿಗಳಲ್ಲಿ ರಕ್ತದ ಒತ್ತಡ ಮತ್ತು ಹೃದಯ ಬಡಿತದಲ್ಲಿ ಸುಧಾರಣೆ ಕಂಡಿದೆ ಎಂದು ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಪತ್ತೆಯಾಯ್ತು ವೈಲ್ಡ್ ಪೋಲಿಯೋ ವೈರಸ್; ದೃಢಪಡಿಸಿದ ಸಚಿವಾಲಯ