ಇಂದು ಅಕ್ಟೋಬರ್ 29. ವಿಶ್ವ ಪಾರ್ಶ್ವವಾಯು ದಿನ. ಮೆದುಳಿನ ಆಘಾತದ ಬಗ್ಗೆ ಜಾಗೃತಿ ಮೂಡಿಸಿ, ಸಮಸ್ಯೆ ಕಡಿಮೆ ಮಾಡುವ ಪ್ರಯತ್ನ ವಿಶ್ವಾದ್ಯಂತ ನಡೆಯುತ್ತದೆ. ಈ ಬಾರಿ 'ನಿಮಿಷಗಳು ಜೀವ ಉಳಿಸಬಹುದು' ಎಂಬ ವಿಷಯದೊಂದಿಗೆ ದಿನಾಚರಿಸಲಾಗುತ್ತಿದೆ.
ಪಾರ್ಶ್ವವಾಯು ಒಂದು ಗಂಭೀರ ಅನಾರೋಗ್ಯ ಸ್ಥಿತಿ. ಪ್ರಪಂಚದಾದ್ಯಂತ ಸಂಭವಿಸುವ ಸಾವುಗಳಿಗೆ ಪ್ರಮುಖ ಕಾರಣಗಳಲ್ಲೂ ಒಂದು. ಇದು ಆತಂಕಕಾರಿ ವಿಚಾರವಾಗಿದ್ದು, ವಿಶ್ವದಾದ್ಯಂತ ಜನಜಾಗೃತಿಯ ಅವಶ್ಯಕತೆ ಇದೆ.
ಬ್ರೈನ್ ಅಟ್ಯಾಕ್ ಎಂದರೇನು?:
ಪಾರ್ಶ್ವವಾಯುವನ್ನು ಬ್ರೈನ್ ಅಟ್ಯಾಕ್ ಎಂತಲೂ ಕರೆಯಲಾಗುತ್ತದೆ. ಮೆದುಳಿಗೆ ರಕ್ತ ಪೂರೈಕೆ ಸ್ಥಗಿತಗೊಂಡಾಗ ಅಥವಾ ಮೆದುಳಿನಲ್ಲಿನ ರಕ್ತನಾಳ ಒಡೆದಾಗ ಬ್ರೈನ್ ಅಟ್ಯಾಕ್ ಸಂಭವಿಸುತ್ತದೆ. ಈ ವೇಳೆ ಮೆದುಳಿನ ಭಾಗಗಳು ಹಾನಿಗೊಳಗಾಗುತ್ತವೆ. ಪಾರ್ಶ್ವವಾಯು ಶಾಶ್ವತ ಮೆದುಳಿನ ಹಾನಿ, ದೀರ್ಘಾವಧಿ ಅಂಗವೈಕಲ್ಯ ಅಥವಾ ಸಾವಿಗೆ ಕಾರಣವಾಗಬಹುದು ಎಂದು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆಂಶನ್ಸ್ (CDC) ಹೇಳಿದೆ.
ವಿಧಗಳೇನು?
- ರಕ್ತಕೊರತೆಯ ಸ್ಟ್ರೋಕ್: ರಕ್ತ ಹೆಪ್ಪುಗಟ್ಟುವಿಕೆ ಅಥವಾ ರಕ್ತ ಸಂಚಲನೆ ಆಗದಿದ್ದಾಗ ರಕ್ತಕೊರತೆಯ ಸ್ಟ್ರೋಕ್ ಸಂಭವಿಸುತ್ತದೆ. ಪ್ಲೇಕ್ ಎಂದು ಕರೆಯಲ್ಪಡುವ ಕೊಬ್ಬು ರಕ್ತಸಂಚಾರಕ್ಕೆ ಅಡೆತಡೆ ಉಂಟುಮಾಡಬಹುದು.
- ಹೆಮೊರಾಜಿಕ್ ಸ್ಟ್ರೋಕ್: ಮೆದುಳಿನಲ್ಲಿ ರಕ್ತನಾಳ ಸಿಡಿದಾಗ/ಒಡೆದಾಗ ಹೆಮೊರಾಜಿಕ್ ಸ್ಟ್ರೋಕ್ ಸಂಭವಿಸುತ್ತದೆ. ಇದು ಮೆದುಳಿನ ಅಂಗಾಂಶವನ್ನು ಹಾನಿಗೊಳಿಸುತ್ತದೆ.
ಲಕ್ಷಣಗಳು ಯಾವುವು?
ಮುಖದಲ್ಲಿ ಬದಲಾವಣೆ ಅಥವಾ ಸುಕ್ಕುಗಟ್ಟುವಿಕೆ. ತೋಳಿನ ಬಲ ಕುಂದುವಿಕೆ. ನಿಶ್ಯಕ್ತಿ. ಮಾತನಾಡಲು ತೊಂದರೆ ಆಗುವುದು. ಮುಖ, ತೋಳು, ಕಾಲಿನ ಬಲ ಕ್ಷೀಣಿಸುವುದು. ಅದರಲ್ಲೂ ದೇಹದ ಒಂದು ಬದಿಯ ಅಂಗಾಗದ ಬಲ ಕ್ಷೀಣಿಸುವುದು. ಗೊಂದಲ, ಮಾತನಾಡಲು ಕಷ್ಟ ಅಥವಾ ಮಾತನ್ನು ಅರ್ಥಮಾಡಿಕೊಳ್ಳಲು ತೊಂದರೆ ಆಗುವುದು, ಕಣ್ಣುಗಳಲ್ಲಿ ಸಮಸ್ಯೆ, ತಲೆತಿರುಗುವಿಕೆ, ಯಾವುದೇ ಕಾರಣವಿಲ್ಲದೆ ತೀವ್ರ ತಲೆನೋವು ಮೊದಲಾದವು.
ಸ್ಟ್ರೋಕ್ ತಡೆಗಟ್ಟುವ ಕ್ರಮಗಳಿವು..
ಪಾರ್ಶ್ವವಾಯು ತಡೆಗಟ್ಟುವ ಅನೇಕ ಕ್ರಮಗಳು ಹೃದ್ರೋಗವನ್ನು ತಡೆಗಟ್ಟುವ ರೀತಿಯೇ ಇರುತ್ತವೆ. ಅವುಗಳೆಂದರೆ,
- ಅಧಿಕ ರಕ್ತದೊತ್ತಡ ನಿಯಂತ್ರಣ.
- ಆಹಾರದಲ್ಲಿ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡುವುದು.
- ತಂಬಾಕು ಸೇವನೆ ತ್ಯಜಿಸುವುದು.
- ಮಧುಮೇಹ ನಿಯಂತ್ರಿಸುವುದು.
- ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು.
- ಹಣ್ಣುಗಳು ಮತ್ತು ತರಕಾರಿಗಳ ಹೆಚ್ಚು ಸೇವನೆ.
- ನಿಯಮಿತವಾಗಿ ವ್ಯಾಯಾಮ ಮಾಡುವುದು.
- ಆಲ್ಕೋಹಾಲ್ ಮಿತವಾಗಿ ಸೇವನೆ.
ವಿಶ್ವ ಆರೋಗ್ಯ ಸಂಸ್ಥೆ ಹೇಳೋದೇನು?
ವಿಶ್ವ ಆರೋಗ್ಯ ಸಂಸ್ಥೆ (WHO) ವಾರ್ಷಿಕವಾಗಿ ವಿಶ್ವದಾದ್ಯಂತ 15 ಮಿಲಿಯನ್ ಜನರು ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದಾರೆ ಎಂದು ತಿಳಿಸಿದೆ. ಈ ಪೈಕಿ 5 ಮಿಲಿಯನ್ ಜನರು ಸಾವನ್ನಪ್ಪಿದರೆ, ಇನ್ನೂ 5 ಮಿಲಿಯನ್ ಜನರು ಶಾಶ್ವತವಾಗಿ ಅಂಗವಿಕಲರಾಗುತ್ತಾರೆ. 40 ವರ್ಷದೊಳಗಿನ ಜನರಲ್ಲಿ ಪಾರ್ಶ್ವವಾಯು ಅಸಾಮಾನ್ಯವಾಗಿದೆ. ಸುಮಾರು ಶೇ. 8ರಷ್ಟು ಮಕ್ಕಳಲ್ಲಿ ಪಾರ್ಶ್ವವಾಯು ಸಂಭವಿಸುತ್ತದೆ. ಅದರಲ್ಲೂ ಅಧಿಕ ರಕ್ತದೊತ್ತಡ ಮತ್ತು ತಂಬಾಕು ಸೇವನೆಯು ಅತ್ಯಂತ ಅಪಾಯಕಾರಿ ಅಂಶವಾಗಿದ್ದು, ಇದನ್ನು ನಿಯಂತ್ರಿಸಿದರೆ ಸಮಸ್ಯೆ ತೊಲಗಿಸಬಹುದಾಗಿದೆ. ರಕ್ತದೊತ್ತಡ ಮತ್ತು ಮಾದಕ ವ್ಯಸನ ತ್ಯಜಿಸಿದರೆ ಪಾರ್ಶ್ವವಾಯು ಮುಕ್ತವಾಗಿ ಸ್ವಾಸ್ಥ್ಯ ಸಮಾಜ ಸೃಷ್ಟಿಯಾಗುತ್ತದೆ.