ವಿಶ್ವ ಆರೋಗ್ಯ ದಿನವನ್ನು ಇಂದು ಆಚರಣೆ ಮಾಡಲಾಗುತ್ತಿದೆ. ಈ ಬಾರಿ ನಮ್ಮ ಗ್ರಹ, ನಮ್ಮ ಆರೋಗ್ಯ ಎಂಬ ಘೋಷವಾಕ್ಯವನ್ನು ಇಟ್ಟುಕೊಳ್ಳಲಾಗಿದೆ. ಸಾಂಕ್ರಾಮಿಕ ರೋಗಗಳು ಜಗತ್ತನ್ನು ಬಾಧಿಸುತ್ತಿರುವ ಈ ವೇಳೆ ಮಾನವರು ಮತ್ತು ಗ್ರಹವನ್ನು ಆರೋಗ್ಯವಾಗಿಡುವ ಸಲುವಾಗಿ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಪ್ರತಿ ವರ್ಷ ಪ್ರಪಂಚದಾದ್ಯಂತ 13 ಮಿಲಿಯನ್ಗೂ ಹೆಚ್ಚು ಮಂದಿ ಪರಿಸರದ ಕಾರಣಗಳಿಂದಾಗಿ ಸಾವನ್ನಪ್ಪುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ.
ವಿಶ್ವ ಆರೋಗ್ಯ ದಿನದ ಇತಿಹಾಸ: ವಿಶ್ವಸಂಸ್ಥೆಯಲ್ಲಿ ಡಿಸೆಂಬರ್ 1945ರಲ್ಲಿ ಬ್ರೆಜಿಲ್ ಮತ್ತು ಚೀನಾ ದೇಶಗಳು ಆರೋಗ್ಯಕ್ಕೆ ಸಂಬಂಧಿಸಿದಂತೆ ಎಲ್ಲವನ್ನೂ ಒಳಗೊಳ್ಳುವ ಸ್ವತಂತ್ರ ಮತ್ತು ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯ ರಚನೆ ಮಾಡಬೇಕೆಂದು ಪ್ರಸ್ತಾಪ ಮಾಡಿದವು. ಜುಲೈ 1946ರಲ್ಲಿ ಈ ಪ್ರಸ್ತಾವನೆಯನ್ನು ಅನುಮೋದಿಸಲಾಗಿದ್ದು, 7 ಏಪ್ರಿಲ್ 1948ರಂದು 61 ದೇಶಗಳು ಈ ವಿಶ್ವ ಆರೋಗ್ಯ ಸಂಸ್ಥೆಯ ರಚನೆಯ ಒಪ್ಪಂದಕ್ಕೆ ಸಹಿ ಹಾಕಿದವು. ಈ ದಿನವನ್ನು ಮೊದಲ ಬಾರಿಗೆ ವಿಶ್ವ ಆರೋಗ್ಯ ದಿನವನ್ನಾಗಿ 1949ರಲ್ಲಿ ಜುಲೈ 22ರಂದು ಆಚರಣೆ ಮಾಡಲಾಯಿತು. ನಂತರ ಏಪ್ರಿಲ್ 7ಕ್ಕೆ ವಿಶ್ವ ಆರೋಗ್ಯ ದಿನವನ್ನಾಗಿ ಆಚರಣೆ ಮಾಡಲು ನಿರ್ಧಾರ ಕೈಗೊಳ್ಳಲಾಯಿತು.
ವಿಶ್ವ ಆರೋಗ್ಯ ಸಂಸ್ಥೆಯ ರಚನೆಯ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದ ದಿನವನ್ನೇ ವಿಶ್ವ ಆರೋಗ್ಯ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. 1950ರಿಂದ ವಿಶ್ವ ಆರೋಗ್ಯ ದಿನವನ್ನು ಏಪ್ರಿಲ್ 7ರಂದು ಆಚರಣೆ ಮಾಡಲಾಗುತ್ತಿದೆ. ಪ್ರತಿ ವರ್ಷ ಈ ದಿನವನ್ನು ಆಚರಣೆ ಮಾಡಬೇಕಾದರೆ ಒಂದೊಂದು ಘೋಷವಾಕ್ಯವನ್ನು ಇಟ್ಟುಕೊಳ್ಳಲಾಗುತ್ತದೆ. 2021ರಲ್ಲಿ 'ಪ್ರತಿಯೊಬ್ಬರಿಗೂ ಉತ್ತಮ ಮತ್ತು ಆರೋಗ್ಯಕರ ಜಗತ್ತನ್ನು ನಿರ್ಮಿಸುವುದು' ಎಂಬ ಘೋಷವಾಕ್ಯವನ್ನು ಇಟ್ಟುಕೊಳ್ಳಲಾಗಿತ್ತು. ಈಗ 'ನಮ್ಮ ಗ್ರಹ, ನಮ್ಮ ಆರೋಗ್ಯ' ಎಂಬ ಘೋಷವಾಕ್ಯವನ್ನು ಇಟ್ಟುಕೊಳ್ಳಲಾಗಿದೆ.
ವಿಶ್ವಸಂಸ್ಥೆಯ ಪ್ರಕಾರ ವಿಶ್ವ ಆರೋಗ್ಯ ಸಂಸ್ಥೆಯ ಕಾಳಜಿಗೆ ಕಾರಣವೇನು?
- 20 ವರ್ಷಗಳಲ್ಲಿ ಮೊದಲ ಬಾರಿಗೆ ಜಾಗತಿಕ ಬಡತನದ ಮಟ್ಟವು ಏರುತ್ತಿದೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳತ್ತ ಸಾಗುವ ಪ್ರಗತಿಯನ್ನು ತಡೆಯುತ್ತಿದೆ.
- ಕೆಲವು ದೇಶಗಳಲ್ಲಿ ವಾಸಿಸುವ ಶೇಕಡಾ 60ರಷ್ಟು ಜನರು ಅಗತ್ಯ ಆರೋಗ್ಯ ಸೇವೆಗಳನ್ನೂ ಹೊಂದಿರುವುದಿಲ್ಲ.
- ಕೊಳೆಗೇರಿಗಳಲ್ಲಿ ವಾಸಿಸುವ 1 ಬಿಲಿಯನ್‌ಗಿಂತಲೂ ಹೆಚ್ಚು ಜನರು ಕೊರೊನಾ ಸಾಂಕ್ರಾಮಿಕವನ್ನು ಇನ್ನೂ ಎದುರಿಸುತ್ತಲೇ ಇದ್ದಾರೆ.
- ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಸುಮಾರು 82.5 ಮಿಲಿಯನ್ ಅಥವಾ ವಿಶ್ವದ ಅಂತಾರಾಷ್ಟ್ರೀಯ ವಲಸಿಗರಲ್ಲಿ ಶೇಕಡಾ 32ರಷ್ಟಿದ್ದಾರೆ.
- ಈ ಜನಸಂಖ್ಯೆಯಲ್ಲಿ 5.9 ಮಿಲಿಯನ್ ಮಕ್ಕಳು ಕೊರೊನಾ ಕಾರಣದಿಂದಾಗಿ ಶಾಲೆಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ.
- ಏಷ್ಯಾ ಪೆಸಿಫಿಕ್ ಭಾಗದಲ್ಲಿ ಶೇಕಡಾ 52ರಷ್ಟು ಮಂದಿಗೆ ಇಂಟರ್ನೆಟ್ನಿಂದ ದೂರವಿದ್ದು, ಆರೋಗ್ಯ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ.
ಈಗಿನ ಜಗತ್ತಿನ ಆರ್ಥಿಕತೆಯು ಆದಾಯ, ಸಂಪತ್ತು ಮತ್ತು ಅಧಿಕಾರದ ಅಸಮಾನ ಹಂಚಿಕೆಗೆ ಕಾರಣವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಸಾಕಷ್ಟು ಮಂದಿ ಇನ್ನೂ ಬಡತನದ ಮತ್ತು ಅಸ್ಥಿರ ಜೀವನ ನಡೆಸುತ್ತಿದ್ದಾರೆ. ದೀರ್ಘಾವಧಿ ಹೂಡಿಕೆಗಳು, ಆರೋಗ್ಯ ಬಜೆಟ್‌ಗಳು, ಸಾಮಾಜಿಕ ರಕ್ಷಣೆ ಮತ್ತು ಕಾನೂನು ಒಳಗೊಂಡಂತೆ ಈಗ ಮತ್ತು ಭವಿಷ್ಯದ ಪೀಳಿಗೆಗೆ ಸಮಾನವಾದ ಆರೋಗ್ಯಕ್ಕೆ ಆದ್ಯತೆ ನೀಡಲು ವಿಶ್ವ ಆರೋಗ್ಯ ಸಂಸ್ಥೆಯು ದೇಶಗಳಿಗೆ ಕರೆ ನೀಡುತ್ತಿದೆ.
ಇದನ್ನೂ ಓದಿ: ನಮ್ಮ ಗ್ರಹ, ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈಗಲೇ ಕ್ರಮ ಅಗತ್ಯ: WHO