ಅತಿಯಾದ ಬೊಜ್ಜು ಅನಾರೋಗ್ಯ ಉಂಟು ಮಾಡುವುದರ ಜೊತೆಗೆ ಲೈಂಗಿಕ ಚಟುವಟಿಕೆಯ, ಬಯಕೆ, ಕಾರ್ಯಕ್ಷಮತೆಯ ಮೇಲೆ ಅಸಾಮಾನ್ಯ ಪರಿಣಾಮ ಬೀರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
ಅತಿಯಾದ ಬೊಜ್ಜು ಹೊಂದಿರುವ ಪುರುಷರು ಮತ್ತು ಮಹಿಳೆಯರು ತಮ್ಮ ಲೈಂಗಿಕ ಸಾಮರ್ಥ್ಯದಲ್ಲಿ ಶೇ. 50ರಷ್ಟು ನಕಾರಾತ್ಮಕ ಪರಿಣಾಮ ಎದುರಿಸಲಿದ್ದಾರೆ ಎಂದು 'ದಿ ಜರ್ನಲ್ ಆಫ್ ಸೆಕ್ಷುಯಲ್ ಮೆಡಿಸಿನ್'ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ತಿಳಿಸಲಾಗಿದೆ.
ವ್ಯಾಯಾಮದ ಕೊರತೆ ಮತ್ತು ಬೊಜ್ಜಿನ ಕಾರಣದಿಂದ ಶೇ.43ರಷ್ಟು ಮಹಿಳೆಯರು, 31 ಪ್ರತಿಶತ ಪುರುಷರು ಲೈಂಗಿನ ಇಚ್ಛಾಶಕ್ತಿಯ ಕೊರತೆಯನ್ನು ತೋರಿಸಿದ್ದಾರೆ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (NIH) ತಿಳಿಸಿದೆ.
ವಾರಕ್ಕೆ 6 ಗಂಟೆಗಳವರೆಗೆ ವ್ಯಾಯಾಮ ಮಾಡುವ ಮಹಿಳೆಯರು, ವ್ಯಾಯಾಮ ಮಾಡದ ಮಹಿಳೆಯರಿಗೆ ಹೋಲಿಸಿದರೆ ತಮ್ಮ ಕ್ಲೈಟೋರಲ್ ಅಪಧಮನಿಗಳಲ್ಲಿ ಉತ್ತಮ ಲೈಂಗಿಕ ಬಯಕೆಯನ್ನು ತೋರಿಸಿದ್ದಾರೆ. ವ್ಯಾಯಾಮ ಮಾಡುವವರಲ್ಲಿ ಗಮನಾರ್ಹವಾಗಿ ಹೆಚ್ಚಿನ ಮಟ್ಟದ ಬಯಕೆ, ಪ್ರಚೋದನೆ, ಪರಾಕಾಷ್ಠೆ ಕಂಡು ಬಂದಿದೆ.
ದೇಹದಂಡನೆ ಮಾಡದೇ ಬೊಜ್ಜಿನ ಸಮಸ್ಯೆ ಎದುರಿಸುವ ಜನರ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ನಿಗಾ ಇಡುವುದು ಅಗತ್ಯವಾಗಿದೆ ಎಂದು ಲಾಸ್ ಏಂಜಲೀಸ್‌ನ ಸೀಡರ್ಸ್ ಸಿನೈ ಮೆಡಿಕಲ್ ಸೆಂಟರ್‌ನ ಮೂತ್ರಶಾಸ್ತ್ರಜ್ಞ ಮತ್ತು ಲೈಂಗಿಕ ತಜ್ಞ ಡಾ. ಕ್ಯಾರಿನ್ ಐಲ್ಬರ್ ತಿಳಿಸಿದ್ದಾರೆ.
ಲೈಂಗಿಕತೆಯ ಬಗ್ಗೆ ಬಹಿರಂಗವಾಗಿ ಮಾತನಾಡದಿರುವುದು, ಈ ಬಗ್ಗೆ ಜನರಿಗೆ ಇರುವ ಮುಜುಗರ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಲೈಂಗಿಕತೆಯು ಮಾನವನ ಒಂದು ನಿರ್ಣಾಯಕ ಕ್ರಿಯೆಯಾಗಿದೆ.
ಇದು ಕೇವಲ ಸಂತಾನೋತ್ಪತ್ತಿಗೆ ಮಾತ್ರ ಸೀಮಿತವಾಗಿಲ್ಲ. ಲೈಂಗಿಕ ಚಟುವಟಿಕೆಯು ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯ, ಜೀವನದ ಗುಣಮಟ್ಟ ಮತ್ತು ನಿಕಟ ಸಂಬಂಧಗಳ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಿಯಮಿತವಾಗಿ ವ್ಯಾಯಾಮದಿಂದಾಗುವ ಬದಲಾವಣೆಗಳು
ರಕ್ತ ಪರಿಚಲನೆಯಲ್ಲಿ ಉತ್ತೇಜನ : ನಿಯಮಿತ ವ್ಯಾಯಾಮ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಆರೋಗ್ಯಕರ ರಕ್ತಪರಿಚಲನಾ ವ್ಯವಸ್ಥೆಯನ್ನು ಇದು ಖಚಿತಪಡಿಸುತ್ತದೆ. ದೇಹದಲ್ಲಿ ರಕ್ತದ ಹರಿವನ್ನು ಪ್ರಚೋದಿಸುತ್ತದೆ. ಪುರುಷರಲ್ಲಿ ಇದು ನಿಮಿರುವಿಕೆಗೆ ಸಹಾಯ ಮಾಡುತ್ತದೆ. ಮಹಿಳೆಯರಲ್ಲಿ ಯೋನಿ ನಯಗೊಳಿಸುವಿಕೆ ಮತ್ತು ಚಂದ್ರನಾಡಿ ಸಂವೇದನೆಯನ್ನು ಇನ್ನಷ್ಟು ಉದ್ದೀಪಿಸುತ್ತದೆ ಎಂಬುದು ಅಧ್ಯಯನದಲ್ಲಿ ತಿಳಿದು ಬಂದಿದೆ.
ದೇಹದಲ್ಲಿ ಕ್ರಿಯಾಶೀಲತೆ ಹೆಚ್ಚಿಸುತ್ತೆ: ನಿಯಮಿತವಾಗಿ ಕೆಲಸ, ವ್ಯಾಯಾಮ ಮಾಡಿದಾಗ ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ. ಎನ್ಐಎಚ್ನ ಅಧ್ಯಯನವು ಅರ್ಧ ಗಂಟೆಯ ಲೈಂಗಿಕ ಚಟುವಟಿಕೆಯಲ್ಲಿ ಪುರುಷರಲ್ಲಿ 125 ಕ್ಯಾಲೋರಿ, ಮಹಿಳೆಯರಲ್ಲಿ 100 ಕ್ಯಾಲೋರಿಗಳು ವ್ಯಯವಾಗುತ್ತವೆ. ಇದು ಪ್ರತಿ ಗಂಟೆಗೆ 3 ಮೈಲಿ ನಡೆದಷ್ಟು ಸಮ ಎಂದಿದೆ ಅಧ್ಯಯನ.
ಆತ್ಮವಿಶ್ವಾಸ ಹೊಂದಲು ಸಹಾಯ : ನಿಯಮಿತ ವ್ಯಾಯಾಮದಿಂದ ದೇಹ ಹುರಿಗಟ್ಟಿದಾಗ ಮನುಷ್ಯನಲ್ಲಿ ಆತ್ಮವಿಶ್ವಾಸ ದುಪ್ಪಟ್ಟಾಗುತ್ತದೆ. 'ಆತ್ಮವಿಶ್ವಾಸಕ್ಕಿಂತ ಸೆಕ್ಸಿಯರ್ ಯಾವುದೂ ಇಲ್ಲ' ಎಂದು ಐಲ್ಬರ್ ಹೇಳಿದ್ದಾರೆ.
2019ರಲ್ಲಿ ಜರ್ನಲ್ ಆಫ್ ಪರ್ಸನಾಲಿಟಿಯಲ್ಲಿ ಪ್ರಕಟವಾದ ಅಧ್ಯಯನವು ಹೆಚ್ಚು ಆತ್ಮವಿಶ್ವಾಸ ಹೊಂದಿರುವ ಪುರುಷರಲ್ಲಿ ಹೆಚ್ಚಿನ ರೊಮ್ಯಾಂಟಿಕ್ ಆಸಕ್ತಿಯನ್ನು ಮಹಿಳೆಯರು ಮನಗಾಣಿಸಿದ್ದಾರೆ ಎಂದು ತಿಳಿಸಿದೆ.
ಲೈಂಗಿಕ ಆರೋಗ್ಯವನ್ನು ಸುಧಾರಿಸಲು ಎಷ್ಟು ಸಮಯದವರೆಗೆ ವ್ಯಾಯಾಮ ಅಗತ್ಯ ಎಂಬುದು ಆಯಾ ವ್ಯಕ್ತಿಯ ಸಾಮರ್ಥ್ಯಕ್ಕನುಗುಣವಾಗಿ ಅವಲಂಬಿತವಾಗಿರುತ್ತದೆ. ನಿಯಮಿತವಾದ ವೇಗದ ನಡಿಗೆಯಂತಹ ಅಲ್ಪಾವಧಿಯ ವ್ಯಾಯಾಮವು ಲೈಂಗಿಕ ಆಸಕ್ತಿಯನ್ನು ಸುಧಾರಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.