ಆರೋಗ್ಯ ಕ್ಷೇತ್ರದಲ್ಲಾಗಿರುವ ಭಾರೀ ಸುಧಾರಣೆ ಪರಿಣಾಮ ಯುನೈಟೆಡ್ ಸ್ಟೇಟ್ ಮಹಿಳೆಯರ ಸರಾಸರಿ ಜೀವಿತಾವಧಿ 81 ಹಾಗೂ ಪುರುಷರ ಸರಾಸರಿ ಜೀವಿತಾವಧಿ 76 ವರ್ಷಗಳು ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ತನ್ನ ವರದಿಯಲ್ಲಿ ತಿಳಿಸಿದೆ.
ಪ್ರಪಂಚದಾದ್ಯಂತ ಮಹಿಳೆಯರೇ ಹೆಚ್ಚು ಕಾಲ ಬದುಕುತ್ತಾರೆ ಎಂದು ಅನೇಕ ವರದಿಗಳು ತಿಳಿಸಿವೆ. ಹಾಗಾದರೆ, ಪುರುಷರಿಗಿಂತ ಮಹಿಳೆಯರ ಜೀವಿತಾವಧಿ ಅಧಿಕವಾಗಲು ಕಾರಣವೇನು ಎಂಬುದಕ್ಕೆ ದಕ್ಷಿಣ ಡೆನ್ಮಾರ್ಕ್ ವಿಶ್ವವಿದ್ಯಾಲಯದ ಜನಸಂಖ್ಯಾಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ವರ್ಜೀನಿಯಾ ಜರುಲ್ಲಿ ತಮ್ಮ ಅಭಿಪ್ರಾಯ ನೀಡಿದ್ದಾರೆ.
ಲೈಂಗಿಕ ಹಾರ್ಮೋನುಗಳಲ್ಲಿನ ವ್ಯತ್ಯಾಸದಿಂದಾಗಿ ಸಿಸ್ಜೆಂಡರ್ ಮಹಿಳೆಯರು ಸಿಸ್ಜೆಂಡರ್ ಪುರುಷರಿಗಿಂತ ಹೆಚ್ಚು ಈಸ್ಟ್ರೊಜೆನ್ ಮತ್ತು ಕಡಿಮೆ ಟೆಸ್ಟೋಸ್ಟೆರಾನ್ ಅನ್ನು ಉತ್ಪಾದಿಸುತ್ತಾರೆ. ಈಸ್ಟ್ರೊಜೆನ್ ಹೃದಯರಕ್ತನಾಳದ ಕಾಯಿಲೆಯಂತಹ ಹಲವಾರು ರೋಗಗಳ ವಿರುದ್ಧ ರಕ್ಷಣೆ ನೀಡುತ್ತದೆ ಎಂದು 2017ರ ಬಯಾಲಜಿ ಆಫ್ ಸೆಕ್ಸ್ ಡಿಫರೆನ್ಸಸ್ ಅಧ್ಯಯನದಲ್ಲಿ ತಿಳಿಸಿದೆ ಎಂದು ಜರುಲ್ಲಿ ಹೇಳಿದ್ದಾರೆ.
ಜರ್ನಲ್ ನೇಚರ್ ಮೆಡಿಸಿನ್ 2020ರ ಅಧ್ಯಯನದ ಪ್ರಕಾರ, ಹೆಚ್ಚಿನ ಮಟ್ಟದ ಟೆಸ್ಟೋಸ್ಟೆರಾನ್ ಮಹಿಳೆಯರಲ್ಲಿ ಎಂಡೊಮೆಟ್ರಿಯಲ್ ಮತ್ತು ಸ್ತನ ಕ್ಯಾನ್ಸರ್ ಹಾಗೂ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್‌ನಂತಹ ಕೆಲವು ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಟೆಸ್ಟೋಸ್ಟೆರಾನ್ ಅಪಾಯಕಾರಿ ನಡವಳಿಕೆಯು ಕಿರಿಯ ವಯಸ್ಸಿನಲ್ಲಿಯೇ ಸಾಯುವ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ಜರುಲ್ಲಿ ತಿಳಿಸಿದ್ದಾರೆ.