ಸಾಮಾನ್ಯವಾಗಿ ಬಂಜೆತನ ಸಮಸ್ಯೆ ಮಹಿಳೆಯರಿಗೆ ಮಾತ್ರವೇ ಸಂಬಂಧಿಸಿದ್ದು ಎಂಬುದಾಗಿ ಭಾವಿಸುತ್ತೇವೆ. ಆದರೆ ಪುರುಷರು ಸಹ ಬಂಜೆತನಕ್ಕೆ ಒಳಗಾಗಬಹುದು. ಹೀಗಾಗಿ ಬಂಜೆತನವು ಮಹಿಳೆಯರಿಗೆ ಮಾತ್ರ ಸಂಬಂಧಿಸಿದ ವಿಷಯವಲ್ಲ ಎಂಬುದು ಸತ್ಯ.
ಹೌದು, ಕೆಲ ಸಂದರ್ಭದಲ್ಲಿ ಆರೋಗ್ಯವಾಗಿದ್ದರೂ, ಮಹಿಳೆಯೊಬ್ಬಳು ಗರ್ಭ ಧರಿಸಲು ಸಾಧ್ಯವಾಗದಂತಹ ಸನ್ನಿವೇಶ ಎದುರಾಗುತ್ತದೆ. ಆಕೆ ಗರ್ಭ ಧರಿಸುವ ಎಲ್ಲಾ ಸಾಮರ್ಥ್ಯ ಹಾಗೂ ಬಂಜೆತನ ಸಮಸ್ಯೆಯೇ ಆಕೆಯಲ್ಲಿ ಇಲ್ಲದಿದ್ದಾಗ ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದುರಾಗುತ್ತದೆ. ಇದಕ್ಕೆ ಕಾರಣ ಆಕೆಯ ಸಂಗಾತಿ. ಸ್ತ್ರೀಯ ಗರ್ಭಧಾರಣೆಯನ್ನು ಸಕ್ರಿಯಗೊಳಿಸಲು ಆಕೆಯ ಸಂಗಾತಿ ಪ್ರಾಯೋಗಿಕವಾಗಿ ಅಸಮರ್ಥನಾದಾಗ ಮಹಿಳೆ ಗರ್ಭಧರಿಸುವುದು ಅಸಾಧ್ಯವಾಗುತ್ತದೆ. ಇದನ್ನೇ ಪುರುಷ ಬಂಜೆತನ ಅಥವಾ Male infertility ಎಂದು ಕರೆಯುತ್ತೇವೆ.
ಪುರುಷರಲ್ಲಿ ಕಂಡುಬರುವ ಈ ಸಮಸ್ಯೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈಟಿವಿ ಭಾರತವು ಹೈದರಾಬಾದ್ ಮೂಲದ ವೈದ್ಯರಾದ ಡಾ. ರಾಹುಲ್ ರೆಡ್ಡಿ ಅವರೊಂದಿಗೆ ಮಾತನಾಡಿದೆ. ಡಾ. ರಾಹುಲ್ ರೆಡ್ಡಿ, ಪುರುಷ ಬಂಜೆತನದ ಕಾರಣಗಳು ಹಾಗೂ ಈ ಬಗೆಗಿನ ಹೆಚ್ಚಿನ ಮಾಹಿತಿಯನ್ನು ತಿಳಿಸಿದ್ದಾರೆ.
ಪುರುಷ ಬಂಜೆತನಕ್ಕೆ ಪ್ರಮುಖ ಕಾರಣ, ಕಡಿಮೆ-ವೀರ್ಯಾಣುಗಳ ಸಂಖ್ಯೆ(low-sperm count) ಅಥವಾ ಅನಾರೋಗ್ಯಕರ ವೀರ್ಯ(unhealthy sperms) ಎಂದು ಡಾ. ರೆಡ್ಡಿ ಹೇಳುತ್ತಾರೆ. ವಯಸ್ಸು, ಅನಿಯಮಿತ ಜೀವನ ಶೈಲಿ, ಅತಿಯಾದ ಒತ್ತಡ ಅಥವಾ ಅನುವಂಶಿಕ ಕಾರಣಗಳಿಂದಾಗಿ, ಪುರುಷ ದೇಹವು ಹೆಣ್ಣು ಮೊಟ್ಟೆಗಳನ್ನು ಫಲವತ್ತಾಗಿಸಲು ಸಾಕಷ್ಟು ಅಥವಾ ಆರೋಗ್ಯಕರ ವೀರ್ಯಾಣುಗಳನ್ನು ಉತ್ಪಾದಿಸಲು ಅಸಮರ್ಥವಾಗುತ್ತದೆ ಎಂದು ಅವರು ವಿವರಿಸುತ್ತಾರೆ. ದೇಹದಲ್ಲಿ ವೀರ್ಯಾಣುಗಳ ಕಡಿಮೆ ಉತ್ಪಾದನೆ, ಅನಾರೋಗ್ಯಕರ ವೀರ್ಯಗಳು ಮತ್ತು ತಪ್ಪಾದ ವೀರ್ಯಗಳಿಂದ ಪುರುಷ ಬಂಜೆತನ ಆಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಈ ಸಮಸ್ಯೆಯನ್ನು ಮೂರು ವಿಧಗಳಾಗಿ ವಿಂಗಡಿಸಬಹುದು:
ಅಜೂಸ್ಪರ್ಮಿಯಾ: ಪುರುಷನ ವೀರ್ಯ (ಸಂಭೋಗ ಸಮಯದಲ್ಲಿ ಸ್ಖಲನಗೊಳ್ಳುವ ದ್ರವ) ಯಾವುದೇ ಗುಣಮಟ್ಟದ ವೀರ್ಯಾಣುವನ್ನು ಹೊಂದಿರುವುದಿಲ್ಲ, ಅಥವಾ ತುಂಬಾ ಕಡಿಮೆ ಗುಣಮಟ್ಟದ ವೀರ್ಯಾಣುಗಳನ್ನು ಹೊಂದಿರಬಹುದು. ಇದರಿಂದಾಗಿ ಸ್ತ್ರೀ ದೇಹದಲ್ಲಿನ ಮೊಟ್ಟೆಗಳು ಫಲವತ್ತಾಗದೆ ಗರ್ಭಧಾರಣೆ ಆಗುವುದಿಲ್ಲ.
ಆಲಿಗೋಸ್ಪೆರ್ಮಿಯಾ: ಅಂದರೆ ಸಾಮಾನ್ಯವಾಗಿ ಪುರುಷರ ದೇಹದಲ್ಲಿ ಎಷ್ಟು ವೀರ್ಯಾಣುವಿರಬೇಕೋ, ಅದಕ್ಕಿಂತ ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುತ್ತದೆ. ಡಾ. ರೆಡ್ಡಿ ಪ್ರಕಾರ, ವಯಸ್ಕ ಪುರುಷನ ಸಾಮಾನ್ಯ ವೀರ್ಯಾಣುಗಳ ಸಂಖ್ಯೆ ಪ್ರತಿ ಮಿಲಿಲೀಟರ್ ವೀರ್ಯಕ್ಕೆ ಒಂದೂವರೆ ಕೋಟಿ ವೀರ್ಯ ಕೋಶಗಳು ಅಥವಾ ಕಣಗಳಾಗಿರಬೇಕು. ಈ ಸಂಖ್ಯೆಯಲ್ಲಿ ಕಡಿಮೆಯಾದರೆ ಅದು ಬಂಜೆತನಕ್ಕೆ ಕಾರಣವಾಗಬಹುದು.
ವರಿಕೋಸೆಲ್: ಇದು ಪುರುಷರ ವೃಷಣಗಳನ್ನು ಹೊಂದಿರುವ ಸಡಿಲ ಚೀಲದೊಳಗೆ ರಕ್ತನಾಳಗಳ ಹಿಗ್ಗುವಿಕೆಯನ್ನು ಸೂಚಿಸುತ್ತದೆ. ಅಂದರೆ, ವರಿಕೋಸೆಲ್ ಕಡಿಮೆ ವೀರ್ಯ ಉತ್ಪಾದನೆ ಅಥವಾ ವೀರ್ಯದ ಗುಣಮಟ್ಟ ಕಡಿಮೆಯಾಗಿ ಬಂಜೆತನಕ್ಕೆ ಕಾರಣವಾಗುತ್ತದೆ.
ದೇಹದಲ್ಲಿ ಹಾರ್ಮೋನುಗಳ ಅಸಮತೋಲನವನ್ನು ಉಂಟುಮಾಡುವ ಒಂದು ಆನುವಂಶಿಕ ಅಂಶದಿಂದಲೂ ಬಂಜೆತನಕ್ಕೆ ಕಾರಣವಾಗಬಹುದು.
ಬಂಜೆತನದ ಲಕ್ಷಣಗಳು ಯಾವುವು ಗೊತ್ತಾ?
- ನಿಮಿರುವಿಕೆಯ ಸಮಸ್ಯೆಗಳು ಮತ್ತು ಸಣ್ಣ ಪ್ರಮಾಣದ ಸ್ಖಲನ
- ಕಡಿಮೆ ಸಂಭೋಗ ಅಥವಾ ಸೆಕ್ಸ್ ಆಸಕ್ತಿ
- ವೃಷಣ ಭಾಗದಲ್ಲಿ ನೋವು ಅಥವಾ ಊತ
- ಈ ಹಿಂದೆಯೇ ಇರುವ ಲೈಂಗಿಕ ಸಮಸ್ಯೆಗಳು
- ತೊಡೆಸಂದು ಅಥವಾ ಶಿಶ್ನ ಶಸ್ತ್ರಚಿಕಿತ್ಸೆಯ ಸಮಸ್ಯೆಗಳು
ಆರೋಗ್ಯ ಸಮಸ್ಯೆ ಮತ್ತು ಜೀವನಶೈಲಿಯ ಕಾರಣಗಳು...
- ಮಾದಕ ದ್ರವ್ಯ ಬಳಕೆ
- ತಂಬಾಕು ಮತ್ತು ಮದ್ಯದ ಅತಿಯಾದ ಸೇವನೆ
- ಭಾವನಾತ್ಮಕ ಮತ್ತು ಮಾನಸಿಕ ಸಮಸ್ಯೆಗಳು
- ಅತಿಯಾದ ಮಾನಸಿಕ ಒತ್ತಡ
- ಬೊಜ್ಜು
- ಖಿನ್ನತೆ
ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳು ಯಾವುವು?
- ತಂಬಾಕು ಮತ್ತು ಮದ್ಯಪಾನದಿಂದ ದೂರವಿರಿ
- ನಿಮ್ಮ ತೂಕವನ್ನು ಪರಿಶೀಲಿಸುತ್ತಿರಿ
- ಮಾದಕ ದ್ರವ್ಯ ಸೇವನೆಯನ್ನು ಬಿಟ್ಟುಬಿಡಿ
- ಸಂತಾನಹರಣ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬೇಡಿ
- ವೃಷಣಗಳ ತಾಪ ಹೆಚ್ಚುವುದಕ್ಕೆ ಕಾರಣವಾಗುವ ವಿಷಯಗಳನ್ನು ತಪ್ಪಿಸಿ
- ಹೆಚ್ಚು ಲೋಹಗಳು, ಕೀಟನಾಶಕಗಳು ಮತ್ತು ಜೀವಾಣುಗಳನ್ನು ಒಳಗೊಂಡಿರುವ ಪರಿಸರದಿಂದ ದೂರವಿರಿ
- ಒತ್ತಡವನ್ನು ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಿ