ಮಳೆಗಾಲ ಆರಂಭವಾಗಿದೆ. ಇನ್ನು ಜ್ವರ, ಶೀತ, ಕೆಮ್ಮು ಸಾಮಾನ್ಯವಾಗಿ ಹೆಚ್ಚಿನವರಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಮುನ್ನೆಚ್ಚರಿಕೆ ವಹಿಸೋದು, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಅತ್ಯಗತ್ಯವಾಗಿದೆ.
ಪೀರ್ - ರಿವ್ಯೂಡ್ ಜರ್ನಲ್ ದಿ ಲ್ಯಾನ್ಸೆಟ್ ಮೈಕ್ರೋಬ್‌ನಲ್ಲಿ ಪ್ರಕಟವಾದ ಅಧ್ಯಯನವೊಂದು ಟೈಫಾಯಿಡ್ ಜ್ವರವನ್ನು ಉಂಟುಮಾಡುವ ಬ್ಯಾಕ್ಟೀರಿಯ ಸಾಲ್ಮೊನೆಲ್ಲಾ ಎಂಟರಿಕಾ ಸೆರೋಟೈಪ್ ಟೈಫಿ (ಎಸ್. ಟೈಫಿ) ಬಗ್ಗೆ ಎಚ್ಚರಿಸಿದೆ.
1990ರ ದಶಕದಿಂದ ದಕ್ಷಿಣ ಏಷ್ಯಾದ ದೇಶಗಳಿಂದ ವಿಶೇಷವಾಗಿ ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಇತರ ದೇಶಗಳಿಗೆ ಟೈಫಿ 200 ಪಟ್ಟು ಹೆಚ್ಚು ಹರಡಿದೆ ಎಂದು ಕಂಡು ಬಂದಿದೆ. ವಿಶ್ವಾದ್ಯಂತ ಪ್ರತಿ ವರ್ಷ ಸಂಭವಿಸುವ 1.10 ಕೋಟಿ ಟೈಫಾಯಿಡ್ ಪ್ರಕರಣಗಳಲ್ಲಿ ಶೇ.70ರಷ್ಟು ದಕ್ಷಿಣ ಏಷ್ಯಾದಿಂದ ವರದಿಯಾಗಿವೆ.
ಟೈಫಾಯಿಡ್ ಜ್ವರವನ್ನು ಸಾಮಾನ್ಯ ಜ್ವರ ಎಂದು ಭಾವಿಸಿ ಕಡೆಗಣಿಸುವಂತಿಲ್ಲ. ರೋಗ ಲಕ್ಷಣಗಳು ಅನುಭವಕ್ಕೆ ಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ. ಟೈಫಾಯಿಡ್ ಜ್ವರ ಪ್ರಪಂಚದಾದ್ಯಂತ ಪ್ರತಿ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: ಮಾನ್ಸೂನ್ನಲ್ಲಿ ತ್ವಚೆಯ ಆರೈಕೆ ಹೇಗೆ? : ಇಲ್ಲಿವೆ ಕೆಲ ಸಲಹೆಗಳು!
ಟೈಫಾಯಿಡ್ ರೋಗಿಗಳಿಗೆ ಮೊದಲು ಆಂಪಿಸಿಲಿನ್, ಕ್ಲೋರಂಫೆನಿಕೋಲ್ ಮತ್ತು ಟ್ರಿಮೆಥೋಪ್ರಿಮ್ ಅಥವಾ ಸಲ್ಫಮೆಥೋಕ್ಸಜೋಲ್‌ನಂತಹ ಆ್ಯಂಟಿ ಬಯೋಟಿಕ್ಸ್/ಪ್ರತಿಜೀವಕಗಳನ್ನು ನೀಡಲಾಗುತ್ತದೆ. ಜೊತೆಗೆ ಮನೆಮದ್ದುಗಳು ಕೂಡ ಚುರುಕಾಗಿ ಕೆಲಸ ಮಾಡುತ್ತವೆ. ಒಟ್ಟಿನಲ್ಲಿ ಮಳೆಗಾಲದಲ್ಲಿ ತಂಡಿಗೆ ಮೈಯೊಡ್ಡದೇ ಆರೋಗ್ಯ ರಕ್ಷಣೆಯೆಡೆಗೆ ಗಮನ ಕೊಡಬೇಕಿದೆ.