ನವದೆಹಲಿ: ಜಂಕ್ಫುಡ್ ಸೇವನೆ, ಒತ್ತಡ, ಅನಾರೋಗ್ಯಕರ ಜೀವನಶೈಲಿ ಮತ್ತು ಜೀನ್ಸ್ ಭಾರತದಲ್ಲಿ ಪ್ರಮುಖವಾಗಿ ಉದರ ಕ್ಯಾನ್ಸರ್ ಏರಿಕೆಯಾಗಲು ಕಾರಣವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಇದು ಗ್ಯಾಸ್ಟ್ರಿಕ್ ಕ್ಯಾನ್ಸರ್ ಎಂದೂ ಪರಿಚಿತವಾಗಿದೆ. ಕಳೆದೊಂದು ದಶಕದಿಂದ ದೇಶದಲ್ಲಿ ಹೊಟ್ಟೆ ಕ್ಯಾನ್ಸರ್ ಪ್ರಕರಣಗಳು ಗಂಭೀರ ಸ್ವರೂಪದಲ್ಲಿ ಏರಿಕೆ ಕಂಡಿವೆ.
ಭಾರತದಲ್ಲಿ ಹೆಚ್ಚು ಏಕೆ?: ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಹೊಟ್ಟೆ ಕ್ಯಾನ್ಸರ್ ದರ ಗಮನಾರ್ಹವಾಗಿ ಹೆಚ್ಚಳ ಕಂಡಿದೆ. ಇದಕ್ಕೆ ಮುಖ್ಯ ಕಾರಣ ವಿಶೇಷ ಆಹಾರ ಪದ್ಧತಿ. ಭಾರತೀಯ ಆಹಾರದಲ್ಲಿ ಹೆಚ್ಚಿನ ಮಸಾಲೆ, ಸಂಸ್ಕರಿತ ಆಹಾರ ಮತ್ತು ಆಲ್ಕೋಹಾಲ್ ಸೇವನೆಗಳು ಇದಕ್ಕೆ ಕಾರಣವಾಗಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ವೈದ್ಯರು ಹೇಳುವುದೇನು?: ಹೊಟ್ಟೆ ಕ್ಯಾನ್ಸರ್ 50 ವರ್ಷದ ಬಳಿಕ ತಮ್ಮ ಪರಿಣಾಮವನ್ನು ತೋರಿಸುತ್ತದೆ. ಕೆಲವರಲ್ಲಿ ಸರಾಸರಿ 60 ವರ್ಷದಲ್ಲಿ ಇದು ಪತ್ತೆಯಾಗಿದೆ. ಮಹಿಳೆಯರಿಗಿಂತ ಪುರುಷರಲ್ಲಿ ಅತಿ ಹೆಚ್ಚು. ಪುರುಷರ ಜೀವನ ಶೈಲಿಯ ಜೊತೆಗೆ ಧೂಮಪಾನ ಮತ್ತು ಆಲ್ಕೋಹಾಲ್ ಸೇವನೆ ಇದಕ್ಕೆ ಕಾರಣವಾಗುತ್ತಿದೆ ಎನ್ನುತ್ತಾರೆ ಫರಿದಾಬಾದ್ನ ಅಮೃತಾ ಆಸ್ಪತ್ರೆಯ ಗ್ಯಾಸ್ಟ್ರೋಇಂಟೆಸ್ಟಿನಿಯಲ್ ಸರ್ಜನ್ ಎಚ್ಒಡಿ ಡಾ.ಪುನೀತ್ ಧಾರ್.
ಭೌಗೋಳಿಕವಾಗಿ ಮಸಾಲೆ, ಉಪ್ಪು ಅಥವಾ ಸಂಸ್ಕರಿತ ಆಹಾರ ಅಭ್ಯಾಸಗಳಿರುವ ಪ್ರದೇಶದಲ್ಲಿ ಈ ರೀತಿಯ ಪ್ರಕರಣಗಳು ಕಂಡುಬರುತ್ತವೆ. ಹಾರ್ಮೋನ್ ವ್ಯತ್ಯಾಸ ಮತ್ತು ಜೆನೆಟಿಕ್ ಅಂಶಗಳು ಇದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದಾಗ್ಯೂ ಮತ್ತಷ್ಟು ಸಂಶೋಧನೆಗಳ ಅವಶ್ಯಕತೆ ಇದೆ ಎಂದು ಅವರು ವಿವರಿಸಿದರು.
ಲಕ್ಷಣಗಳು: ತಡೆಯಲಾಗದ ಹೊಟ್ಟೆ ನೋವು, ಹೆಚ್ಚಿನ ತೂಕ ನಷ್ಟ, ಹೊಟ್ಟೆ ಹಸಿವು ಕ್ಷೀಣಿಸುವುದು, ನುಂಗುವುದಕ್ಕೆ ಕಷ್ಟವಾಗುವುದು, ತಲೆ ಸುತ್ತುವಿಕೆ, ವಾಂತಿ ಇವು ಹೊಟ್ಟೆ ಕ್ಯಾನ್ಸರ್ನ ಲಕ್ಷಣಗಳು. ಆರಂಭಿಕ ಹಂತದ ಹೊಟ್ಟೆ ಕ್ಯಾನ್ಸರ್ನ ಲಕ್ಷಣಗಳು ಗಮನಕ್ಕೆ ಬರುವುದಿಲ್ಲ. ಆದರೆ ಕೆಲವು ಹೆಚ್ಚಿನ ಅಪಾಯ ಹೊಂದಿರುವ ರೋಗಿಗಳು ನಿರಂತರ ತಪಾಸಣೆಗೆ ಒಳಗಾಗುವುದು ಮುಖ್ಯವಾಗುತ್ತದೆ ಎನ್ನುತ್ತಾರೆ ವೈದ್ಯರು.
ಗ್ಯಾಸ್ಟ್ರಿಕ್ ಕ್ಯಾನ್ಸರ್ ಎಂಬುದು ಕೇವಲ ಒಂದೇ ರೋಗ ಅಥವಾ ಒಂದೇ ಅಂಶದ ಕಾರಣಕ್ಕೆ ಬರುವುದಲ್ಲ. ಇದರಲ್ಲಿ ಆನುವಂಶಿಕತೆ, ಸಾಮಾಜಿಕ-ಸಂಸ್ಕೃತಿ ಮತ್ತು ಪರಿಸರ ವಿಚಾರಗಳು ಸೇರಿರುತ್ತವೆ. ಧೂಮಪಾನ, ಆಲ್ಕೋಹಾಲ್, ನೈಟ್ರೇಟ್ಸ್ ಮತ್ತು ಹೆಲಿಕೊಬ್ಯಾಕ್ಟರ್ ಪೈಲೊರಿ ಸೋಂಕು ಸೇರಿದಂತೆ ಅನೇಕ ಅಂಶಗಳಿತ್ತವೆ ಎಂದಿದ್ದಾರೆ ಗುರುಗ್ರಾಮದ ಮರೆಂಗೊ ಏಷ್ಯಾ ಆಸ್ಪತ್ರೆಯ ಡಾ.ಹರೀಶ್ ವರ್ಮಾ.
ಪರಿಹಾರ: ಆಹಾರದಲ್ಲಿ ಸ್ವಚ್ಛತೆ, ಆಹಾರ ಸಂರಕ್ಷಣ ತಂತ್ರಗಳು ಗ್ಯಾಸ್ಟ್ರಿಕ್ ಕ್ಯಾನ್ಸರ್ ಕಡಿಮೆ ಮಾಡಲು ಇರುವ ಪ್ರಮುಖ ಅಂಶಗಳಾಗಿವೆ. ಆಹಾರದ ಅಭ್ಯಾಸಗಳನ್ನು ಉತ್ತಮವಾಗಿಸಿಕೊಂಡು, ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವ ಮೂಲಕ ಹೊಟ್ಟೆ ಕ್ಯಾನ್ಸರ್ ಅಪಾಯ ಕಡಿಮೆ ಮಾಡಬಹುದು ಎಂದು ಸಲಹೆ ನೀಡುತ್ತಾರೆ ವೈದ್ಯರು. (ಐಎಎನ್ಎಸ್)
ಇದನ್ನೂ ಓದಿ: ಹೆಚ್ಚುತ್ತಿರುವ ಚರ್ಮದ ಕ್ಯಾನ್ಸರ್: ವಿಶ್ವಸಂಸ್ಥೆ ಕಳವಳ