ವ್ಯಾಯಾಮದ ಕೊರತೆ, ಧೂಮಪಾನ, ಬೆಳಗ್ಗೆ 9ರಿಂದ ಸಂಜೆ 5ರವರೆಗೆ ದೀರ್ಘ ಗಂಟೆಗಳ ಕಾಲ ಕುಳಿತಿರುವುದು, ಬಿಡುವಿಲ್ಲದೇ ಹೆಚ್ಚು ಸಮಯ ಕೆಲಸ ಮಾಡುವುದರಿಂದಾಗಿ ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ಜನರು ತುತ್ತಾಗುವ ಸಾಧ್ಯತೆಯಿದೆ. ಇದರಿಂದ ಯುವಕರು ಪಾರ್ಶ್ವವಾಯುವಿಗೂ ತುತ್ತಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) ನರವಿಜ್ಞಾನದ (neurology) ಎಚ್ಒಡಿ ಪ್ರೊ.ಆರ್.ಕೆ ಗಾರ್ಗ್ ಪ್ರಕಾರ, "ಅಧಿಕ ರಕ್ತದೊತ್ತಡದಿಂದಾಗಿ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಪಾರ್ಶ್ವವಾಯು (ಸ್ಟ್ರೋಕ್) ಪ್ರಕರಣಗಳು ಹೆಚ್ಚಿವೆ" ಎಂದು ತಿಳಿಸಿದ್ದಾರೆ.
"40 ರಿಂದ 50 ವರ್ಷ ವಯಸ್ಸಿನ ಜನರು ತಮ್ಮ ವೃತ್ತಿಜೀವನದಲ್ಲಿ ಮುಂದುವರೆಯಲು ಶ್ರಮಿಸುತ್ತಿದ್ದಾರೆ. ಕಚೇರಿಯಲ್ಲಿ ಹೆಚ್ಚಿದ ಕೆಲಸದ ಒತ್ತಡ, ಮನೆಯಲ್ಲಿ ಅನಿಯಮಿತ ಆಹಾರ ಪದ್ಧತಿ ಮತ್ತು ದೈಹಿಕ ವ್ಯಾಯಾಮದ ಕೊರತೆಯಿಂದ ಅವರು ಅಧಿಕ ರಕ್ತದೊತ್ತಡ ಮತ್ತು ಮಧುಮೇಹಕ್ಕೆ ಗುರಿಯಾಗುತ್ತಾರೆ. ಅಧಿಕ ರಕ್ತದೊತ್ತಡವು ಅವರನ್ನು ಪಾರ್ಶ್ವವಾಯುವಿಗೆ ಗುರಿಯಾಗುವಂತೆ ಮಾಡುತ್ತದೆ" ಎಂದು ಗಾರ್ಗ್ ವಿವರಿಸಿದ್ದಾರೆ.
"ಇಂತಹ ರೋಗಲಕ್ಷಣಗಳು ಕಂಡುಬಂದಾಗ ಜನರು ಕೆಲಸದ ಹೊರೆಯಿಂದ ಎಂದು ಭಾವಿಸುತ್ತಾರೆ. ಆದರೆ, ಸ್ಟ್ರೋಕ್ ಬರುವುದಕ್ಕೂ ಮುಂಚಿನ ಎಚ್ಚರಿಕೆ ಗಂಟೆಗಳು ಎಂಬುದು ಅವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ಈ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಬೇಕು" ಎಂದು ಹೇಳಿದರು.
"ಸ್ಟ್ರೋಕ್ನ ಲಕ್ಷಣಗಳೆಂದರೆ, ಮುಖ, ತೋಳು ಅಥವಾ ಕಾಲಿನಲ್ಲಿ, ವಿಶೇಷವಾಗಿ ದೇಹದ ಒಂದು ಬದಿಯಲ್ಲಿ ಹಠಾತ್ ಮರಗಟ್ಟುವಿಕೆ ಅಥವಾ ಒಂದು ರೀತಿಯ ದೌರ್ಬಲ್ಯ ಕಾಣಿಸುತ್ತದೆ. ಸಡನ್ ಆಗಿ ಗೊಂದಲ ಉಂಟಾಗುವುದು, ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಲು ತೊಂದರೆ, ಹಠಾತ್ ಆಗಿ ಕಣ್ಣು ಕಾಣಿಸದೇ ಇರುವುದು, ನಡಿಗೆಯಲ್ಲಿ ತೊಂದರೆ, ತಲೆತಿರುಗುವಿಕೆ, ಬ್ಯಾಲೆನ್ಸ್ ತಪ್ಪುವುದು ಅಥವಾ ಸಮನ್ವಯತೆ, ಸಡನ್ ಆಗಿ ತಲೆನೋವು ಕಾಣಿಸಿಕೊಳ್ಳುವುದು ಪಾರ್ಶ್ವವಾಯುವಿನ ಆರಂಭಿಕ ಲಕ್ಷಣಗಳು" ಎಂದು ಗಾರ್ಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಧುಮೇಹ ನಿಯಂತ್ರಿಸುವಲ್ಲಿ ಮಧ್ಯಂತರ ಉಪವಾಸ ಸುರಕ್ಷಿತ; ಅಧ್ಯಯನ
"ಕಚೇರಿಗೆ ಹೋಗುವ ಜನರಲ್ಲಿ ಅಧಿಕ ರಕ್ತದೊತ್ತಡ ಇತ್ತೀಚೆಗೆ ಸಾಮಾನ್ಯವಾಗಿದೆ. ಇದು ಪಾರ್ಶ್ವವಾಯುವಿನ ಗಡುವನ್ನು ಬೆನ್ನಟ್ಟುತ್ತಿದೆ" - ಪ್ರೊ.ಕೌಸರ್ ಉಸ್ಮಾನ್, ಕೆಜಿಎಂಯು ವೈದ್ಯಕೀಯ ವಿಭಾಗದ ಹಿರಿಯ ಅಧ್ಯಾಪಕ
ಗರ್ಭಿಣಿಯರೂ ಕೂಡ ಅಧಿಕ ರಕ್ತದೊತ್ತಡ ಮತ್ತು ಗರ್ಭಾವಸ್ಥೆಯ ಮಧುಮೇಹದಿಂದ ಬಳಲುತ್ತಿದ್ದಾರೆ. ಇದು ಪಾರ್ಶ್ವವಾಯುವಿಗೆ ವಿಶೇಷವಾಗಿ ಹೆಮರಾಜಿಕ್ ಸ್ಟ್ರೋಕ್ಗೆ ಗುರಿಯಾಗುವಂತೆ ಮಾಡುತ್ತದೆ - ಡಾ.ಅಮಿತಾ ಶುಕ್ಲಾ, ಎಸ್ಸಿ ತ್ರಿವೇದಿ ಮೆಮೋರಿಯಲ್ ಟ್ರಸ್ಟ್ ಆಸ್ಪತ್ರೆಯ ಹಿರಿಯ ಸ್ತ್ರೀರೋಗ ತಜ್ಞೆ
ಮೆದುಳಿನ ಒಂದು ಭಾಗಕ್ಕೆ ರಕ್ತದ ಹರಿವು ಅಡ್ಡಿಪಡಿಸಿದಾಗ 'ಬ್ರೈನ್ ಅಟ್ಯಾಕ್' ಎಂದು ಕರೆಯಲ್ಪಡುವ ಸ್ಟ್ರೋಕ್ ಸಂಭವಿಸುತ್ತದೆ. ಪ್ರಾಥಮಿಕವಾಗಿ ಮೂರು ವಿಧಧ ಪಾರ್ಶ್ವವಾಯುಗಳಿವೆ. ಮೊದಲನೆಯದು ರಕ್ತಕೊರತೆಯ ಪಾರ್ಶ್ವವಾಯು. ಇದು ಸಾಮಾನ್ಯವಾಗಿದೆ. ಇದು ಅಪಧಮನಿಯಲ್ಲಿ ರಕ್ತದ ಹೆಪ್ಪುಗಟ್ಟುವಿಕೆಯಿಂದ ಉಂಟಾಗುತ್ತದೆ. ಇಲ್ಲಿ ರಕ್ತವು ಮೆದುಳಿನ ಭಾಗವನ್ನು ತಲುಪದಂತೆ ತಡೆಯುತ್ತದೆ.
ಎರಡನೆಯದು ಹೆಮರಾಜಿಕ್ ಸ್ಟ್ರೋಕ್. ಒಡೆದ ರಕ್ತನಾಳದಿಂದ ಉಂಟಾಗುತ್ತದೆ. ಇದು ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಅಧಿಕ ರಕ್ತದೊತ್ತಡ ಮತ್ತು ರಕ್ತನಾಳಗಳು ಈ ರೀತಿಯ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಮೂರನೆಯದು ಮಿನಿ ಸ್ಟ್ರೋಕ್. ತಾತ್ಕಾಲಿಕ ರಕ್ತಕೊರತೆಯಿಂದಾಗಿ ಸಂಭವಿಸುತ್ತದೆ. ಇದು ಮೆದುಳಿಗೆ ರಕ್ತದ ಹರಿವಿನ ತಾತ್ಕಾಲಿಕ ಅಡಚಣೆಯಾಗಿದೆ.
ಇದನ್ನೂ ಓದಿ: ವಾರಕ್ಕೆ 70 ಗಂಟೆಗಳ ಕೆಲಸದಿಂದ ಹೃದಯಾಘಾತದ ಅಪಾಯ; ದೀರ್ಘಾವಧಿ ಕಾರ್ಯ ನಿರ್ವಹಣೆಗೆ ವೈದ್ಯರ ವಿರೋಧ