ಲಂಡನ್: ಮಾರಾಣಾಂತಿಕ ನಿಫಾ ವೈರಸ್ ವಿರುದ್ದ ಲಸಿಕೆ ಕಂಡು ಹಿಡಿದಿರುವ ಯುಕೆಯ ಆಕ್ಸಫರ್ಡ್ ಯುನಿವರ್ಸಿಟಿ ವಿಜ್ಞಾನಿಗಳು ಇದೀಗ ಮೊದಲ ಬಾರಿಗೆ ಮಾನವ ಪ್ರಯೋಗಕ್ಕೆ ಮುಂದಾಗಿದ್ದಾರೆ. ಆಕ್ಸಫರ್ಡ್ ಸಾಂಕ್ರಾಮಿಕ ವಿಜ್ಞಾನ ಸಂಸ್ಥೆ ChAdOx1 ನಿಫಾಬಿ ಲಸಿಕೆಯನ್ನು ಅಭಿವೃದ್ಧಿ ಮಾಡಿದ್ದು, 18 ರಿಂದ 55 ವರ್ಷದ 51 ಜನರು ಈ ಪ್ರಯೋಗದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ನಿಫಾ ವೈರಸ್ ಅತ್ಯಂತ ಗಂಭೀರ ಸೋಂಕು ಆಗಿದ್ದು, ಶೇ 75ರಷ್ಟು ಪ್ರಕರಣದಲ್ಲಿ ಇದು ಮಾರಾಣಾಂತಿಕವಾಗಿದೆ. ಆಗ್ನೇಯ ಏಷ್ಯಾದಲ್ಲಿ ಸೇರಿದಂತೆ ಸಿಂಗಾಪೂರ, ಮಲೇಷ್ಯಾ, ಬಾಂಗ್ಲಾದೇಶ ಮತ್ತು ಭಾರತದ ಕೇರಳದಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಇತ್ತೀಚೆಗೆ ಅಂದರೆ, 2023ರ ಸೆಪ್ಟೆಂಬರ್ನಲ್ಲಿ ಮತ್ತೆ ಕೇರಳದಲ್ಲಿ ನಿಫಾ ಸೋಂಕು ವರದಿಯಾಗಿತ್ತು.
ನಿಫಾ ಸೋಂಕು ಫ್ರೂಟ್ ಬಾಟ್ಸ್ಗಳಿಂದ (ಬಾವುಲಿ ಕಚ್ಚಿ ತಿಂದ ಹಣ್ಣು ಸೇವನೆ) ಹರಡುತ್ತದೆ. ಕೆಲವೊಮ್ಮೆ ಇವು ಸೋಂಕಿತ ಪ್ರಾಣಿಗಳಿಂದ ಅಂದರೆ ಹಂದಿಗಳಿಂದಲೂ ಪ್ರಸರಣ ಕಾಣುತ್ತದೆ. ಅಲ್ಲದೇ, ನಿಕಟ ಸಂಪರ್ಕದಲ್ಲಿ ಮನುಷ್ಯರಿಂದ ಮನುಷ್ಯರಿಗೆ ಸೋಂಕು ಹರಡುತ್ತದೆ.
25 ವರ್ಷಗಳ ಹಿಂದೆ ಮಲೇಷ್ಯಾ ಮತ್ತು ಸಿಂಗಾಪೂರದಲ್ಲಿ ಈ ನಿಫಾ ಸೋಂಕು ಮೊದಲ ಬಾರಿಗೆ ಕಂಡು ಬಂದಿತ್ತು. ಅಲ್ಲಿಂದ ಇಲ್ಲಿಯವರೆಗೆ ಈ ಸೋಂಕಿಗೆ ಸೂಕ್ತ ಚಿಕಿತ್ಸೆ ಮತ್ತು ಲಸಿಕೆ ಲಭ್ಯವಿಲ್ಲ. ನಿಫಾ ವೈರಸ್ ಮೊದಲ ಬಾರಿಗೆ 1998ರಲ್ಲಿ ಪತ್ತೆಯಾಗಿತ್ತು. ಈ ಮಾರಾಣಾಂತಿಕ ಸೋಂಕಿನ ವಿರುದ್ಧ ಜಾಗತಿಕ ಆರೋಗ್ಯ ಸಮುದಾಯದಲ್ಲಿ ಯಾವುದೇ ಅನುಮತಿ ಪಡೆದ ಲಸಿಕೆ ಮತ್ತು ಚಿಕಿತ್ಸೆ ಲಭ್ಯವಿಲ್ಲ ಎಂದು ಲಸಿಕೆ ಪ್ರಯೋಗದ ಪ್ರಮುಖ ತನಿಖಾಧಿಕಾರಿ ಪ್ರೊಫೆಸರ್ ಬ್ರೈನ್ ಅಂಗಸ್ ತಿಳಿಸಿದ್ದಾರೆ.
ಅಧಿಕ ಸಾವಿನ ದರ ಮತ್ತು ನಿಫಾ ಸೋಂಕಿನ ಪ್ರಸರಣದ ಲಕ್ಷಣದಿಂದ ಈ ರೋಗವನ್ನು ಸಾಂಕ್ರಾಮಿಕ ರೋಗಕಾರಕ ಎಂದು ಪತ್ತೆ ಮಾಡಲಾಗಿದೆ. ಈ ಲಸಿಕೆ ಭವಿಷ್ಯದಲ್ಲಿ ಸೋಂಕು ತಡೆಯುವಲ್ಲಿ ಮತ್ತು ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಮುಖ ಮೈಲಿಗಲ್ಲು ಆಗಲಿದೆ. ಜೊತೆಗೆ ಭವಿಷ್ಯದಲ್ಲಿ ಜಾಗತಿಕ ಸೋಂಕಿನ ವಿರುದ್ಧ ಸಿದ್ದತೆಗೆ ಇದು ಸಹಾಯ ಮಾಡಲಿದೆ ಎಂದಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್ಒ) ನಿಫಾ ಸೋಂಕಿಗೆ ತುರ್ತು ಸಂಶೋಧನೆ ಅಗತ್ಯ ಇದೆ ಎಂದು ತಿಳಿಸಿದೆ.
ವಿಜ್ಞಾನಿಗಳು ಇದೀಗ ನಿಫಾ ಸೋಂಕಿಗೆ ChAdOx1ಲಸಿಕೆ ಬಳಕೆ ಪ್ರಯೋಗಕ್ಕೆ ಮುಂದಾಗಿದ್ದಾರೆ. ಇದೆ ವೈರಲ್ ವಾಹಕ ಲಸಿಕೆಯ ಫ್ಲಾಟರ್ಫಾರ್ಮ್ ಅನ್ನು ಆಕ್ಸಫರ್ಡ್ ಮತ್ತು ಆಸ್ಟ್ರಜೆನೆಕಾ ಕೋವಿಡ್ 19 ಲಸಿಕೆಗೆ ಬಳಕೆ ಮಾಡಿದ್ದರು. ಈ ಲಸಿಕೆ ಜಗತ್ತಿನಾದ್ಯಂತ ಅಂದಾಜು ಆರು ಮಿಲಿಯನ್ ಜನರ ಪ್ರಾಣ ಉಳಿಸಲು ಸಹಾಯ ಮಾಡಿತು. ನಿಫಾ ಲಸಿಕೆಯ ಈ ಪ್ರಯೋಗವೂ ಮುಂದಿನ 18 ತಿಂಗಳುಗಳ ಕಾಲ ನಡೆಯಲಿದ್ದು, ಮುಂದಿನ ಪ್ರಯೋಗವನ್ನು ನಿಫಾ ಸೋಂಕಿನ ದೇಶದಲ್ಲಿ ನಿರೀಕ್ಷಿಸಲಾಗಿದೆ. (ಐಎಎನ್ಎಸ್)
ಇದನ್ನೂ ಓದಿ: ಕೋವಿಡ್ಗಿಂತ ಶೇ 40ರಷ್ಟು ಹೆಚ್ಚಿನ ಸಾವಿನ ದರ ಹೊಂದಿದೆ ಈ ಭಯಂಕರ ನಿಫಾ; ತಜ್ಞರ ಎಚ್ಚರಿಕೆ