ಹೈದರಾಬಾದ್ : ತರಕಾರಿ ಸೇರಿದಂತೆ ಆಹಾರದ ಪದಾರ್ಥಗಳ ರುಚಿ ಮತ್ತಷ್ಟು ಹೆಚ್ಚಿಸಬೇಕಾದರೆ, ಮೊಸರು, ಮಜ್ಜಿಗೆ ರುಚಿಸಬೇಕಾದರೆ ಉಪ್ಪು ಹಾಕಿಕೊಳ್ಳವುದನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ.
ಹಿಂದಿನ ಕಾಲದಲ್ಲಿ ಉಪ್ಪು ಹಾಕಿದರೆ ಅಧಿಕ ರಕ್ತದೊತ್ತಡ ಬರುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಈಗ ಸಂಶೋಧಕರು ಉಪ್ಪಿನೊಂದಿಗೆ ಮಧುಮೇಹವೂ ಬರುತ್ತದೆ ಎಂದು ಸ್ಪಷ್ಟಪಡಿಸುತ್ತಿದ್ದಾರೆ. ಹೆಚ್ಚು ಉಪ್ಪನ್ನು ಸೇವಿಸುವವರಿಗೆ ಮಧುಮೇಹ ಬರುವ ಅಪಾಯ ಹೆಚ್ಚು ಎಂಬುದು ಸಂಶೋಧನೆಗಳು ಹೇಳುತ್ತಿವೆ.
ಉಪ್ಪು ತಿಂದರೆ ಮಧುಮೇಹ ಹೇಗೆ ಬರುತ್ತೆ?
ಮಧುಮೇಹವು ಸಿಹಿತಿಂಡಿಗಳು, ಸಕ್ಕರೆ ಹಾಗೂ ಹಣ್ಣಿನ ರಸಗಳ ಸೇವನೆಯಿಂದ ಬರುತ್ತದೆ ಎಂದು ಭಾವಿಸಲಾಗಿದೆ. ಸ್ಟಾಕ್‌ಹೋಮ್‌ನಲ್ಲಿರುವ ಕ್ಯಾರೊಲಿನಾಸ್ಕಾ ಇನ್‌ಸ್ಟಿಟ್ಯೂಟ್ ನಡೆಸಿದ ಅಧ್ಯಯನವು ಹೆಚ್ಚಿನ ಉಪ್ಪು ಸೇವನೆಯು ಮಧುಮೇಹಕ್ಕೆ ಕಾರಣವಾಗುತ್ತದೆ ಎಂದು ಕಂಡು ಹಿಡಿದಿದೆ. ದಿನಕ್ಕೆ ಎರಡು ಸ್ಪೂನ್ ಉಪ್ಪು ತೆಗೆದುಕೊಳ್ಳುವವರಲ್ಲಿ ಶೇ.72ರಷ್ಟು ಅಧಿಕ ಮಧುಮೇಹ ಇರುತ್ತದೆ ಎಂಬುದು ಬಹಿರಂಗವಾಗಿದೆ.
ಇನ್ಸುಲಿನ್‌ಗೆ ಅಡ್ಡಿ
ಹೆಚ್ಚಿನ ಉಪ್ಪು ಸೇವನೆ ಮಾಡಿರುವ ಪರಿಣಾಮ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಸಾಲ್ಟ್ ಇನ್ಸುಲಿನ್ ಅನ್ನು ತಡೆಯುವುದರೊಂದಿಗೆ ಮಧುಮೇಹಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಲಾಗುತ್ತದೆ. ಹೆಚ್ಚಿನ ಉಪ್ಪು ಸೇವನೆಯು ಅಧಿಕ ರಕ್ತದೊತ್ತಡ ಮತ್ತು ಮಧುಮೇಹಕ್ಕೆ ಕಾರಣವಾಗಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಅವಳಿ ಶತ್ರುಗಳಾಗಿದ್ದು, ಇದು ಹೃದ್ರೋಗಕ್ಕೆ ಕಾರಣವಾಗಬಹುದು.
ನಾವು ತಿನ್ನುವ ಆಹಾರದಲ್ಲಿ ದಿನಕ್ಕೆ 1500 ಮಿಗ್ರಾಂ ಸೋಡಿಯಂ ಮೀರದಂತೆ ನೋಡಿಕೊಳ್ಳಬೇಕು. ತರಕಾರಿ, ಉಪ್ಪಿನಕಾಯಿ, ತಿಂಡಿ, ಮೊಸರಿನಲ್ಲಿ ಅಗತ್ಯ ಪ್ರಮಾಣದಲ್ಲಿ ಇದ್ದರೆ ಸೇಫ್ ಎನ್ನುತ್ತಾರೆ ತಜ್ಞರು.
ಕಾಳುಮೆಣಸಿನ ಪುಡಿ ಬಳಕೆಗೆ ಪ್ರಯತ್ನಿಸಿ
ತರಕಾರಿ, ಸೊಪ್ಪುಗಳಂತಹ ಆಹಾರದಲ್ಲಿ ಕಡಿಮೆ ಉಪ್ಪನ್ನು ಹಾಕುವ ಅಭ್ಯಾಸ ಮಾಡಿಕೊಳ್ಳಿ. ಹೊರಗಡೆ ತಯಾರಿಸಿದ ಪದಾರ್ಥಗಳನ್ನು ಆದಷ್ಟು ದೂರವಿಡಬೇಕು. ಉಪ್ಪಿನ ಬದಲು ಸ್ವಲ್ಪ ಕಾಳುಮೆಣಸಿನ ಪುಡಿಯನ್ನು ಉದುರಿಸಿ. ಇದನ್ನು ಹಂತ ಹಂತವಾಗಿ ಮಾಡುವುದರಿಂದ ನಾಲಿಗೆಯ ರುಚಿ ಇದಕ್ಕೆ ಒಗ್ಗಿಕೊಳ್ಳಬಹುದು. ಹೀಗೆ ಮಾಡುವುದರಿಂದ ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು.
ಇದನ್ನೂ ಓದಿ: ಕಡಿಮೆ ಮಾಂಸ ಸೇವನೆ, ಮಾಂಸ ಮುಕ್ತ ಆಹಾರಗಳು ಕ್ಯಾನ್ಸರ್ ಅಪಾಯ ಕಡಿಮೆ ಮಾಡಬಹುದು - ಅಧ್ಯಯನ