ಅನೇಕ ಮಂದಿಗೆ ಅತ್ಯಂತ ಸಮಸ್ಯಾದಾಯಕ ನೋವುಗಳಲ್ಲಿ ಒಂದು ಮೈಗ್ರೇನ್ ಒಂದಾಗಿದೆ. ಇದು ಕೇವಲ ತಲೆನೋವು ಅಲ್ಲ, ಬದಲಾಗಿ ವಾಕರಿಕೆ ಕೂಡ ಆಗಿದೆ. ತಲೆಯ ಒಂದೇ ಕಡೆ ಬಡಿದಂತೆ ಅನುಭವದ ಜೊತೆ ಹೊಟ್ಟೆ ತೊಳಸಿ, ವಾಂತಿಯಂತಹ ಅನುಭವ ಉಂಟಾಗುತ್ತದೆ. ಈ ನೋವು ನಿಮ್ಮ ಇಡೀ ದಿನವನ್ನು ಹಾಳು ಮಾಡಬಹುದು. ಅನೇಕ ಜನರನ್ನು ಕಾಡುವ ಈ ಮೈಗ್ರೇನ್ ಉಂಟಾಗಲು ಕಾರಣವಾಗುವ ಅಂಶಗಳು ಅನೇಕ ಇವೆ. ಈ ನೋವನ್ನು ಕಡಿಮೆ ಮಾಡುವಲ್ಲಿ ಕೆಲವು ಮುನ್ನೆಚ್ಚರಿಕೆ ವಹಿಸಬೇಕಾಗಿದೆ.
ಸರಿಯಾಗಿ ನಿದ್ದೆ: ನಿದ್ದೆ ಎಂಬುದು ಬಹುತೇಕ ಸಮಸ್ಯೆಗೆ ಪರಿಹಾರ. ಆದರೆ, ಹೆಚ್ಚಿನ ನಿದ್ದೆ ಅಥವಾ ಕಡಿಮೆ ನಿದ್ದೆ ಕೂಡ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ. ಈ ಹಿನ್ನೆಲೆ ಪ್ರತಿನಿತ್ಯ ಅಗತ್ಯವಾದಷ್ಟು ಸರಿಯಾದ ಪ್ರಮಾಣದ ನಿದ್ದೆ ಮಾಡುವುದು ಅವಶ್ಯವಾಗಿದೆ. ಈ ನಿದ್ದೆ ಅವಧಿಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಿದೆ.
ಊಟವನ್ನು ತಪ್ಪಿಸಬೇಡಿ: ರಕ್ತದ ಗ್ಲುಕೋಸ್ ಮಟ್ಟ ಕಡಿಮೆಯಾಗುತ್ತಿದ್ದಂತೆ ಮೊದಲು ಪರಿಣಾಮಕ್ಕೆ ಒಳಗಾಗುವುದು ಮೆದುಳು. ತಲೆ ನೋವಿಗೆ ಪ್ರಮುಖ ಕಾರಣ ಹೊಟ್ಟೆ ಹಸಿವಾಗಿದೆ. ಈ ಹಿನ್ನೆಲೆ ಸಮಯಕ್ಕೆ ಸರಿಯಾಗಿ ತಿನ್ನಬೇಕು. ಇದರಿಂದ ದೇಹಕ್ಕೆ ಸರಿಯಾದ ಶಕ್ತಿ ಸಿಕ್ಕರೆ ಮಾತ್ರ ದಿನವಿಡೀ ಕಾರ್ಯಾಚಾರಣೆ ಮಾಡಲು ಸಾಧ್ಯ.
ಕೆಫೀನ್ ಅಂಶ ತಡೆಗಟ್ಟಿ: ಕಾಫಿಯಲ್ಲಿನ ಕೆಫೀನ್ ಅಂಶ ಮೈಗ್ರೇನ್ಗೆ ಕಾರಣವೂ ಆಗಬಹುದು. ಕಡಿಮೆ ಮಾಡಲೂಬಹುದು. ಕೆಫಿನ್ ತಲೆನೋವಿನ ಔಷಧಿಯೂ ಹೌದು. ಇದು ನೋವಿನ ನಿವಾರಕವಾಗಿ ಕೂಡ ಪರಿಣಾಮ ಬೀರುತ್ತದೆ. ಆದರೆ, ಇದರ ಡೋಸೇಜ್ ಹೆಚ್ಚಾದರೆ, ಸಮಸ್ಯೆ ಆಗುತ್ತದೆ. ಈ ಹಿನ್ನೆಲೆ ಕೆಫೀನ್ ಅನ್ನು ಎಚ್ಚರಿಕೆಯಿಂದ ಬಳಸಬೇಕು.
ವ್ಯಾಯಾಮ: ಕೆಲವೊಮ್ಮೆ ಅಧಿಕ ವ್ಯಾಯಾಮ ಕೂಡ ಮೈಗ್ರೇನ್ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದರೆ, ವ್ಯಾಯಾಮ ನಿಯಮಿತವಾಗಿರಬೇಕು. ಇದರಿಂದ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ತಲೆನೋವನ್ನು ತಪ್ಪಿಸಬಹುದು. ವ್ಯಾಯಾಮವನ್ನು ನಿಧಾನವಾಗಿ ಶುರುಮಾಡಿ ನಂತರ ಹಂತ ಹಂತವಾಗಿ ಅದರ ವೇಗ ಹೆಚ್ಚಿಸಬೇಕು.
ಇದರಿಂದ ದೂರ ಇರಿ: ಸಾಮಾನ್ಯವಾಗಿ ಜೋರು ಸದ್ದು, ಘಾಟು ವಾಸನೆ, ಮಿಂಚುವ ಬೆಳಕು ಕೂಡ ಮೈಗ್ರೇನ್ಗೆ ಕಾರಣವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇದನ್ನು ತಪ್ಪಿಸಿ. ಕೆಲವೊಮ್ಮೆ ನಿಮಗೆ ಏನು ತಿಂದೆ, ಯಾವಾಗ ತಿಂದೆ? ಯಾವಾಗ ಔಷಧಿ ತೆಗೆದುಕೊಂಡೆ ಎಂದು ತಿಳಿಯದಿದ್ದರೆ, ಯಾವ ರೀತಿಯ ಲಕ್ಷಣಗಳು ಕಾಡುತ್ತಿವೆ ಎಂಬುದನ್ನು ಪುಸ್ತಕದಲ್ಲಿ ನಮೂದಿಸಿ. ಇದರ ಆಧಾರದ ಮೇಲೆ ನಿಮಗೆ ತಲೆನೋವು ತರುವ ಅಂಶಗಳನ್ನು ಪಟ್ಟಿ ಮಾಡಬಹುದು.
ಋತುಚಕ್ರ: ಕೆಲವೊಮ್ಮೆ ಹಾರ್ಮೋನ್ಗಳು ಮೆದುಳಿನ ಮೇಲೆ ಪರಿಣಾಮ ಬೀರುತ್ತವೆ. ಮಹಿಳೆಯರು ಋತುಚಕ್ರದ ಸಮಯದಲ್ಲಿ ಸಾಮಾನ್ಯವಾಗಿ ಈ ಮೈಗ್ರೇನ್ಗೆ ತುತ್ತಾಗುತ್ತಾರೆ. ಈ ಸಮದಯಲ್ಲಿನ ಫಲವತ್ತತೆಯ ಅವಧಿ ವೇಳೆ ತಲೆ ನೋವು ಕಾಡಬಹುದು. ಈ ಹಿನ್ನೆಲೆ ಹಾರ್ಮೋನ್ ಬದಲಾವಣೆ ಸಮಯದಲ್ಲಿ ಕೆಲವು ಮಾತ್ರೆಗಳನ್ನು ತೆಗೆದುಕೊಳ್ಳಬಹುದು.
ಇದನ್ನೂ ಓದಿ: ನೋವು ನಿವಾರಕ ಮಾತ್ರೆಗಳಲ್ಲಿ ಕಚ್ಚಾ ಎಣ್ಣೆ ಬದಲಾಗಿ ಪೇಪರ್ ತ್ಯಾಜ್ಯ ಬಳಕೆ; ಅಧ್ಯಯನ