ಮಹಿಳೆಯರ ಋತುಚಕ್ರದ ಮುಟ್ಟಿನ ಕಪ್ಗಳು ಮರುಬಳಕೆ ಮಾಡಬಹುದಾದ ನೈರ್ಮಲ್ಯ ಸಾಧನ. ಸಿಲಿಕಾನ್ನ ಈ ಕಪ್ಗಳು ಬಳಕೆಗೆ ಸರಾಗವಾಗಿದ್ದು, ಕೊಳವೆ ಆಕಾರದಲ್ಲಿರುತ್ತವೆ. ಮುಟ್ಟಿನ ಕಪ್ಗಳು ಬೇರೆ ರೀತಿಯ ಋತುಚಕ್ರದ ಸಾಧನಗಳಿಗಿಂತ ಹೆಚ್ಚಿನ ರಕ್ತವನ್ನು ಬೇರೆ ವಿಧಾನದಲ್ಲಿ ಸಂಗ್ರಹಿಸುತ್ತವೆ. ಇದು ಯೋನಿಯೊಳಗೇ ರಕ್ತ ಸಂಗ್ರಹಿಸುವ ಕಾರಣ ಬೇರೆ ವಸ್ತುಗಳ ಬಳಕೆಯಂತೆ ಹೆಚ್ಚು ಕಿರಿಕಿರಿ ನೀಡುವುದಿಲ್ಲ. ಇದರ ಜೊತೆಗೆ ಇದು ಪರಿಸರಸ್ನೇಹಿಯೂ ಆಗಿದ್ದು, ಟ್ಯಾಂಪೂನ್ ಮತ್ತು ಸ್ಯಾನಿಟರಿ ಪ್ಯಾಡ್ಗಳಿಗಿಂತ ಉತ್ತಮ ಆಯ್ಕೆಯೂ ಹೌದು. ಮುಟ್ಟಿನ ಕಪ್ಗಳನ್ನು 10 ವರ್ಷಗಳ ಕಾಲ ಮರು ಬಳಕೆ ಮಾಡಬಹುದು. ಸಿರೊನ್ ಹೈಜಿನ್ ಸಹಸಂಸ್ಥಾಪಕ ಮತ್ತು ಸಿಇಒ ದೀಪ್ ಬಜಾಜ್ ಈ ಕುರಿತು ಮಾತನಾಡಿದ್ದಾರೆ.
ಪರಿಸರ ಸ್ನೇಹಿ: ಮಟ್ಟಿನ ಕಪ್ಗಳು ಪರಿಸರಸ್ನೇಹಿ. ಸ್ಯಾನಿಟರಿ ಪ್ಯಾಡ್ನಂತಹ ವಸ್ತುಗಳು ಕೊಳೆಯಲು (ಡಿಕಂಪೊಸ್) 500 ವರ್ಷಗಳೇ ಬೇಕು. ಆದರೆ, ಇದು ಮರು ಬಳಕೆಯೊಂದಿಗೆ ದೀರ್ಘಾವಧಿ ಬಾಳಿಕೆ ಬರುತ್ತದೆ.
ವೆಚ್ಚ ಕಡಿಮೆ: ದಶಕಗಳ ಕಾಲ ಮರು ಬಳಕೆ ಮಾಡುವ ಕಾರಣ ಇದು ಪಾಕೆಟ್‌ಸ್ನೇಹಿ ಕೂಡ. ಸ್ಯಾನಿಟರಿ ಪ್ಯಾಡ್ಗಳು ಏಕಬಳಕೆ ವಸ್ತುಗಳಾಗಿದ್ದು, ವ್ಯಯ ಹೆಚ್ಚು.
ಹೆಚ್ಚು ಸುರಕ್ಷಿತ: ಮಾರುಕಟ್ಟೆಯಲ್ಲಿರುವ ಬಹುತೇಕ ಪ್ಯಾಡ್, ಟ್ಯಾಂಪೂನ್ಗಳು ವಿಷಕಾರಿ ರಾಸಾಯನಿಕ ಮತ್ತು ಸಿಂಥೆಟಿಕ್ ವಸ್ತುಗಳನ್ನು ಹೊಂದಿವೆ. ಇದು ನಿಮ್ಮ ತ್ವಚೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ದೇಹ ಸೇರುವ ಸಾಧ್ಯತೆಯೂ ಇದೆ. ಉತ್ತಮ ಗುಣಮಟ್ಟದ ಮುಟ್ಟಿನ ಕಪ್ಗಳನ್ನು ವೈದ್ಯಕೀಯ ಮಟ್ಟದ ಸಿಲಿಕಾನ್ನಿಂದ ಮಾಡಲಾಗಿದೆ. ತ್ವಚೆ ಮತ್ತು ಒಳಾಂಗಕ್ಕೆ ಯಾವುದೇ ಹಾನಿ ಮಾಡುವುದಿಲ್ಲ.
ಆರಾಮದಾಯಕ: ಮುಟ್ಟಿನ ಕಪ್ಗಳು 8 ಗಂಟೆಗಳ ಲೀಕ್ ಪ್ರೂಫ್ ಆಗಿರುತ್ತವೆ. ಪ್ಯಾಡ್ ಅಥವಾ ಟ್ಯಾಂಪೂನ್ ರೀತಿ ಪ್ರತಿ ಮೂರ್ನಾಲ್ಕು ಗಂಟೆಗೊಮ್ಮ ಬದಲಾಯಿಸುವ ಚಿಂತೆ ಇರದು. ತ್ವಚೆಯ ಮೇಲೆ ಯಾವುದೇ ಹಾನಿ ಮಾಡುವುದಿಲ್ಲ. ಇದರ ಬಳಕೆಯಿಂದ ನಿಶ್ಚಿಂತೆಯಾಗಿ ಈಜು ಸೇರಿದಂತೆ ಎಲ್ಲ ಚಟುವಟಿಕೆಯಲ್ಲೂ ಭಾಗಿಯಾಗಬಹುದು.
ಹೆಚ್ಚು ರಕ್ತ ಸಂಗ್ರಹಣೆ: ಮುಟ್ಟಿನ ಕಪ್ಗಳು ಅದರ ಗಾತ್ರದ ಆಧಾರದ ಮೇಲೆ 15-25 ಎಮ್ಎಲ್ ರಕ್ತ ಸಂಗ್ರಹಿಸುತ್ತವೆ. ಇದು ಟ್ಯಾಂಪೂನ್, ಪ್ಯಾಡ್ಗಳಿಗಿಂತ ಹೆಚ್ಚು. ಹೀಗಾಗಿ ಯಾವುದೇ ಚಿಂತೆಯಿಲ್ಲದೆ, ಇವುಗಳನ್ನು ಬಳಸಬಹುದು.
ಸೂಕ್ತ ಕಪ್ ಆಯ್ಕೆ ಹೇಗೆ?: ಮುಟ್ಟಿನ ಕಪ್ಗಳು ವಯಸ್ಸು, ಮಗುವಿನ ಜನನ ಇತಿಹಾಸ ಮತ್ತು ರಕ್ತಸ್ರಾವದ ತೀವ್ರತೆಯ ಮೇಲೆ ವಿವಿಧ ಗಾತ್ರಗಳಲ್ಲಿ ಲಭ್ಯವಿದೆ. ಉತ್ತಮ ಗುಣಮಟ್ಟದ ಕಪ್ಗಳು ನಿಮಗೆ ಈ ಮಾರ್ಗದರ್ಶನದ ಆಧಾರದಡಿ ಆಯ್ಕೆ ಮಾಡುವ ಸೌಲಭ್ಯ ಒದಗಿಸುತ್ತವೆ.
ಬಳಕೆ ಹೇಗೆ?: ಮುಟ್ಟಿನ ಕಪ್ಗಳ ಬಳಕೆಗೂ ಮುನ್ನ ಅವುಗಳನ್ನು ಚೆನ್ನಾಗಿ ಕುದಿಯುವ ನೀರಿನಲ್ಲಿ ಸ್ಟೇರಿಲೈಸ್ ಮಾಡಬೇಕು. ಐದು ದಿನದ ಮುಟ್ಟಿನ ಅವಧಿಯಲ್ಲಿ ಬಳಕೆ ಮಾಡುವಾಗ ಅದು ತುಂಬಿದ ಕೂಡಲೇ ಅದನ್ನು ಚೆಲ್ಲಿ, ಸೋಪು, ನೀರಿನಿಂದ ಶುದ್ದಗೊಳಿಸಿ ಮತ್ತೆ ಬಳಕೆ ಮಾಡಬಹುದು. ಮುಟ್ಟಿನ ಅವಧಿ ಮುಗಿದ ಬಳಿಕ ಮತ್ತೊಮ್ಮೆ ಸ್ಟೈರಿಲೈಜ್ ಮಾಡುವುದು ಅವಶ್ಯಕ.
ಮುಟ್ಟಿನ ಕಪ್ ಬಳಕೆ ಮಾಡುವ ಬಗ್ಗೆ ಅನೇಕರಲ್ಲಿ ತಪ್ಪು ಕಲ್ಪನೆಯಿದ್ದು, ಇವು ಯೋನಿಯೊಳಗೆ ಸೇರಿಸುವುದು ಕಷ್ಟಸಾಧ್ಯ, ಯೋನಿಯೊಳಗೆ ಹಾನಿ ಮಾಡಿದರೆ ಏನು ಮಾಡುವುದು ಎಂಬ ಭಯವಿದೆ. ಆದರೆ, ಇದರಿಂದ ಯಾವುದೇ ಹಾನಿಯಾಗುವುದಿಲ್ಲ. ಇದರ ಬಳಕೆ ಕೂಡ ಸುಲಭ. ಇದರ ಮೇಲಿನ ತೆರೆದ ಭಾಗವನ್ನು ಸಿ ಆಕಾರದಲ್ಲಿ ಮಡಚಿ ಯೋನಿಯೊಳಗೆ ಸೇರಿಸಬೇಕು. ಈ ಸಂಬಂಧ ಅನೇಕ ವಿಡಿಯೋಗಳು ಯೂಟ್ಯೂಬ್ನಲ್ಲಿ ಲಭ್ಯವಿದೆ.
ಇದನ್ನೂ ಓದಿ: ಮುಟ್ಟಿನ ಸಮಯದಲ್ಲಿ ಬಳಸಬಹುದಾದ ಪರಿಸರ ಸ್ನೇಹಿ ಉತ್ಪನ್ನಗಳು ಯಾವುವು?