ಶ್ರೀನಗರ: ಕಾಶ್ಮೀರ ಹಿಮಪಾತದ ಜೊತೆಗೆ ರಮಣೀಯ ಸೌಂದರ್ಯವನ್ನು ಹೊಂದಿದ್ದು, ನೆಚ್ಚಿನ ಶೂಟಿಂಗ್ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ಇದೇ ಸಮಯದಲ್ಲಿ, ಕಣಿವೆಯು ಉಲ್ಬಣಗೊಳ್ಳುವ ಸಮಸ್ಯೆಯೊಂದಿಗೆ ಹೋರಾಡುತ್ತಿದೆ. ಇತ್ತೀಚಿನ ಅಧ್ಯಯನದ ಪ್ರಕಾರ, ಕಾಶ್ಮೀರದಲ್ಲಿ ಹೆಚ್ಚಿನ ಮಹಿಳೆಯರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.
ವಿವಿಧ ವೃತ್ತಿ, ವಯಸ್ಸು ಮತ್ತು ಲಿಂಗಕ್ಕೆ ಸೇರಿದ ಜನರ ಮೇಲೆ ಸಮೀಕ್ಷೆಯನ್ನು ಮಾಡಲಾಗಿದೆ. ಕಾಶ್ಮೀರ ಕಣಿವೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಈ ಕೊರತೆಯಿಂದ ಬಳಲುತ್ತಿದ್ದಾರೆ. ಅದೃಷ್ಟವಶಾತ್, ಕಾಶ್ಮೀರದ ನಿವಾಸಿಗಳಲ್ಲಿ ಪ್ರಸ್ತುತ ವಿಟಮಿನ್ ಡಿ ಕೊರತೆ ಸಮಸ್ಯೆ ಸೌಮ್ಯದಿಂದ ಮಧ್ಯಮಕ್ಕೆ ಸೀಮಿತವಾಗಿದೆ.
ವಿಟಮಿನ್ ಡಿ ಕೊರತೆ, ಅದಕ್ಕೆ ಕಾರಣಗಳು ಮತ್ತು ಪರಿಹಾರಗಳ ಕುರಿತು ನಡೆಸಿದ ಸಂಶೋಧನೆಗೆ ಸಂಬಂಧಿಸಿದಂತೆ, ಈಟಿವಿ ಭಾರತದ ಹಿರಿಯ ವರದಿಗಾರ ಪರ್ವೇಜ್ ಉದ್ ದಿನ್ ಅವರು ಶ್ರೀನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನ ಸರ್ಜರಿ ಪ್ರಾಧ್ಯಾಪಕ ಡಾ. ಇಕ್ಬಾಲ್ ಸಲೀಂ ಅವರೊಂದಿಗೆ ವಿಶೇಷ ಸಂದರ್ಶನ ನಡೆಸಿದ್ದಾರೆ.
ಇತ್ತೀಚಿನ ಸಮೀಕ್ಷೆಯು ಕಾಶ್ಮೀರದಲ್ಲಿ ವ್ಯಾಪಕವಾದ ವಿಟಮಿನ್ ಡಿ ಕೊರತೆ ಇದೆ ಎಂದು ಆಘಾತಕಾರಿ ಡೇಟಾ ನೀಡಿದೆ ಎಂದು ಡಾ. ಸಲೀಂ ಹೇಳಿದರು. ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸದಿದ್ದರೆ ಕಾಶ್ಮೀರದಲ್ಲಿ ದೊಡ್ಡ ಸಮಸ್ಯೆ ಎದುರಾಗಲಿದೆ. ಪ್ರಸ್ತುತ ಮಧ್ಯಮ ಮಟ್ಟದ ವಿಟಮಿನ್ ಡಿ ಕೊರತೆ ತೀವ್ರವಾಗಬಹುದು. ರೈತರಲ್ಲಿ ಕೇವಲ ಶೇ 58 ರಷ್ಟು ಕೊರತೆಯಿದೆ ಎಂದು ಸಂಶೋಧನೆಯು ಬಹಿರಂಗಪಡಿಸಿದೆ. ಇದು ಉದ್ಯೋಗಿಗಳಲ್ಲಿ ಶೇ 93ರಷ್ಟು ಮತ್ತು ಮನೆಯಲ್ಲೇ ಇರುವವರಲ್ಲಿ ಶೇ 93ರಷ್ಟು ಇದೆ ಎಂದು ಸಂಶೋಧನೆ ತಿಳಿಸಿದೆ.
ಕೊರತೆಗೆ ಕಾರಣ: ವಿಟಮಿನ್ ಡಿ ಕೊರತೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಡಾ. ಸಲೀಂ ಮಾತನಾಡಿ, ವಿಟಮಿನ್ ಡಿ ಪ್ರಮುಖ ಅಂಶವಾಗಿದೆ. ಇದರ ಕೊರತೆಯು ಅನೇಕ ರೋಗಗಳಿಗೆ ಕಾರಣವಾಗಬಹುದು. ಕಣಿವೆಯಲ್ಲಿ ಹೆಚ್ಚಿನ ಕೊರತೆಗೆ ಹಲವಾರು ಕಾರಣಗಳಿವೆ. ಮುಖ್ಯ ಕಾರಣವೆಂದರೇ, ಅಕ್ಟೋಬರ್ನಿಂದ ಮಾರ್ಚ್ವರೆಗೆ ಆಗಾಗ್ಗೆ ಮೋಡ ಕವಿದ ವಾತಾವರಣ, ಸೂರ್ಯನ ಬೆಳಕು ಕಡಿಮೆ ಇರುತ್ತದೆ. ನಂತರ ಪೌಷ್ಟಿಕ ಆಹಾರದ ಕೊರತೆ ಕಾರಣ ಎನ್ನಲಾಗ್ತಿದೆ.
ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚಿದೆ. ಈ ಬಗ್ಗೆ ಮಾತನಾಡಿದ ಅವರು, ಮಹಿಳೆಯರು ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಅವರ ಆರೋಗ್ಯ ಮತ್ತು ಆಹಾರದ ಬಗ್ಗೆ ಗಮನಕೊಡುವುದಿಲ್ಲ. ವ್ಯಾಯಾಮದ ಕೊರತೆಯು ಮಹಿಳೆಯರಲ್ಲಿ ವಿಟಮಿನ್ ಡಿ ಕೊರತೆಗೆ ಒಳಗಾಗುವ ಇತರ ಕಾರಣಗಳಲ್ಲಿ ಒಂದಾಗಿದೆ ಎಂದಿದ್ದಾರೆ.
ಪ್ರಪಂಚದ ಇತರ ಭಾಗಗಳಲ್ಲಿರುವಂತೆ, ಕಾಶ್ಮೀರದಲ್ಲಿಯೂ ಹೆಚ್ಚಿನ ಮಹಿಳೆಯರು ಮನೆಗೆಲಸದಲ್ಲಿ ತೊಡಗಿರುತ್ತಾರೆ. ಸಾಕಷ್ಟು ಸೂರ್ಯನ ಬೆಳಕನ್ನು ಪಡೆಯಲು ಅವರು ಹೊರಗಡೆ ಹೋಗುವುದು ಕಡಿಮೆ. ಚಳಿಗಾಲದ ತಿಂಗಳಿನಲ್ಲಿ ಸೂರ್ಯನ ಬೆಳಕು ಇನ್ನಷ್ಟು ಕಡಿಮೆ ಇರುತ್ತದೆ. ಏಕೆಂದರೆ ಋತುವಿನ ಬಹುತೇಕ ಭಾಗವು ಮೋಡದಿಂದ ಕೂಡಿರುತ್ತದೆ.
ಇದನ್ನೂ ಓದಿ: ಇದರ ಬೆಲೆ ಕೇಳಿದ್ರೆ ಮೂರ್ಛೆ ಹೋಗೋದು ಗ್ಯಾರಂಟಿ; ಪ್ರಪಂಚದ ಬಲು ದುಬಾರಿ ತರಕಾರಿ ಇದು
ಪರಿಣಾಮವೇನು?: ಡಾ.ಸಲೀಂ ಮಾತನಾಡಿ, ವಿಟಮಿನ್ ಡಿ ಅತ್ಯಂತ ಪ್ರಮುಖವಾದ ವಿಟಮಿನ್ ಆಗಿದ್ದು, ಭೌತಿಕ ದೇಹದ ಬೆಳವಣಿಗೆ ಮತ್ತು ಕಾರ್ಯಕ್ಷಮತೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದ್ದರಿಂದ, ಆರೋಗ್ಯಕರ ಮತ್ತು ಬಲವಾದ ಮೂಳೆಗಳಿಗೆ ದೇಹದಲ್ಲಿ ವಿಟಮಿನ್ ಡಿ ಸಮತೋಲಿತ ಪ್ರಮಾಣದಲ್ಲಿರುವುದು ಬಹಳ ಮುಖ್ಯ. ವಿಟಮಿನ್ ಡಿ ಕೊರತೆಯು ಮಧುಮೇಹ ಸೇರಿದಂತೆ ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಈ ಕೊರತೆಯು ದೇಹವು ಅನೇಕ ರೀತಿಯ ಪೋಷಕಾಂಶಗಳು ಮತ್ತು ಖನಿಜಗಳನ್ನು ಹೀರಿಕೊಳ್ಳಲು ಕಷ್ಟಕರವಾಗಿಸುತ್ತದೆ.
ವಿಟಮಿನ್ ಡಿ ಕೊರತೆಯ ಲಕ್ಷಣಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಒಬ್ಬ ವ್ಯಕ್ತಿಯು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿರುವಾಗ ಕಿರಿಕಿರಿ, ಖಿನ್ನತೆ, ಬೆನ್ನು ನೋವು, ಕೀಲು ಸಮಸ್ಯೆಗಳು, ಸ್ನಾಯು ನೋವು ಇತ್ಯಾದಿಗಳನ್ನು ಅನುಭವಿಸುತ್ತಾನೆ. ಇದಲ್ಲದೇ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಕಾಲೋಚಿತ ರೋಗಗಳ ಅಪಾಯಗಳು ಹೆಚ್ಚಾಗುತ್ತವೆ.
ವಿಟಮಿನ್ ಡಿ ಯ ಅತ್ಯುತ್ತಮ ಮೂಲವೆಂದರೆ ಸೂರ್ಯ. ಆದರೆ, ಬಿಡುವಿಲ್ಲದ ಜೀವನಶೈಲಿಯಿಂದಾಗಿ, ಸಾಕಷ್ಟು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಕಷ್ಟ ಎಂದು ಡಾ ಸಲೀಂ ಹೇಳಿದರು. ಅದೇ ಸಮಯದಲ್ಲಿ, ಚಳಿಗಾಲದಲ್ಲಿ, ಹಿಮಪಾತ, ಮಳೆ ಮತ್ತು ತೀವ್ರ ಶೀತ ಹವಾಮಾನದ ಕಾರಣದಿಂದಾಗಿ ಸೂರ್ಯನಿಂದ ವಿಟಮಿನ್ ಪಡೆಯಲು ಸಾಧ್ಯವಿಲ್ಲ.
ಅಂತಹ ಸಂದರ್ಭದಲ್ಲಿ, ವಿಟಮಿನ್ ಡಿ ಕೊರತೆಯನ್ನು ಗುಣಪಡಿಸಲು, ಹಾಲು, ಮೊಟ್ಟೆ ಮತ್ತು ಚೀಸ್ ಅನ್ನು ತೆಗೆದುಕೊಳ್ಳಬೇಕು. ವಿಟಮಿನ್ ಡಿ ಕೊರತೆಯನ್ನು ನೀಗಿಸಲು ಔಷಧಿಗಳೂ ಮಾರುಕಟ್ಟೆಯಲ್ಲಿ ಲಭ್ಯವಿವೆ ಎಂದು ಅವರು ಹೇಳಿದರು.