ಶೀತ ಮತ್ತು ಕೆಮ್ಮಿನ ಚಿಕಿತ್ಸೆ ಅಥವಾ ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ನಾವು ಮನೆಮದ್ದುಗಳ ಬಗ್ಗೆ ಮಾತನಾಡಬೇಕಾದರೆ ಅದರಲ್ಲಿ ಜೇನು ತುಪ್ಪ ಮೊದಲ ಸ್ಥಾನದಲ್ಲಿ ಇರುತ್ತದೆ. ಇದರ ಪ್ರಯೋಜನಗಳನ್ನು ಆಯುರ್ವೇದದಲ್ಲಿ ಗುರುತಿಸಲಾಗಿದೆ ಮತ್ತು ಇದು ಪ್ರತಿ ಹಂತದಲ್ಲಿಯೂ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಅದರ ಕೆಲವು ಪ್ರಯೋಜನಗಳನ್ನು ಮತ್ತು ಇತರ ಪದಾರ್ಥಗಳೊಂದಿಗೆ ಸಂಯೋಜಿಸಿದಾಗ ಅದರ ಗುಣಲಕ್ಷಣಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಆಯುರ್ವೇದದ ಪ್ರಕಾರ ಜೇನುತುಪ್ಪವು ತನ್ನದೇ ಆದ ಶಕ್ತಿಯನ್ನು ಹೊಂದಿಲ್ಲವಂತೆ. ಆದರೆ ಅದನ್ನು ಇತರ ಪದಾರ್ಥಗಳ ಜೊತೆ ಸಂಯೋಜಿಸಿದಾಗ ಅದು ಔಷಧಿಯ ರೂಪ ಪಡೆದಯುತ್ತದೆ ಎನ್ನಲಾಗ್ತಿದೆ. ಅದಕ್ಕಾಗಿಯೇ ಜೇನುತುಪ್ಪವನ್ನು ಅನೇಕ ಆಯುರ್ವೇದ ಔಷಧಗಳು ಮತ್ತು ಗಿಡಮೂಲಿಕೆಗಳಿಗೆ ಆದರ್ಶ ಸೇರ್ಪಡೆ ಎಂದು ಪರಿಗಣಿಸಲಾಗುತ್ತದೆ. ಪರಿಣಾಮ ಜೇನುತುಪ್ಪವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಪೌಷ್ಠಿಕಾಂಶದ ಬಗ್ಗೆ ನಾವು ಮಾತನಾಡುವುದಾದರೆ ಜೇನುತುಪ್ಪವು ಫ್ರಕ್ಟೋಸ್, ನಿಯಾಸಿನ್, ಕಾರ್ಬೋಹೈಡ್ರೇಟ್‌ಗಳು, ರೈಬೋಫ್ಲಾವಿನ್, ವಿಟಮಿನ್ ಬಿ 6, ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಕ್ಯಾಲೋರಿಗಳು, ಸೋಡಿಯಂ, ಪೊಟ್ಯಾಸಿಯಮ್ ಮತ್ತು ಡಯೆಟರಿ ಫೈಬರ್ ಸೇರಿದಂತೆ ವಿವಿಧ ಪೋಷಕಾಂಶಗಳನ್ನು ಒಳಗೊಂಡಿದೆ. ಇದರಲ್ಲಿ ಆ್ಯಂಟಿಬಯೋಟಿಕ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳು ಹೇರಳವಾಗಿ ಕಂಡುಬರುತ್ತವೆ.
ಜೇನುತುಪ್ಪದ ಪ್ರಯೋಜನಗಳು : ಮುಂಬೈನ ಡಾ. ನಿರೋಗ್ ಆಯುರ್ವೇದಿಕ್ ಆಸ್ಪತ್ರೆಯ ಆಯುರ್ವೇದ ತಜ್ಞೆ ಮನಿಷಾ ಕಾಳೆ ಪ್ರಕಾರ, ಆಯುರ್ವೇದದಲ್ಲಿ ದೇಹದಲ್ಲಿ ಕಫ, ವಿಷ, ಬಿಕ್ಕಳಿಕೆ ಇತ್ಯಾದಿಗಳನ್ನು ತೊಡೆದುಹಾಕಲು ಜೇನುತುಪ್ಪವನ್ನು ಸೂಕ್ತವೆಂದು ಪರಿಗಣಿಸಲಾಗಿದೆ. ಜೇನುತುಪ್ಪದ ಸೇವನೆಯು ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಲವಾರು ಮನೆಮದ್ದುಗಳಲ್ಲಿ ಜೇನುತುಪ್ಪ ಇರುತ್ತದೆ. ಇದು ನಿರ್ದಿಷ್ಟ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಉದಾಹರಣೆಗೆ, ಉಗುರುಬೆಚ್ಚಗಿನ ನೀರಿನಿಂದ ಜೇನುತುಪ್ಪವನ್ನು ಸೇವಿಸುವುದು ಅಥವಾ ಹಸಿಯಾಗಿ ಸೇವಿಸುವುದು ಮಲಬದ್ಧತೆ, ನೋಯುತ್ತಿರುವ ಗಂಟಲು, ತೂಕ ನಷ್ಟ ಇತ್ಯಾದಿ ಜೀರ್ಣಕಾರಿ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ ಎಂದಿದ್ದಾರೆ.
ಇದನ್ನು ಫೇಸ್ ಮಾಸ್ಕ್ಆಗಿಯೂ ಬಳಕೆ ಮಾಡಬಹುದಾಗಿದೆ. ( ಕಡಲೆ ಹಿಟ್ಟು, ಅರಿಶಿನದೊಂದಿಗೆ ಮಿಕ್ಸ್ ಮಾಡಬೇಕು) ಈ ರೀತಿಯ ಬಳಕೆಯಿಂದ ಚರ್ಮಕ್ಕೆ ಹೊಳಪು ಬರುತ್ತದೆ. ಇದಲ್ಲದೆ, ಜೇನುತುಪ್ಪವು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು, ಗಾಯಗಳನ್ನು ಗುಣಪಡಿಸಲು, ನಿರ್ವಿಶೀಕರಣ, ಹಸಿವನ್ನು ಸುಧಾರಿಸಲು ಮತ್ತು ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ.
ಪ್ರಮುಖವಾಗಿ ಆರೋಗ್ಯ ಪ್ರಯೋಜನಗಳ ವಿಷಯದಲ್ಲಿ ಜೇನುತುಪ್ಪವು ಅನೇಕ ಇತರ ಗಿಡಮೂಲಿಕೆಗಳು ಮತ್ತು ಪದಾರ್ಥಗಳೊಂದಿಗೆ ಉತ್ತಮ ಪಾಲುದಾರ ವಸ್ತುವಾಗಿದೆ.
ನಿಂಬೆ ಮತ್ತು ಜೇನುತುಪ್ಪ: ಉಗುರುಬೆಚ್ಚಗಿನ ನೀರು ಮತ್ತು ನಿಂಬೆ ರಸದೊಂದಿಗೆ ಜೇನುತುಪ್ಪವನ್ನು ಸೇವಿಸುವುದು ಅದರಲ್ಲೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮವೆಂದು ಪರಿಗಣಿಸಲಾಗುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ, ಇದು ತೂಕವನ್ನು ಕಡಿಮೆ ಮಾಡುತ್ತದೆ. ದೇಹವನ್ನು ಹೈಡ್ರೀಕರಿಸುತ್ತದೆ ಮತ್ತು ಸೌಂದರ್ಯವನ್ನು ಹೆಚ್ಚಿಸುತ್ತದೆ.
ಒಣ ಖರ್ಜೂರ ಮತ್ತು ಜೇನುತುಪ್ಪ: ಒಣ ಖರ್ಜೂರದಲ್ಲಿ ನಾರಿನಂಶ, ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ ಮುಂತಾದ ಹಲವು ವಿಧದ ಪೋಷಕಾಂಶಗಳು ಕಂಡುಬರುತ್ತವೆ. ಆದ್ದರಿಂದ ಇವುಗಳನ್ನು ಜೇನುತುಪ್ಪದೊಂದಿಗೆ ಸೇರಿಸಿದಾಗ ಇವೆರಡರ ಗುಣಗಳು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಇದು ಮುಖ್ಯವಾಗಿ ನೆನಪಿನ ಶಕ್ತಿ, ದೈಹಿಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಹಸಿವನ್ನು ಹೆಚ್ಚಿಸುತ್ತದೆ.
ಪುರುಷರ ಆರೋಗ್ಯದ ಬಗ್ಗೆ ಹೇಳುವುದಾದರೆ ಇದು ಉತ್ತಮ ಸಂಯೋಜನೆಯಾಗಿದೆ. ಇದು ಅವರ ಲೈಂಗಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜೊತೆಗೆ ಅವರ ವೀರ್ಯದ ಸಂಖ್ಯೆಯನ್ನೂ ಹೆಚ್ಚು ಮಾಡುತ್ತದೆ.
ಮೆಂತ್ಯ ಮತ್ತು ಜೇನುತುಪ್ಪ: ಮೆಂತ್ಯ ಮತ್ತು ಜೇನುತುಪ್ಪವನ್ನು ಸಹ ಆದರ್ಶ ಸಂಯೋಜನೆ ಎಂದು ಪರಿಗಣಿಸಲಾಗುತ್ತದೆ. ಈ ಸಂಯೋಜನೆಯು ವೈರಲ್ ಜ್ವರದ ಚಿಕಿತ್ಸೆಯಿಂದ ಹಿಡಿದು ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ತೂಕವನ್ನು ಕಡಿಮೆ ಮಾಡುವುದು, ಜೀರ್ಣಕಾರಿ ಸಮಸ್ಯೆಗಳು, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದು, ಪುರುಷರಲ್ಲಿ ಟೆಸ್ಟೋಸ್ಟೆರಾನ್ ಅನ್ನು ಹೆಚ್ಚಿಸುವುದು, ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುವುದು, ತಾಯಂದಿರಲ್ಲಿ ಎದೆಹಾಲು ಹೆಚ್ಚಿಸುವುದು ಇತ್ಯಾದಿ.
ಇದನ್ನು ಸೇವಿಸುವ ವಿಧಾನವೆಂದರೆ ಮೆಂತ್ಯ ಬೀಜಗಳನ್ನು ನೀರು ಹಾಕಿ ಕುದಿಸಿ ಅದು ತಣ್ಣಗಾದ ಮೇಲೆ ಅದಕ್ಕೆ ಜೇನುತುಪ್ಪವನ್ನು ಸೇರಿಸಬೇಕು.
ಜೇನುತುಪ್ಪದೊಂದಿಗೆ ಏನನ್ನು ಸಂಯೋಜಿಸಬಾರದು? ಡಾ. ಮನೀಶಾ ವಿವರಿಸುವಂತೆ.. ತುಪ್ಪ, ಎಣ್ಣೆ ಅಥವಾ ಕೊಬ್ಬಿನ ವಸ್ತುಗಳು, ತುಂಬಾ ಬಿಸಿ ನೀರು, ಹಾಲು ಅಥವಾ ಯಾವುದೇ ಇತರ ಪಾನೀಯ ಮತ್ತು ದ್ರಾಕ್ಷಿ ಜೊತೆ ಸೇರಿಸಬಾರದಂತೆ.
ಜೇನುತುಪ್ಪದ ಸೇವನೆಯು ಸುರಕ್ಷಿತವಾಗಿದ್ದರೂ ಕೆಲವು ಸಂದರ್ಭಗಳಲ್ಲಿ ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅಲ್ಲದೆ, ಮಾರುಕಟ್ಟೆಯಲ್ಲಿ ಅನೇಕ ಕಂಪನಿಗಳು ಜೇನುತುಪ್ಪವನ್ನು ಮಾರಾಟ ಮಾಡುತ್ತವೆ. ಇದರಲ್ಲಿ ಸಕ್ಕರೆ ಅಂಶ ಕೂಡ ಇರುತ್ತದೆ ಮತ್ತು ಕೆಲವರ ಆರೋಗ್ಯದ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ, ಶುದ್ಧ ಜೇನುತುಪ್ಪವನ್ನು ಖರೀದಿಸಲು ಪ್ರಯತ್ನಿಸಿ. ಜೇನುತುಪ್ಪವನ್ನು ಯಾವುದೇ ಇತರ ಘಟಕಾಂಶದೊಂದಿಗೆ ಅಥವಾ ಮನೆಮದ್ದಾಗಿ ಸೇವಿಸುವ ಮೊದಲು, ನಿಮ್ಮ ವೈದ್ಯರನ್ನು ಒಮ್ಮೆ ಸಂಪರ್ಕಿಸಿ.