ಹೈದರಾಬಾದ್: ಹದಿಹರೆಯದ ಸಮಯದಲ್ಲಿ ಸಕ್ಕರೆಯುಕ್ತ ಪಾನೀಯಗಳನ್ನು ಹೆಚ್ಚು ಸೇವಿಸುವುದರಿಂದ ಮೆದುಳಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮುಂದಿನ ದಿನಗಳಲ್ಲಿ ಕಲಿಕೆ ಮತ್ತು ನೆನಪಿನಶಕ್ತಿಯ ದುರ್ಬಲತೆ ಉಂಟಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
ಹಿಂದಿನ ಸಂಶೋಧನೆಗಳು ಅಧಿಕ ಸಕ್ಕರೆಯುಕ್ತ ಆಹಾರ ಬೊಜ್ಜು ಮತ್ತು ಹೃದ್ರೋಗಕ್ಕೆ ಕಾರಣವಾಗಬಹುದು ಎಂದು ಹೇಳಿತ್ತು. ಆದರೆ ಇದೀಗ ಮಾನಸಿಕ ಬೆಳವಣಿಗೆಯ ಮೇಲೆಯೂ ಇದು ಪರಿಣಾಮ ಬೀರಲಿದೆ ಎಂದು ತಿಳಿದುಬಂದಿದೆ.
ಟ್ರಾನ್ಸ್‌ಟೇಶನಲ್ ಸೈಕಿಯಾಟ್ರಿ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಸಂಶೋಧನಾ ವರದಿಯು, ಆರಂಭಿಕ ಜೀವನದಲ್ಲಿ ಸಕ್ಕರೆಯುಕ್ತ ಪಾನೀಯಗಳ ಹೆಚ್ಚಿನ ಸೇವನೆಯು ಪ್ಯಾರಾ ಬ್ಯಾಕ್ಟೀರಾಯ್ಡ್‌ಗಳ ಮಟ್ಟವನ್ನು ಹೆಚ್ಚಿಸಿದೆ ಎಂದು ತಿಳಿಸಿದೆ. ಇದು ಒಂದು ರೀತಿಯ ಕರುಳಿನ ಬ್ಯಾಕ್ಟೀರಿಯಾವಾಗಿದ್ದು, ಸ್ಮರಣೆ ಮತ್ತು ಕಲಿಕೆಯ ಕಾರ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.
ಅಧ್ಯಯನಕ್ಕಾಗಿ ಇಲಿಗಳಿಗೆ ಶೇಕಡಾ 11ರಷ್ಟು ಸಕ್ಕರೆ ದ್ರಾವಣವನ್ನು ನೀಡಲಾಯಿತು ಹಾಗೂ ಅವುಗಳ ಮೆಮೊರಿ ಕಾರ್ಯವನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ಸಕ್ಕರೆ ಸೇವಿಸುವ ಇಲಿಗಳು ಹಾಗೂ ಸೇವಿಸದ ಇಲಿಗಳ ಮೆದುಳಿನ ಸಾಮರ್ಥ್ಯವನ್ನು ಅಳೆಯಲಾಯಿತು.
ಕರುಳಿನ ಬ್ಯಾಕ್ಟೀರಿಯಾವು ಮೆದುಳಿನ ಬೆಳವಣಿಗೆಯನ್ನು ಹೇಗೆ ಬದಲಾಯಿಸುತ್ತದೆ ಎಂಬುದರ ಕುರಿತು ಸಂಶೋಧನೆಯ ಅಧ್ಯಯನಕಾರರು ವಿವರಿಸಿದ್ದಾರೆ.