ಭಾರತದಲ್ಲಿ, ಅದರಲ್ಲಿಯೂ ಕೋವಿಡ್ -19 ಸಾಂಕ್ರಾಮಿಕ ಆರಂಭದ ನಂತರ ಅನೇಕರು ಫಿಟ್ನೆಸ್ಗೆ ಆದ್ಯತೆ ನೀಡುತ್ತಿದ್ದಾರೆ. ಆದರೆ ಇದಕ್ಕೆ ಸ್ವಲ್ಪ ಟ್ವಿಸ್ಟ್ ಸೇರಿಸುವುದು ಆಸಕ್ತಿಕರ ವಿಚಾರವಾಗಿದ್ದು, 'ಜೋಡಿ ಯೋಗ' (ದಂಪತಿ ಯೋಗ) ಈಗ ಟ್ರೆಂಡಿಂಗ್ನಲ್ಲಿದೆ. ನಿಮ್ಮ ಸಂಗಾತಿಯೊಂದಿಗೆ ಯೋಗ ಮಾಡುವ ಮೂಲಕ ಅವರೊಂದಿಗೆ ನೀವು ಹೆಚ್ಚು ಆತ್ಮೀಯರಾಗಬಹುದಾಗಿದೆ. ನವ ದಂಪತಿಯಲ್ಲಿ ಈ ಪ್ರವೃತ್ತಿ ಹೆಚ್ಚುತ್ತಿದ್ದು, ಅವರ ಆರೋಗ್ಯ ಸುಧಾರಣೆ ಜೊತೆಗೆ ಪ್ರೀತಿಯೂ ದುಪ್ಪಟ್ಟಾಗುತ್ತಿದೆ.
ಇತ್ತೀಚೆಗಷ್ಟೇ ಗೋವಾದ ಕಡಲ ಕಿನಾರೆಯಲ್ಲಿ ಪತಿ ಬ್ರೆಂಟ್ ಗೋಬ್ಲೆಯೊಂದಿಗೆ ಕಿರುತೆರೆ ನಟಿ ಆಶ್ಕಾ ಗೊರಾಡಿಯಾ ಯೋಗಾಸನ ಮಾಡುತ್ತಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಇದು ಸಖತ್ ವೈರಲ್ ಆಗಿತ್ತು.
ಜೋಡಿ ಯೋಗದ ಪ್ರಯೋಜನಗಳು..
ನಮ್ಮ ವೇಗದ ಜೀವನದಲ್ಲಿ, ನಾವು ಸಾಮಾನ್ಯವಾಗಿ ಎರಡು ಪ್ರಮುಖ ವಿಷಯಗಳನ್ನು ನಿರ್ಲಕ್ಷಿಸುತ್ತೇವೆ, ಒಂದು ನಮ್ಮ ಆರೋಗ್ಯ ಮತ್ತು ಇನ್ನೊಂದು ಸಂಗಾತಿಯೊಂದಿಗೆ ಸಮಯ ಕಳೆಯುವುದು. ಹೀಗಾಗಿ ನಿಮ್ಮ ಸಂಗಾತಿಯ ಜೊತೆ ಯೋಗ ಆಸನಗಳನ್ನು (ಭಂಗಿಗಳು) ಮಾಡುವುದರಿಂದ ನಿಮ್ಮನ್ನು ಸದೃಢರನ್ನಾಗಿಸುವುದಲ್ಲದೇ ನಿಮ್ಮ ಸಂಗಾತಿಯನ್ನು ರೋಮ್ಯಾಂಟಿಕ್ ಆಗಿ ಸನಿಹ ಸೆಳೆಯುತ್ತದೆ. ಅವರ ನಡುವೆ ಪರಸ್ಪರ ನಂಬಿಕೆ, ದೈಹಿಕ ಮತ್ತು ಭಾವನಾತ್ಮಕವಾಗಿ ಹೊಂದಾಣಿಕೆ, ಆತ್ಮೀಯತೆ ಮತ್ತು ಉತ್ತಮ ಸಂವಹನ ಏರ್ಪಡುತ್ತದೆ. ಬ್ಯುಸಿ ಲೈಫ್ನಲ್ಲಿ ಇದು ಹೆಚ್ಚು ರಿಲ್ಯಾಕ್ಸ್ ನೀಡಲಿದೆ.
ಇದನ್ನೂ ಓದಿ: ರಜೆಯ ಮಜಾದಲ್ಲಿ ಆಶ್ಕಾ ಗೊರಾಡಿಯಾ; ಕಡಲ ಕಿನಾರೆಯಲ್ಲಿ ಪತಿಯೊಂದಿಗೆ ಯೋಗಾ - ಚಿತ್ರಗಳನ್ನು ನೋಡಿ
ಕೆಲವು ಸುಲಭ ಜೋಡಿ ಯೋಗಾಸನಗಳು ಇಲ್ಲಿವೆ:
1.ಜೊತೆ ಜೊತೆಯಾಗಿ ಉಸಿರಾಟ
- ಇಬ್ಬರೂ ಪದ್ಮಾಸನದಲ್ಲಿ ಒಬ್ಬರಿಗೊಬ್ಬರಿಗೆ ಒರಗಿ ಕುಳಿತುಕೊಳ್ಳಬೇಕು
- ನಿಮ್ಮ ಕಣ್ಣುಗಳನ್ನು ಮುಚ್ಚಿ, ಉಸಿರಾಟದ ಮೇಲೆ ನಿಮ್ಮ ಗಮನ ಕೇಂದ್ರೀಕರಿಸಿ
- ನಿಧಾನ ಮತ್ತು ದೀರ್ಘವಾಗಿ ಉಸಿರಾಡಿ
- ಹೀಗೆ 3-5 ನಿಮಿಷಗಳ ಕಾಲ ಮಾಡಿ
2.ನೌಕಾಸನ (ದೋಣಿ ಭಂಗಿ)
- ಇಬ್ಬರೂ ಸೇರಿ ದೋಣಿಯ ಆಕಾರವನ್ನು ರೂಪಿಸುವುದು
- ಇದನ್ನು ಪರಿಪೂರ್ಣ ನವಾಸನ, ಅರ್ಧ ನವಾಸನ, ಏಕಪಾದ ನವಾಸನದ ಮೂಲಕ ಮಾಡಿ
- ನೆಲದ ಮೇಲೆ 3 ಅಡಿ ಅಂತರದಲ್ಲಿ ಪರಸ್ಪರ ಎದುರು-ಬದುರು ಕುಳಿತುಕೊಳ್ಳಿ
- ಮೊದಲು ನಿಮ್ಮ ಎರಡೂ ಕೈಗಳನ್ನು ಹಿಡಿದುಕೊಳ್ಳಿ, ನಂತರ ನಿಧಾನವಾಗಿ ನಿಮ್ಮ ಪಾದಗಳನ್ನು ಮೇಲಕ್ಕೆತ್ತಿ ನಿಮ್ಮ ಸಂಗಾತಿಯ ಪಾದದೊಂದಿಗೆ ಸೇರಿಸಿ
- ನಿಮ್ಮ ಕಾಲುಗಳನ್ನು ಎಷ್ಟು ಸಾಧ್ಯವೋ ಅಷ್ಟು ವಿಸ್ತರಿಸಿ, ಜೊತೆಗೆ ಸಮತೋಲನವನ್ನು ಕಾಪಾಡಿಕೊಳ್ಳಿ
ಇದನ್ನೂ ಓದಿ: ಈ ವ್ಯಾಯಾಮಗಳನ್ನು ಮಾಡಿದ್ರೆ 40ರ ಪ್ರಾಯದಲ್ಲೂ 10 ವರ್ಷ ಚಿಕ್ಕವರಾಗ್ತೀರಿ..
3.ಪಶ್ಚಿಮಮೋತ್ಥಾಸನ / ಮತ್ಸ್ಯಾಸನ
ಕಾಲುಗಳನ್ನು ಮತ್ತು ಬೆನ್ನನ್ನು ಹಿಗ್ಗಿಸಲು ಪಶ್ಚಿಮಮೋತ್ಥಾಸನ ಅಥವಾ ಮತ್ಸ್ಯಾಸನವು ಅತ್ಯುತ್ತಮ ಭಂಗಿಯಾಗಿದೆ. ಈ ಭಂಗಿಯು ಸ್ವಲ್ಪ ಸವಾಲಿನದ್ದಾಗಿರಬಹುದು. ಇದನ್ನು ನಿಧಾನವಾಗಿ ಮಾಡಬೇಕು, ಇಲ್ಲದಿದ್ದರೆ ನಿಮಗೆ ಅಥವಾ ನಿಮ್ಮ ಸಂಗಾತಿಗೆ ನೋವು ಕಾಣಿಸಿಕೊಳ್ಳಬಹುದು.
- ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಬೆನ್ನು ಒತ್ತಿಕೊಂಡು ಜೊತೆಯಲ್ಲಿ ಕುಳಿತುಕೊಳ್ಳಿ
- ಈಗ ನಿಧಾನವಾಗಿ, ಒಬ್ಬರು ತಮ್ಮ ಬೆನ್ನಿನಿಂದ ಮತ್ತೊಬ್ಬರ ಮೇಲೆ ಬಂದು ಭುಜದ ಕಡೆಗೆ ವಾಲಬೇಕು
- ಆದರೆ ಇಬ್ಬರೂ ಎರಡೂ ಪಾದಗಳನ್ನು ನೆಲದ ಮೇಲೆ ಇಟ್ಟುಕೊಳ್ಳಬೇಕು
- ಈ ಪ್ರಕ್ರಿಯೆಯಲ್ಲಿ ಒಬ್ಬರ ಮುಖ ನೆಲದ ಕಡೆಗೆ ಮತ್ತು ಇನ್ನೊಬ್ಬರು ಆಕಾಶದ ಕಡೆಗೆ ನೋಡಬೇಕು
- ಇದನ್ನು ಆಳವಾದ ಉಸಿರಿನೊಂದಿಗೆ ಐದರಿಂದ ಆರು ಬಾರಿ ಮಾಡಿ ಮತ್ತು ಪುನರಾವರ್ತಿಸಿ
4.ಅಧೋಮುಖ ಶ್ವಾನಾಸನ / ಬಾಲಾಸನ
- ಈ ಆಸನವು ನಿಮಗೆ ಸಂಪೂರ್ಣ ಬಾಡಿ ಸ್ಟ್ರೆಚ್ ನೀಡುತ್ತದೆ
- ಬಾಲಾಸನದಲ್ಲಿ ಕುಳಿತುಕೊಳ್ಳಿ, ನಿಮ್ಮ ಮೊಣಕಾಲುಗಳನ್ನು ಬಾಗಿಸಿ ಮತ್ತು ಕೈಗಳನ್ನು ಮುಂದೆ ಹರಡಿ
- ಈಗ ನಿಮ್ಮ ಸಂಗಾತಿ ನಿಮ್ಮ ಮುಂದೆ ನಿಲ್ಲುವಂತೆ ಮಾಡಿ ಮತ್ತು ಬಾಲಾಸನದಲ್ಲಿ ಕುಳಿತಿರುವ ವ್ಯಕ್ತಿಯು ನಿಂತಿರುವ ಸಂಗಾತಿಯ ಪಾದಗಳನ್ನು ಹಿಡಿಯಬೇಕು
- ಈಗ ನಿಂತಿರುವ ವ್ಯಕ್ತಿಯು ಮುಂದೆ ಬಾಗಬೇಕು ಮತ್ತು ಕುಳಿತವರ ಸೊಂಟವನ್ನು ಹಿಡಿಯಬೇಕು
- ಈ ವೇಳೆ ನಿಮ್ಮ ಸಂಗಾತಿಯ ಬೆನ್ನುಮೂಳೆಯ ಮೇಲೆ ಭಾರ ಆಗದಂತೆ ನೋಡಿಕೊಳ್ಳಿ
- ಈ ಭಂಗಿಯಲ್ಲಿ ಐದರಿಂದ ಆರು ಬಾರಿ ದೀರ್ಘವಾದ ಉಸಿರನ್ನು ತೆಗೆದುಕೊಳ್ಳಿ
ಇದನ್ನೂ ಓದಿ: ಅಸ್ತಮಾದಿಂದ ವಿಮುಕ್ತಿ ಪಡೆಯಲು ನಿತ್ಯ ತಪ್ಪದೇ ಈ 8 ಯೋಗಾಸನಗಳನ್ನು ಮಾಡಿ
5.ಪಾರ್ಟ್ನರ್ ಟ್ವಿಸ್ಟ್
- ಇದನ್ನು ಮಾಡಲು ಧ್ಯಾನದ ಭಂಗಿಯಲ್ಲಿ ಪರಸ್ಪರ ನಿಮ್ಮ ಬೆನ್ನು ಒರಗಿಸಿ ಕುಳಿತುಕೊಳ್ಳಿ
- ಈಗ ದೀರ್ಘವಾಗಿ ಉಸಿರಾಡಿ ಮತ್ತು ಇಬ್ಬರೂ ನಿಮ್ಮ ದೇಹವನ್ನು ನಿಮ್ಮ ಬಲಕ್ಕೆ ತಿರುಗಿಸಿ
- ನಿಮ್ಮ ಕೈಯನ್ನು ನಿಮ್ಮ ಸಂಗಾತಿಯ ಮೊಣಕಾಲು ಅಥವಾ ತೊಡೆಯ ಮೇಲೆ ಇರಿಸಿ
- ನಿಧಾನವಾಗಿ ಉಸಿರನ್ನು ಬಿಡುತ್ತಾ ಸಾಮಾನ್ಯ ಸ್ಥಿತಿಗೆ ಬನ್ನಿ
- ಇತರ ದಿಕ್ಕಿನೊಂದಿಗೆ ಅದೇ ರೀತಿ ಪುನರಾವರ್ತಿಸಿ
6.ದೇಗುಲ ಭಂಗಿ
- ಈ ಆಸನದಲ್ಲಿ ನೀವು ನಿಮ್ಮ ಕೈಗಳಿಂದ ದೇವಾಲಯದಂತಹ ಭಂಗಿಯನ್ನು ಮಾಡಬೇಕು
- ಪರಸ್ಪರ ಮುಖಾಮುಖಿಯಾಗಿ ನಿಂತು, ದೀರ್ಘ ಉಸಿರನ್ನು ತೆಗೆದುಕೊಳ್ಳಿ ಮತ್ತು ಸೊಂಟದ ಮೇಲಿನ ಭಾಗವನ್ನು ಮುಂದಕ್ಕೆ ಬಾಗಿಸಿ
- ನಿಮ್ಮ ಕೈಗಳನ್ನು ಮೇಲಕ್ಕೆತ್ತಿ ಮತ್ತು ನಿಮ್ಮ ಸಂಗಾತಿಯೊಂದಿಗೆ ಸೇರಿಕೊಳ್ಳಿ
- ನಿಮ್ಮ ಅಂಗೈ ಮತ್ತು ಮೊಣಕೈ ಎರಡನ್ನೂ ನಿಮ್ಮ ಸಂಗಾತಿಯ ಅಂಗೈ ಮತ್ತು ಮೊಣಕೈಗೆ ತಾಗುವಂತೆ ನೋಡಿಕೊಳ್ಳಿ
- ಈ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ನಿಂತು ನಂತರ 5-6 ಬಾರಿ ಪುನರಾವರ್ತಿಸಿ