ಹೈದರಾಬಾದ್: ಚಳಿಗಾಲದಲ್ಲಿ ಬಹುತೇಕರನ್ನು ಕಾಡುವ ಸಮಸ್ಯೆ ಒಣ ತುಟಿ. ಚಳಿ ಮತ್ತು ಶುಷ್ಕತೆ ಇದಕ್ಕೆ ಪ್ರಮುಖ ಕಾರಣ. ಕೇವಲ ತುಟಿ ಮಾತ್ರವಲ್ಲದೇ ತ್ವಚೆ ಕೂಡ ಈ ಸಮಯದಲ್ಲಿ ಬಿರುಸಾಗುತ್ತದೆ. ಆದರೆ ತುಟಿ ಒಡೆಯುವಿಕೆ ಹೆಚ್ಚು ಬಾಧಿಸುವುದು ಸುಳ್ಳಲ್ಲ. ತುಟಿ ಚರ್ಮ ಕಿತ್ತು ಬರುವುದು ಮತ್ತು ಕತ್ತರಿಸಿದ ಅನುಭವ ನೋವುದಾಯಕವಾಗಿರುತ್ತದೆ. ಈ ಹಿನ್ನೆಲೆ ಚಳಿಗಾಲದಲ್ಲಿ ಹೆಚ್ಚಿನ ರಕ್ಷಣೆ ಒದಗಿಸುವುದು ಅತ್ಯವಶ್ಯಕವಾಗಿದೆ. ಅದಕ್ಕೆ ಇರುವ ಸರಳ ಉಪಾಯಗಳು ಇಲ್ಲಿವೆ.
ಹೈಡ್ರೇಡ್: ಚಳಿಗಾಲದಲ್ಲಿ ಬಹುತೇಕರು ಮಾಡುವ ತಪ್ಪು ಎಂದರೆ, ಕಡಿಮೆ ನೀರು ಕುಡಿಯುವುದು. ಚಳಿ ಹಿನ್ನೆಲೆ ಹೆಚ್ಚು ಬಾಯಾರಿಕೆ ಎನಿಸುವುದಿಲ್ಲ ಎಂದು ಅನೇಕ ಮಂದಿ ನೀರು ಕುಡಿಯುವುದಿಲ್ಲ. ಆದರೆ, ಚಳಿಗಾಲದಲ್ಲೂ ಅಗತ್ಯ ಪ್ರಮಾಣದ ನೀರು ಕುಡಿಯದೇ ಇದ್ದಾಗ ಇದು ಹಲವು ಸಮಸ್ಯೆಗೆ ಕಾರಣವಾಗುತ್ತದೆ. ದೇಹ ಹೆಚ್ಚು ಹೈಡ್ರೇಟ್ ಆದಂತೆ ದೇಹ ಮತ್ತು ತುಟಿಗೆ ನೈಸರ್ಗಿಕ ಮಾಶ್ಚರೈಸರ್ ಲಭ್ಯವಾಗುತ್ತದೆ.
ಲಿಪ್ ಬಾಮ್ ಬಳಕೆ: ಉತ್ತಮ ಗುಣಮಟ್ಟದ ಬಾಮ್ಗಳನ್ನು ರಾತ್ರಿ ಸಮಯದಲ್ಲಿ ಹಚ್ಚುವುದರಿಂದಲೂ ಇದಕ್ಕೆ ಪರಿಹಾರ ಕಾಣಬಹುದು. ಇದು ತುಟಿಯ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಮಲಗಿದ್ದಾಗ ಈ ಲಿಪ್ ಬಾಮ್ ಹಚ್ಚುವುದರಿಂದ ಒಳಗಿನಿಂದ ಪೋಷಣೆ ಮತ್ತು ಮಾಶ್ಚರೈಸೇಷನ್ ಲಭ್ಯವಾಗುತ್ತದೆ.
ಈ ಅಭ್ಯಾಸ ಬೇಡ: ಚಳಿಗಾಲದಲ್ಲಿ ತುಟಿ ಬಿರಿದಾಗ ಅನೇಕ ಮಂದಿ ಅದನ್ನು ಕೀಳುವ ಅಥವಾ ಅದನ್ನು ನಾಲಿಗೆಯಿಂದ ಒದ್ದೆ ಮಾಡಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುತ್ತಾರೆ. ನಾಲಿಗೆಯಲ್ಲಿನ ಸಲೈವಾ ನಿಮ್ಮ ತುಟಿಯನ್ನು ಮತ್ತು ನಿರ್ಜಲೀಕರಣಗೊಳಿಸಿ ಒಣಗಿದಂತೆ ಮಾಡುತ್ತದೆ.
ತುಟಿಯ ಸತ್ತ ಚರ್ಮ ತೆಗೆಯಿರಿ: ಚಳಿಗಾಲದಲ್ಲಿ ಅನೇಕ ಬಾರಿ ತುಟಿ ಒಣಗಲು ಸತ್ತ ಕೋಶಗಳು ಕಾರಣವಾಗಿರುತ್ತವೆ. ಹೀಗಾಗಿ ಲಿಪ್ ಸ್ಕ್ರಬ್ ಬಳಸಿ ಅದನ್ನು ತೆಗೆಯುವ ಯತ್ನ ಮಾಡಿ. ಇದಾದ ಬಳಿಕ ತುಟಿಗೆ ಲಿಪ್ ಬಾಮ್ ಹಚ್ಚುವ ಮೂಲಕ ಮೃದುತ್ವ ಕಾಪಾಡಿಕೊಳ್ಳಬಹುದು
ಈ ಉತ್ಪನ್ನಗಳ ಬಳಕೆ ಬೇಡ: ಅನೇಕ ಉತ್ಪನ್ನಗಳಲ್ಲಿ ಆಲ್ಕೋಹಾಲ್ ಅಥವಾ ಸುವಾಸನೆಗೆ ಕೆಲವು ರಾಸಾಯನಿಕಗಳನ್ನು ಬಳಕೆ ಮಾಡಿರುತ್ತಾರೆ. ಇದು ತುಟಿಯನ್ನು ಮತ್ತಷ್ಟು ಒರಟಾಗಿಸುತ್ತದೆ. ಈ ಹಿನ್ನೆಲೆ ಮಾರುಕಟ್ಟೆ ಉತ್ಪನ್ನಗಳ ಆಯ್ಕೆ ಮಾಡುವಾಗ ಈ ಬಗ್ಗೆ ಪರಿಶೀಲಿಸುವುದು ಅಗತ್ಯ.
ಸಮತೋಲಿತ ಆಹಾರ: ನಿಮ್ಮ ಆಹಾರವೂ ವಿಟಮಿನ್ ಮತ್ತು ಪ್ರಮುಖ ಫ್ಯಾಟಿ ಆ್ಯಸಿಡ್ ಹಾಗೂ ಪೋಷಕಾಂಶಗಳಿಂದ ಕೂಡಿದೆಯಾ ಎಂಬುದು ಮುಖ್ಯವಾಗುತ್ತದೆ. ತುಟಿಗೆ ಆಳವಾದ ಆರೈಕೆ ಸಿಗದೇ ಬಾಹ್ಯವಾದ ಆರೈಕೆ ಮಾಡಿದರೆ ಹೆಚ್ಚಿನ ಪ್ರಯೋಜನ ಲಭ್ಯವಾಗದು. (ಎಎನ್ಐ)
ಇದನ್ನೂ ಓದಿ: ಚಳಿಗಾಲದಲ್ಲಿ ಆರೋಗ್ಯಯುತ ಕೂದಲ ನಿರ್ವಹಣೆಗೆ ಸಹಾಯ ಮಾಡುತ್ತದೆ ಈ ಐದು ಎಣ್ಣೆಗಳು