ಹೈದರಾಬಾದ್ : ದೈಹಿಕ ಚಟುವಟಿಕೆಗಳನ್ನು ಮಾಡುವುದರಿಂದ ಒತ್ತಡ, ಆತಂಕ, ಖಿನ್ನತೆಗಳಿಂದ ನಾವು ದೂರ ಇರಬಹುದು. ದೈಹಿಕ ಚಟುವಟಿಕೆಗಳನ್ನು ಮಾಡುವುದರಿಂದ ಎಂಡಾರ್ಫಿನ್ ಎನ್ನುವ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಇದು ನಮ್ಮ ಒತ್ತಡ ಹಾಗೂ ಆತಂಕಗಳನ್ನು ಕಡಿಮೆ ಮಾಡಿ ಮನೋಲ್ಲಾಸದ ಭಾವನೆ ಹೆಚ್ಚಿಸುತ್ತದೆ.
ಪ್ರತಿಯೊಬ್ಬರೂ ಉತ್ತಮ ಆರೋಗ್ಯದಿಂದ ದೀರ್ಘಕಾಲದ ಜೀವನವನ್ನು ನಡೆಸಬೇಕು ಎಂದು ಬಯಸುತ್ತಾರೆ. ಈ ಹಿಂದೆ ಹಿರಿಯರು ಗಟ್ಟಿಮುಟ್ಟಾಗಿ ನೂರು ವರ್ಷ ಬದುಕುತ್ತಿದ್ದರು. ಇಳಿ ವಯಸ್ಸಿನಲ್ಲಿ ಸಾಕಷ್ಟು ಲವಲವಿಕೆಯಿಂದ ಇದ್ದವರನ್ನು ನೋಡಿದ್ದೇವೆ. ಆದರೆ, ಈಗ ಕಾಲ ಆ ರೀತಿ ಇಲ್ಲ. 60 ವರ್ಷ ದಾಟಿದರೆ ಸಾಕಪ್ಪ ಎನ್ನುವಂತಾಗಿದೆ.
ಇಷ್ಟು ವರ್ಷಗಳು ಬದುಕಬೇಕು ಎನ್ನುವ ಆಸೆ ಯಾರಲ್ಲೂ ಉಳಿದಿಲ್ಲ. ನಮ್ಮ ಪೂರ್ವಜರು ಸೇವಿಸುತ್ತಿದ್ದ ಆಹಾರ ಪದ್ಧತಿಗಳು, ಅನುಸರಿಸುತ್ತಿದ್ದ ಚಟುವಟಿಕೆಗಳು, ಅವರು ಜೀವಿಸುತ್ತಿದ್ದ ವಾತಾವರಣ ಯಾವುದು ನಮ್ಮ ಬಳಿ ಇಲ್ಲ.
ಸಣ್ಣ ವಯಸ್ಸಿಗೆ ನಾನಾ ರೀತಿಯ ಕಾಯಿಲೆಗಳು, ಒತ್ತಡ, ಆತಂಕ, ಖಿನ್ನತೆಯಂತ ಸಮಸ್ಯೆಗಳಿಂದ ಜೀವನೋತ್ಸಾಹ ಕುಂದುತ್ತಿದೆ. ಇದರಿಂದ ಹೊರ ಬರಬೇಕಾದರೆ ದೈಹಿಕ ಚಟುವಟಿಕೆಗಳನ್ನು ಮಾಡಬೇಕಿದೆ. ಇದು ಮೆದುಳಿನ ಕ್ರಿಯೆಗೂ ಅನುಕೂಲ ಎಂಬುದು ಸಂಶೋಧನೆಯಿಂದ ಬಹಿರಂಗವಾಗಿದೆ.
50 ರಿಂದ 74 ವರ್ಷ ವಯಸ್ಸಿನವರು ಹೀಗೆ ಮಾಡಬೇಕು.. ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯವು ದೈಹಿಕ ಚಟುವಟಿಕೆಗಳಿಂದ ಮೆದುಳಿನ ಕ್ರಿಯೆಗೆ ಹೇಗೆ ಶಕ್ತಿ ತುಂಬುತ್ತದೆ ಎಂಬುದರ ಬಗ್ಗೆ ಸಂಶೋಧನೆ ನಡೆಸಿದ್ದು, ಅದರ ವರದಿಯನ್ನು 'ಜೆಎಂಐಆರ್ ಹೆಲ್ತ್ ಆ್ಯಂಡ್ ಹೆಲ್ತ್' ಮಾಧ್ಯಮದಲ್ಲಿ ಪ್ರಕಟಿಸಲಾಗಿದೆ.
90 ಮಂದಿ ಮಧ್ಯ ವಯಸ್ಕರನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಹಿರಿಯರು ಅನುಸರಿಸುತ್ತಿದ್ದ ದೈಹಿಕ ಚಟುವಟಿಕೆಗಳ ವಿಷಯ ಕುರಿತು ಇವರಿಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ದೈಹಿಕ ಚಟುವಟಿಕೆ ಹೆಚ್ಚಾದ ದಿನಗಳಲ್ಲಿ 50 ರಿಂದ 74 ವರ್ಷ ವಯಸ್ಸಿನವರು ತಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುತ್ತಾರೆ.
ಇವರ ದೈಹಿಕ ಚಟುವಟಿಕೆ ಕಡಿಮೆಯಾದ ದಿನಗಳಲ್ಲಿ ಇವರ ಕೆಲಸದ ಕಾರ್ಯಕ್ಷಮತೆಯೂ ಕಡಿಮೆಯಾಗುತ್ತದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ ಎಂದು ಸ್ಯಾನ್ ಡಿಯಾಗೋ ಸ್ಕೂಲ್ ಆಫ್ ಮೆಡಿಸಿನ್‌ನ ಮನೋವೈದ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಅಧ್ಯಯನದ ಪ್ರಧಾನ ಅಧಿಕಾರಿ ರೇಯಾನ್ ಮೂರ್ ಹೇಳಿದ್ದಾರೆ.
ದೈಹಿಕ ಚಟುವಟಿಕೆ ಹೆಚ್ಚಾದಂತೆ ಮನುಷ್ಯ ತುಂಬಾ ಉತ್ಸಾಹ ಹಾಗೂ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುತ್ತಾನೆಂದು ನಾವು ಊಹಿಸಿದ್ದೇವೆ. ಆದರೆ, ನಾವು ಇದನ್ನು ಖಚಿತವಾಗಿ ಹೇಳಲು ಸಾಧ್ಯವಾಗಿಲ್ಲ. ಏಕೆಂದರೆ, ಜನರಿಗೆ ಅವರ ದೈಹಿಕ ಚಟುವಟಿಕೆಯನ್ನು ಹೆಚ್ಚಿಸಲು ಹೇಳುತ್ತಿಲ್ಲ. ಅವರು ಪ್ರತಿದಿನ ಏನು ಮಾಡುತ್ತಾರೆ ಎಂಬುದರ ಬಗ್ಗೆ ಹೇಳಿದ್ದೇವೆ ಎಂದು ವಿವರಿಸಿದ್ದಾರೆ.
ವೈಯಕ್ತಿಕ ಸಮಸ್ಯೆ ದೈಹಿಕ ಚಟುವಟಿಕೆಗೆ ಅಡ್ಡಿ.. ಜನ ತಮ್ಮ ದಿನ ನಿತ್ಯ ದೈಹಿಕ ಚಟುವಟಿಕೆಗಳನ್ನು ಹೆಚ್ಚಿಸಿಕೊಳ್ಳಬೇಕೆಂದು ಹೇಳುತ್ತೇವೆ. ಇದರಿಂದ ಸಾಕಷ್ಟು ಪ್ರತ್ಯಕ್ಷ ಹಾಗೂ ಪರೋಕ್ಷ ಲಾಭಗಳಿವೆ ಎಂದು ಯುಸಿ ಸ್ಯಾನ್ ಡಿಯಾಗೋ ಸ್ಕೂಲ್ ಆಫ್ ಮೆಡಿಸಿನ್‌ನ ಕ್ಲಿನಿಕಲ್ ಸೈಕಾಲಜಿಸ್ಟ್ ಮೊದಲ ಲೇಖಕ ಜ್ವಿಂಕಾ ಜ್ಲಾಟರ್ ಹೇಳಿದ್ದಾರೆ.
ಹೆಚ್‌ಐವಿ ಸ್ಥಿತಿ, ವಯಸ್ಸು, ಲಿಂಗ, ಶಿಕ್ಷಣ ಮತ್ತು ಜನಾಂಗ/ಜನಾಂಗೀಯತೆಯಂತಹ ವಿವಿಧ ಸಮಸ್ಯೆಗಳು ಹಾಗೂ ದೈಹಿಕ ಚಟುವಟಿಕೆಗಳಿಗೆ ಪರಸ್ಪರ ಸಂಬಂಧ ಇದೆ. ಸಮಸ್ಯೆ ಇದ್ದಾಗ ಲವಲವಿಕೆ ಅಷ್ಟಾಗಿ ಕಂಡು ಬರುವುದಿಲ್ಲ. ಆದರೂ ಕೆಲವರೂ ಇದನ್ನು ಮೆಟ್ಟಿನಿಂತು ದೈನಂದಿನ ಜೀವನ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಿಕೊಂಡು ಹೋಗುತ್ತಾರೆ. ಇನ್ನೂ ಕೆಲವರು ಬೇರೆಯವರನ್ನು ಅವಲಂಬಿಸಿರುತ್ತಾರೆ ಎಂದು ವಿವರಿಸಿದ್ದಾರೆ.
ಮನುಷ್ಯ ಎಷ್ಟೇ ಸಮಸ್ಯೆಗಳು, ಸವಾಲುಗಳು ಎದುರಾದರೂ ಅವುಗಳನ್ನು ಸಮರ್ಥವಾಗಿ ನಿರ್ವಹಿಸುವ ಕಲೆ ಸಿದ್ಧಿಸಿದ್ದರೆ ಮನಸ್ಸು ಒತ್ತಡಕ್ಕೆ ಒಳಗಾಗಲು ಅವಕಾಶ ಇರುವುದಿಲ್ಲ. ವ್ಯಾಯಾಮದಂತಹ ದೈಹಿಕ ಚಟುವಟಿಕೆಗಳಿಂದ ಆರೋಗ್ಯವನ್ನು ಒಳ್ಳೆ ರೀತಿಯಲ್ಲಿ ಕಾಪಾಡಿಕೊಳ್ಳಬಹುದಾಗಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ