ನ್ಯೂಯಾರ್ಕ್: ಕೋವಿಡ್-19 ಸಾಂಕ್ರಾಮಿಕ ರೋಗ ಪ್ರಾರಂಭವಾದ ನಂತರದ ವರ್ಷದಲ್ಲಿ ಟೈಪ್-2 ಡಯಾಬಿಟಿಸ್‌ನಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಸಂಶೋಧನೆಯೊಂದು ತಿಳಿಸಿದೆ. ಯುಎಸ್‌ನ ಇಲಿನಾಯ್ಸ್‌ನಲ್ಲಿ ನಡೆದ ಎಂಡೋಕ್ರೈನ್ ಸೊಸೈಟಿಯ ವಾರ್ಷಿಕ ಸಭೆಯ ENDO 2023 ನಲ್ಲಿ ಮತ್ತೊಂದು ಅಧ್ಯಯನವನ್ನು ಪ್ರಸ್ತುತಪಡಿಸಲಾಗಿದ್ದು, ಹಿಂದಿನ ಎರಡು ವರ್ಷಗಳಿಗಿಂತ ಹೆಚ್ಚು ಗರ್ಭಿಣಿಯರಿಗೆ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಗರ್ಭಾವಸ್ಥೆಯ ಮಧುಮೇಹ ಕಾಣಿಸಿಕೊಂಡಿದೆ ಎಂದು ಇದು ತೋರಿಸಿದೆ.
ಕೋವಿಡ್-19 ಸಾಂಕ್ರಾಮಿಕದ ಮೊದಲ ವರ್ಷದಲ್ಲಿ ಶಾಲೆಗಳು ಬಂದ್ ಆಗಿದ್ದರಿಂದ ಮಕ್ಕಳ ಕ್ರಿಯಾಶೀಲತೆ ಕಡಿಮೆಯಾಗಿದ್ದು ಮತ್ತು ಆಗಾಗ ತಿಂಡಿ ಸೇವಿಸುವುದು ಹೆಚ್ಚಾಗಿದ್ದು ಅಥವಾ ಅನಾರೋಗ್ಯಕರ ಆಹಾರದ ಸೇವನೆಯಿಂದ ತೂಕ ಹೆಚ್ಚಾಗಲು ಮತ್ತು ಟೈಪ್-2 ಮಧುಮೇಹ ಕಾಣಿಸಿಕೊಳ್ಳಲು ಕಾರಣವಾಯಿತು ಎಂದು ಪ್ರಥಮ ಅಧ್ಯಯನದಲ್ಲಿ ಓಹಿಯೋದ ಕೊಲಂಬಸ್ನಲ್ಲಿರುವ ನೇಶನ್ವೈಡ್ ಚಿಲ್ಡ್ರನ್ಸ್ ಹಾಸ್ಪಿಟಲ್ನ ಸಂಶೋಧಕರು ಊಹಿಸಿದ್ದಾರೆ.
ಹಿನ್ನೋಟದ ಅಧ್ಯಯನದ ಪ್ರಕಾರ ಹೊಸದಾಗಿ ಮಧುಮೇಹ ಕಾಣಿಸಿಕೊಂಡ ಯುವಕರ ಪೈಕಿ ಕೋವಿಡ್ ನಂತರದ ಮೊದಲ ವರ್ಷದಲ್ಲಿ ಟೈಪ್ -2 ಮಧುಮೇಹದ ತುಲನಾತ್ಮಕ ಅನುಪಾತವು ಶೇಕಡಾ 24.8 ರಷ್ಟಿತ್ತು, ಎರಡನೇ ವರ್ಷದಲ್ಲಿ ಶೇಕಡಾ 18.9 ಮತ್ತು ಮೂರನೇ ವರ್ಷದಲ್ಲಿ ಶೇಕಡಾ 32.1 ರಷ್ಟಿತ್ತು. ಹೀಗೆ ಮಧುಮೇಹ ಹೆಚ್ಚಾಗುವುದಕ್ಕೆ ಕೋವಿಡ್ ಸಂಬಂಧಿತ ನಿರ್ಬಂಧಗಳು ಮತ್ತು ಜೀವನಶೈಲಿಯ ಬದಲಾವಣೆಗಳು ಮಾತ್ರ ಕಾರಣವಲ್ಲ ಎಂದು ಸಂಶೋಧನೆಗಳು ತೋರಿಸಿವೆ.
"ಇದಕ್ಕೆ ಕಾರಣಗಳು ಸಂಪೂರ್ಣವಾಗಿ ತಿಳಿದಿಲ್ಲ ಮತ್ತು ಹೆಚ್ಚಿನ ಮೌಲ್ಯಮಾಪನದ ಅಗತ್ಯವಿದೆ; ಆದ್ದರಿಂದ, ನಾವು ಜಾಗರೂಕರಾಗಿರಬೇಕು ಮತ್ತು ಅಪಾಯದಲ್ಲಿರುವ ಯುವಕರನ್ನು (ಆನುವಂಶಿಕ ಅಪಾಯಕಾರಿ ಅಂಶಗಳು, ಸ್ಥೂಲಕಾಯತೆ, ಕಡಿಮೆ ಸಕ್ರಿಯ ಜೀವನಶೈಲಿ ಹೊಂದಿರುವವರು) ಮೇಲ್ವಿಚಾರಣೆ ಮಾಡಬೇಕು ಮತ್ತು ರೋಗಲಕ್ಷಣಗಳಿದ್ದರೆ ವೈದ್ಯರನ್ನು ಭೇಟಿ ಮಾಡಲು ಅವರನ್ನು ಕರೆದೊಯ್ಯಬೇಕು. ಹೆಚ್ಚಿದ ಬಾಯಾರಿಕೆ ಮತ್ತು ಆಗಾಗ್ಗೆ ಮೂತ್ರ ವಿಸರ್ಜನೆಯಂತಹ ಮಧುಮೇಹ ಕಾಣಿಸಿಕೊಳ್ಳಬಹುದು" ಎಂದು ಆಸ್ಪತ್ರೆಯ ಎಂಡೊಕ್ರಿನಾಲಜಿ ವಿಭಾಗದ ಎಸ್ತರ್ ಬೆಲ್-ಸಂಬಟಾರೊ ಹೇಳಿದರು.
ಎರಡನೇ ಅಧ್ಯಯನದಲ್ಲಿ ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದ ತಂಡವು ಕೋವಿಡ್ -19 ರ ಹಿಂದಿನ ಎರಡು ವರ್ಷಗಳಲ್ಲಿ ನಡೆದ 14,663 ಗರ್ಭಧಾರಣೆಗಳನ್ನು ಪರಿಶೀಲನೆ ಮಾಡಿತು. ಇದರಲ್ಲಿ 6,890 ಮೊದಲ ವರ್ಷದಲ್ಲಿ ಮತ್ತು 6,654 ಎರಡನೇ ವರ್ಷದಲ್ಲಿ ಸಂಭವಿಸಿದ್ದವು. "ಜನಸಂಖ್ಯೆಯಲ್ಲಿನ ಬದಲಾವಣೆಗಳು ಮತ್ತು ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಬದಲಾವಣೆಗಳಿಂದಾಗಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಗರ್ಭಾವಸ್ಥೆಯ ಮಧುಮೇಹವು ಹೆಚ್ಚು ಸಾಮಾನ್ಯವಾಗಿದೆ ಎಂದು ತೋರುತ್ತದೆ. ಇದು ವಿಶ್ವಾದ್ಯಂತ ತಾಯಂದಿರು ಮತ್ತು ಅವರ ಮಕ್ಕಳಿಗೆ ಗಮನಾರ್ಹವಾದ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಪರಿಣಾಮ ಬೀರುತ್ತದೆ" ಎಂದು ಯೂನ್ ಜಿ ಜಿನಾ ರೋ ಹೇಳಿದರು. ಇವರು ವಿಶ್ವವಿದ್ಯಾಲಯದ ಸಂತಾನೋತ್ಪತ್ತಿ ಮತ್ತು ಪೆರಿನಾಟಲ್ ಸೆಂಟರ್ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ಗರ್ಭಾವಸ್ಥೆಯ ಪೂರ್ವದಲ್ಲಿನ ಬಾಡಿ ಮಾಸ್ ಇಂಡೆಕ್ಸ್, ಸ್ಥೂಲಕಾಯತೆ ಮತ್ತು ದಕ್ಷಿಣ ಏಷ್ಯಾದ ಜನಾಂಗೀಯತೆ ಮತ್ತು ಗರ್ಭಾವಸ್ಥೆಯ ಮಧುಮೇಹದ ಹಿಂದಿನ ಇತಿಹಾಸವನ್ನು ಒಳಗೊಂಡಂತೆ ಗರ್ಭಾವಸ್ಥೆಯ ಮಧುಮೇಹಕ್ಕೆ ಇತರ ಅಪಾಯಕಾರಿ ಅಂಶಗಳಲ್ಲಿ ಗಮನಾರ್ಹ ಹೆಚ್ಚಳವನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.
ಇದನ್ನೂ ಓದಿ : Sudan War: ಸುಡಾನ್ನಲ್ಲಿ ಮಾನವೀಯ ಬಿಕ್ಕಟ್ಟು ಮತ್ತಷ್ಟು ಉಲ್ಬಣ