ಪೆನ್ಹಾ: ಕಾಂಬೋಡಿಯಾದಲ್ಲಿ ಏಳು ವರ್ಷಗಳ ತರುವಾಯ ಮತ್ತೆ ಝಿಕಾ ಸೋಂಕು ಕಾಣಿಸಿಕೊಂಡಿದೆ. 2016ರಲ್ಲಿ ಪತ್ತಿಯಾಗಿದ್ದ ಈ ಸೋಂಕು ಇದೀಗ ಮರುಕಳಿಸಿದೆ ಎಂದು ದೇಶದ ಆರೋಗ್ಯ ಸಚಿವಾಲಯ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ಥೊಮ್ ಪ್ರಾಂತ್ಯದ ಸೆಂಟ್ರಲ್ ಕಂಪಾಂಗ್ನಲ್ಲಿ ಏಳು ವರ್ಷದ ಬಾಲಕಿಯಲ್ಲಿ ಸೋಂಕು ಕಂಡುಬಂದಿದ್ದು ರೋಗಿಯನ್ನು ಬರೇ ಸಂತುಕ್ ರೆಫರಲ್ ಹಾಸ್ಪಿಟಲ್ನಲ್ಲಿ ದಾಖಲಿಸಲಾಗಿದೆ. ಆರಂಭದಲ್ಲಿ ಬಾಲಕಿಗೆ ಡೆಂಗ್ಯೂ ಸೋಂಕು ತಗುಲಿರಬಹುದು ಎಂದು ಊಹಿಸಲಾಗಿತ್ತು. ವೈದ್ಯಕೀಯ ಪರೀಕ್ಷೆ ವರದಿಯಲ್ಲಿ ಝಿಕಾ ತಗುಲಿರುವುದು ದೃಢಪಟ್ಟಿದೆ ಎಂದು ತಿಳಿಸಲಾಗಿದೆ.
ಸೊಳ್ಳೆಗಳಿಂದ ಹರಡುವ ಸೋಂಕು: ಝಿಕಾ ಎಂಬುದು ಫ್ಲೇವಿವೈರಸ್. ಇದು ಈಡಿಸ್ ಜಾತಿಯ ಸೊಳ್ಳೆಗಳಿಂದ ಹರಡುತ್ತದೆ. ಲೈಂಗಿಕ ಸಂಪರ್ಕ, ರಕ್ತ ವರ್ಗಾವಣೆ ಮತ್ತು ಜನ್ಮಜಾತವಾಗಿಯೂ ತಾಯಿಯಿಂದ ಮಗುವಿಗೆ ಹರಡುತ್ತದೆ.
ಲಕ್ಷಣಗಳೇನು?: ಝಿಕಾ ಸೋಂಕಿತರಲ್ಲಿ ಜ್ವರ, ತಲೆ ನೋವು, ಕೆಂಗಣ್ಣು ಮತ್ತು ಕೀಲು ನೋವಿನ ಸಮಸ್ಯೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸೋಂಕಿಗೆ ಒಳಗಾದವರು ಎರಡರಿಂದ ಮೂರು ದಿನದಲ್ಲಿ ಚೇತರಿಗೆ ಕಾಣುತ್ತಾರೆ. ಈ ಸೋಂಕಿನಿಂದ ಮಾರಣಾಂತಿಕ ಸಮಸ್ಯೆ ಬಹಳ ಅಪರೂಪ. ಆದಾಗ್ಯೂ, ಗರ್ಭಿಣಿಯರಲ್ಲಿ ಪತ್ತೆಯಾದರೆ, ಭ್ರೂಣದಲ್ಲಿ ಮಗುವಿನ ಸಾವಿಗೂ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ದೇಶದಲ್ಲೀಗ ಝಿಕಾ ಸೋಂಕಿನ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸಚಿವಾಲಯ ಜನರಿಗೆ ಅದರಲ್ಲೂ ವಿಶೇಷವಾಗಿ ಗರ್ಭಿಣಿಯರಿಗೆ ಎಚ್ಚರದಿಂದಿರುವಂತೆ ಸೂಚಿಸಿದೆ. ಈಡಿಸ್ ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಲು ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದೆ. ಅಲ್ಲದೇ, ಮೇಲೆ ತಿಳಿಸಿದ ಸೋಂಕಿನ ಲಕ್ಷಣ ಪತ್ತೆಯಾದರೆ, ತಕ್ಷಣವೇ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಿದೆ.
ಭಾರತದಲ್ಲೂ ಸೋಂಕು ಪತ್ತೆ: ಝಿಕಾ ಸೋಂಕು ಕಳೆದೆರಡು ತಿಂಗಳ ಹಿಂದೆ ಮುಂಬೈನ 79 ವರ್ಷದ ವೃದ್ಧರಲ್ಲಿ ಪತ್ತೆಯಾಗಿದ್ದು, ಅವರು ಚೇತರಿಸಿಕೊಂಡಿದ್ದರು. ಸೋಂಕಿಗೆ ಪ್ರಮುಖ ಕಾರಣ ಸೊಳ್ಳೆಯಾಗಿದ್ದು, ತಡೆಗೆ ಯಾವುದೇ ಲಸಿಕೆ ಇಲ್ಲ. ಹೀಗಾಗಿ ಡೆಂಗ್ಯೂ ಮತ್ತು ಚಿಕನ್ ಗುನ್ಯಾದಂತೆ ಮುನ್ನೆಚ್ಚರಿಕೆ ಪಾಲಿಸುವುದು ಅವಶ್ಯಕ. ಸುತ್ತಮುತ್ತಲ ಪರಿಸರದಲ್ಲಿ ನೀರು ನಿಲ್ಲದಂತೆ, ಸೊಳ್ಳೆಗಳ ಸಂತಾನೋತ್ಪತ್ತಿ ಆಗದಂತೆ ತಡೆಯಬೇಕಿದೆ. ಅದರಲ್ಲೂ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳುವುದು ಅವಶ್ಯಕ. (ಐಎಎನ್ಎಸ್)
ಇದನ್ನೂ ಓದಿ: WHO ವಾರ್ನಿಂಗ್: ಹವಾಮಾನ ಬದಲಾವಣೆಯಿಂದ ಡೆಂಘೀ, ಚಿಕೂನ್‌ಗುನ್ಯಾ ಹೆಚ್ಚಳ!