ಭುಜದ ಸಂದುಗಳಲ್ಲಿ ಬಿಗಿತ ಹಾಗೂ ನೋವು ಉಂಟಾಗುವಿಕೆಯನ್ನು ಫ್ರಾಜನ್ ಶೋಲ್ಡರ್ ಅಥವಾ ಭುಜದ ಮರಗಟ್ಟುವಿಕೆ ಎಂದು ಕರೆಯಲಾಗುತ್ತದೆ. ಭುಜದ ಸಂದುಗಳ ಸುತ್ತಲಿನ ಸಂಯೋಜಕ ಅಂಗಾಂಶವು ಊದಿಕೊಳ್ಳುವುದರಿಂದ ಮತ್ತು ಗಟ್ಟಿಯಾಗುವುದರಿಂದ ಈ adhesive capsulitis ಎಂದೂ ಕರೆಯಲಾಗುವ ಭುಜದ ಮರಗಟ್ಟುವಿಕೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಸಂಧಿವಾತದ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದೇ ಭುಜದ ಮುಕ್ತ ಚಲನೆಗೆ ಅಡ್ಡಿಯನ್ನುಂಟು ಮಾಡುವ ಅತ್ಯಂತ ಯಾತನಾದಾಯಕವಾದ ಸಮಸ್ಯೆ ಇದಾಗಿದೆ. ನಿತ್ಯದ ಸಹಕ ಕೆಲಸಗಳನ್ನು ನಿರ್ವಹಿಸಲು ಈ ನೋವು ಅಡ್ಡಿಯುಂಟು ಮಾಡುತ್ತದೆ ಹಾಗೂ ದಿನಗಳೆದಂತೆ ಬಿಗಿತ ಹಾಗೂ ನೋವು ಜಾಸ್ತಿಯಾಗುತ್ತದೆ.
ವಾಸ್ತವದಲ್ಲಿ ಏನಿದು ಭುಜದ ಮರಗಟ್ಟುವಿಕೆ ? :ಭುಜಗಳು ಅಸ್ಥಿರಜ್ಜು ಮತ್ತು ಸ್ನಾಯುರಜ್ಜುಗಳಿಂದ ಮಾಡಲ್ಪಟ್ಟಿದ್ದು, ಇವು ಸಂಯೋಜಕ ಅಂಗಾಂಶಗಳ ಪೊರೆಯಿಂದ ಸುತ್ತುವರಿಯಲ್ಪಟ್ಟಿದೆ. ಭುಜದ ಸಂದುಗಳ ಸುತ್ತಲಿನ ಪೊರೆಯು ದಪ್ಪ ಹಾಗೂ ಗಟ್ಟಿಯಾದಾಗ ಇದು ಭುಜದ ಚಲನೆಗೆ ನಿಧಾನವಾಗಿ ತಡೆಯುಂಟು ಮಾಡಲಾರಂಭಿಸುತ್ತದೆ. ಈ ಅನಾರೋಗ್ಯ ಸಮಸ್ಯೆಯು ಸಾಮಾನ್ಯವಾಗಿ ಮೂರು ಹಂತಗಳಲ್ಲಿ ಉಂಟಾಗುತ್ತದೆ.
- ಮರಗಟ್ಟುವಿಕೆಯ ಹಂತ: ಈ ಹಂತವು ಮೂರರಿಂದ ಆರು ತಿಂಗಳ ಅವಧಿಯಲ್ಲಿ ಘಟಿಸುತ್ತದೆ. ಈ ಹಂತದಲ್ಲಿ ನಿಮ್ಮ ಭುಜದ ಮುಕ್ತ ಚಲನೆಗೆ ಅಡ್ಡಿಯುಂಟಾಗುತ್ತಿರುವುದು ನಿಮ್ಮ ಗಮನಕ್ಕೆ ಬರುತ್ತದೆ ಹಾಗೂ ಒಂದು ಕಡೆಯ ಚಲನೆಯು ನಷ್ಟವಾಗುತ್ತದೆ.
- ಮರಗಟ್ಟಿದ ಹಂತ: ನಾಲ್ಕರಿಂದ ಹನ್ನೆರಡು ತಿಂಗಳ ಅವಧಿಗೆ ಈ ಹಂತ ಮುಂದುವರೆಯುತ್ತದೆ. ಈ ಅವಧಿಯಲ್ಲಿ ನೋವಿನ ಪ್ರಮಾಣ ಕಡಿಮೆ ಅನಿಸಿದರೂ ಭುಜದ ಚಲನೆಯು ತುಂಬಾ ಕಡಿಮೆಯಾಗುತ್ತದೆ.
- ಉಪಶಮನ ಹಂತ: ಈ ಹಂತದಲ್ಲಿ ಭುಜದ ಮುಕ್ತ ಚಲನೆ ಮತ್ತೆ ಸಾಧ್ಯವಾಗಲಾರಂಭಿಸುತ್ತದೆ. ಭುಜದ ಮರಗಟ್ಟುವಿಕೆ ಆರಂಭವಾದ ಆರು ತಿಂಗಳು ನಂತರ ಅಥವಾ ಕೆಲ ವರ್ಷಗಳ ನಂತರ ನೀವು ಸಂಪೂರ್ಣವಾಗಿ ಮೊದಲಿನಂತೆ ಕೆಲಸ ಮಾಡಲು ಸಾಧ್ಯವಾಗಬಹುದು.
- ಭುಜದ ಮರುಗಟ್ಟುವಿಕೆಯ ಪ್ರತಿಯೊಬ್ಬ ರೋಗಿಯೂ ಭಿನ್ನವಾದ ರೋಗ ಲಕ್ಷಣಗಳನ್ನು ಹೊಂದಿರುತ್ತಾರೆ. ರೋಗದ ಬಗ್ಗೆ ಶೀಘ್ರ ಪತ್ತೆಯಾದಲ್ಲಿ ಬೇಗನೆ ಗುಣಪಡಿಸಬಹುದು.
ಭುಜದ ಮರಗಟ್ಟುವಿಕೆಗೂ ಮಧುಮೇಹಕ್ಕೂ ಸಂಬಂಧವಿದೆಯಾ?
ನಿಮಗೆ ವಯಸ್ಸಾಗಿದ್ದರೆ, ಮಧುಮೇಹ ಇದ್ದರೆ ಎಷ್ಟು ದೀರ್ಘಾವಧಿಯಿಂದ ಇದೆ ಹಾಗೂ ಎಷ್ಟು ತೀವ್ರವಾಗಿದೆ ಎಂಬುದರ ಮೇಲೆ ಭುಜದ ಮರಗಟ್ಟುವಿಕೆ ಸಮಸ್ಯೆ ಕಾಣಿಸಿಕೊಳ್ಳುವುದು ಅವಲಂಬಿತವಾಗಿದೆ. ರಕ್ತದಲ್ಲಿ ಸಕ್ಕರೆಯ ಅನಿಯಂತ್ರಿತ ಪ್ರಮಾಣದಿಂದ ಸಂಯೋಜಕ ಅಂಗಾಂಶಗಳಿಗೆ ಅಗತ್ಯವಾದ ಕೊಲಾಜೆನ್ ಎಂಬ ಪ್ರೋಟೀನ್ ಅಂಶದ ಕೊರತೆಯಾಗಿ ಭುಜದ ಮರಗಟ್ಟುವಿಕೆ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗುತ್ತವೆ.
ಕೊಲಾಜೆನ್ ಪ್ರೋಟೀನಿಗೆ ಸಕ್ಕರೆಯ ಅಂಶ ಅಂಟಿಕೊಂಡಾಗ ಅದು ಜಿಗುಟಾಗುತ್ತದೆ ಹಾಗೂ ಇದರಿಂದ ಚಲನೆಗೆ ಅಡ್ಡಿಯುಂಟಾಗುತ್ತದೆ. ಇದರಿಂದಾಗಿ ನಿಮಗೆ ಭುಜದ ಮರಗಟ್ಟುವಿಕೆಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಮರಗಟ್ಟುವಿಕೆ ಉಂಟಾದಾಗ ಭುಜದ ಚಲನೆಯಿಂದ ನೋವಾಗಬಹುದು ಅಥವಾ ಕೆಲವೊಮ್ಮೆ ಭುಜದ ಚಲನೆ ಸಾಧ್ಯವೇ ಆಗದಿರಬಹುದು.
ಓದಿ: ಕಡಿಮೆ ದರದಲ್ಲಿ ಸಿಗುವ ಆಹಾರಗಳಿಂದ ಸದೃಢ ಆರೋಗ್ಯ: ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
ಇತರ ಅಪಾಯಕಾರಿ ಅಂಶಗಳು: ಬಹಳ ಕಾಲದವರೆಗೆ ನಿಮ್ಮ ಭುಜವು ಚಲನೆಯಾಗದ ಸ್ಥಿತಿಯಲ್ಲಿದ್ದರೆ ನಿಮಗೆ ಭುಜದ ಮರಗಟ್ಟುವಿಕೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸ್ನಾಯುಗಳಿಗೆ ಗಾಯವಾದಾಗಲೂ ಈ ಸಮಸ್ಯೆ ಬರಬಹುದು. ಪುರುಷರಿಗಿಂತ ಮಹಿಳೆಯರಿಗೆ ಭುಜದ ಮರಗಟ್ಟುವಿಕೆ ಸಮಸ್ಯೆ ಜಾಸ್ತಿ. ಅದರಲ್ಲೂ 40 ರಿಂದ 60 ವಯಸ್ಸಿನವರಿಗೆ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ರೋಗ ಪತ್ತೆ ಹಾಗೂ ತಡೆಗಟ್ಟುವ ವಿಧಾನಗಳು: ಲಕ್ಷಣಗಳನ್ನು ಆಧರಿಸಿ ಮಾತ್ರ ಭುಜದ ಮರಗಟ್ಟುವಿಕೆಯ ಸಮಸ್ಯೆಯನ್ನು ಪತ್ತೆ ಮಾಡಬಹುದು. ನಿಮ್ಮ ಭುಜದ ಚಲನೆಯನ್ನು ಅಧ್ಯಯನ ಮಾಡಿದ ನಂತರ ವೈದ್ಯರು ಈ ಅನಾರೋಗ್ಯ ಉಂಟಾಗಿರುವ ಬಗ್ಗೆ ಪತ್ತೆ ಮಾಡಬಹುದು. ದುರದೃಷ್ಟವಶಾತ್ ಭುಜದ ಮರಗಟ್ಟುವಿಕೆ ಬರದಂತೆ ತಡೆಯುವ ಯಾವುದೇ ಉಪಾಯಗಳಿಲ್ಲ. ಆದರೂ ನಿಮ್ಮ ರಕ್ತದ ಸಕ್ಕರೆ ಅಂಶವನ್ನು ಕಡಿಮೆಯಾಗಿಟ್ಟುಕೊಳ್ಳುವುದರ ಮೂಲಕ ನೀವು ಇದರಿಂದ ಆದಷ್ಟೂ ದೂರವಿರಬಹುದು. ಇನ್ನು ದಿನನಿತ್ಯ ವ್ಯಾಯಾಮ ಮಾಡುವುದರಿಂದ ಸಹ ಇದು ಬರದಂತೆ ತಡೆಯಬಹುದು.
ಉಪಚಾರ ಪ್ರಕ್ರಿಯೆ: ಸಾಮಾನ್ಯವಾಗಿ ಅರಂಭಿಕ ಹಂತದಲ್ಲಿ ಬಹುತೇಕರು ಶಸ್ತ್ರಕ್ರಿಯೆ ರಹಿತ ದೈಹಿಕ ಥೆರಪಿ ಮತ್ತು ಸ್ಟೆರಾಯ್ಡ್ ರಹಿತ ನೋವು ನಿವಾರಕ ಉಪಚಾರದ ಮೊರೆ ಹೋಗುತ್ತಾರೆ. ಇನ್ನು ಕೆಲವರು ಸ್ಟೆರಾಯ್ಡ್ ಪಡೆಯುವ ಮೂಲಕ ಭುಜದ ನೋವು ಕಡಿಮೆ ಮಾಡಿ ಚಲನೆ ಸರಳವಾಗುವಂತೆ ಮಾಡಿಕೊಳ್ಳುತ್ತಾರೆ. ಅದರೆ ನಿಮಗೆ ಮಧುಮೇಹವಿದ್ದರೆ ಹುಷಾರು.. ಸ್ಟೆರಾಯ್ಡ್ನಿಂದ ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗಬಹುದು. ದಯವಿಟ್ಟು ಯಾವುದೇ ಉಪಚಾರ ಪಡೆಯುವ ಮುನ್ನ ವೈದ್ಯರಿಂದ ಸಲಹೆ ಪಡೆಯುವುದು ಕಡ್ಡಾಯ. ಸರಳ ಉಪಚಾರದಿಂದ ಭುಜದ ಮರಗಟ್ಟುವಿಕೆ ಕಡಿಮೆಯಾಗದಿದ್ದರೆ, ಕೆಲವೊಂದು ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯವಾಗಬಹುದು.
ಭುಜದ ಮರಗಟ್ಟುವಿಕೆಯ ನಿಯಂತ್ರಣಾ ಕ್ರಮಗಳು
- ರಕ್ತದಲ್ಲಿನ ಸಕ್ಕರೆ ಮಟ್ಟ ಯಾವಾಗಲೂ ಸಾಮಾನ್ಯವಾಗಿರುವಂತೆ ನೋಡಿಕೊಳ್ಳಿ
- ನಿಯಮಿತವಾಗಿ ವ್ಯಾಯಾಮ ಮಾಡಿ
- ನೋವು ನಿವಾರಕ ಔಷಧಿಗಳ ಮೂಲಕ ನೋವು ಕಡಿಮೆ ಮಾಡಿಕೊಳ್ಳಬಹುದು.
- ವೈದ್ಯರ ಮಾರ್ಗದರ್ಶನದಲ್ಲಿ ನಿಮ್ಮ ಭುಜದ ಚಲನೆಯನ್ನು ಹೆಚ್ಚಿಸಲು ಪ್ರಯತ್ನಿಸಿ.
- ಸರಳ ಉಪಚಾರದಿಂದ ಉಪಯೋಗವಾಗದಿದ್ದರೆ ಸರ್ಜರಿ ಅನಿವಾರ್ಯವಾಗಬಹುದು.
ಓದಿ : ತಂಬಾಕು ವ್ಯಸನದಿಂದ 6 ಸೆಕೆಂಡಿಗೆ ಒಬ್ಬ ವ್ಯಕ್ತಿ ಬಲಿ: ಚೈನ್ ಸ್ಮೋಕರ್ ಆಗ್ತಿದ್ದಾರಾ ಹೆಣ್ಮಕ್ಕಳು?