ಯೋಗ. ಇದು ದೇಹದ ಆರೋಗ್ಯ ಕಾಪಾಡುವುದರ ಜೊತೆಗೆ ದೇಹವನ್ನು ಕಾಡುವಂತಹ ಹಲವಾರು ರೀತಿಯ ಅನಾರೋಗ್ಯವನ್ನು ನಿವಾರಣೆ ಮಾಡುತ್ತದೆ. ಯೋಗ ಮಾಡುವುದರಿಂದ ದೇಹದ ತೂಕವನ್ನು ಇಳಿಸಿಕೊಳ್ಳಬಹುದಾಗಿದೆ. ದೇಹದ ತೂಕ ಇಳಿಸಲೆಂದೇ ಕೆಲವೊಂದು ಯೋಗಾಸನಗಳಿದ್ದು, ಅವುಗಳು ಇಲ್ಲಿವೆ..
ಯೋಧ ಭಂಗಿ (ವೀರಭದ್ರಾಸನ) : ನಿಮ್ಮ ಕಾಲುಗಳನ್ನು 3-4 ಅಡಿ ಅಂತರದಲ್ಲಿ ಅಗಲ ಮಾಡಿ, ನಿಮ್ಮ ಬಲ ಪಾದವನ್ನು 90 ಡಿಗ್ರಿಗೆ ತಿರುಗಿಸಿ, ಎಡ ಪಾದವನ್ನು ಸ್ವಲ್ಪ ಒಳಗೆ ತೆಗೆದುಕೊಳ್ಳಿ. ಎರಡೂ ತೋಳುಗಳನ್ನು ಅಕ್ಕಪಕ್ಕದಿಂದ ಭುಜದವರೆಗೂ ತಂದು ನಿಮ್ಮ ಕೈಗಳು ಮೇಲ್ಭಾಗಕ್ಕೆ ತೋರುವಂತಿರಲಿ. ಉಸಿರನ್ನು ಹೊರಗೆ ಬಿಡುತ್ತಾ ನಿಮ್ಮ ಬಲ ಮಂಡಿಯನ್ನು ಬಾಗಿಸಿ, ನಂತರ ನಿಮ್ಮ ತಲೆಯನ್ನು ತಿರುಗಿಸಿ ನಿಮ್ಮ ಬಲಕ್ಕೆ ನೋಡಿರಿ. ನಿಮ್ಮ ತಲೆಯನ್ನು ತಿರುಗಿಸಿ ನಿಮ್ಮ ಬಲಕ್ಕೆ ನೋಡಿರಿ. ನೀವು ಯೋಗದ ಭಂಗಿಗೆ ಬರುತ್ತಿದ್ದಂತೆ ನಿಮ್ಮ ತೋಳುಗಳನ್ನು ವಿಸ್ತರಿಸಿ. ಈ ಯೋಗದ ಭಂಗಿಯಲ್ಲಿ ಧೀರತನದಿಂದ ಇರಿ. ಉಸಿರು ಒಳಗೆ ತೆಗೆದುಕೊಳ್ಳುತ್ತಾ ಮೇಲಕ್ಕೆ ಬನ್ನಿರಿ, ಉಸಿರು ಬಿಡುತ್ತಾ ನಿಮ್ಮ ಅಕ್ಕಪಕ್ಕದ ಕೈಗಳನ್ನು ಕೆಳಗಿಳಿಸಿ. ಎಡ ಭಾಗದ ಯೋಗದ ಭಂಗಿಯನ್ನು ಪನರಾವರ್ತಿಸಿ ( ನಿಮ್ಮ ಎಡ ಪಾದವನ್ನು 90 ಡಿಗ್ರಿಗಳಿಗೆ ತಿರುಗಿಸಿ. ಹಾಗೂ ಬಲ ಪಾದವನ್ನು 15 ಡಿಗ್ರಿಗಳಿಗೆ ತಿರುಗಿಸಿ).
ಬಿಲ್ಲು ಭಂಗಿ (ಧನುರಾಸನ): ಈ ಆಸನ ಮಾಡಲು ಹೊಟ್ಟೆಯ ಮೇಲೆ ಮಲಗಿ. ನಂತರ ನಿಧಾನವಾಗಿ ದೇಹದ ಮೇಲಿನ ಭಾಗವನ್ನು ಮೇಲಕ್ಕೆತ್ತಿ ಮತ್ತು ಇದೇ ವೇಳೆ ಕಾಲುಗಳನ್ನು ಕೂಡ ಮೇಲಕ್ಕೆತ್ತಿ. ಈಗ ಕೈಗಳಿಂದ ಪಾದಗಳನ್ನು ಹಿಡಿದುಕೊಳ್ಳಿ ಮತ್ತು ಈ ಭಂಗಿಯಲ್ಲಿ ನಿಮಗೆ ಹಿತಕರವೆನಿಸುವಷ್ಟು ಸಮಯವಿರಿ.ಆಳವಾದ ಉಸಿರನ್ನು ತೆಗೆದುಕೊಳ್ಳಿ ಮತ್ತು 15-20 ಸೆಕೆಂಡುಗಳ ಕಾಲ ಭಂಗಿಯನ್ನು ಇರಿ. ನಂತರ ಉಸಿರನ್ನು ಬಿಡುತ್ತಾ ಸಹಜ ಸ್ಥಿತಿಗೆ ಬನ್ನಿ.
ಕುರ್ಚಿ ಭಂಗಿ (ಉತ್ಕಟಾಸನ): ಪಾದಗಳು ಒಂದಕ್ಕೊಂದು ತಾಗಿಕೊಂಡು ಇರುವಂತೆ ದೇಹದ ಎರಡು ಭಾಗಕ್ಕೆ ಕೈಗಳು ಅಂಟಿಕೊಂಡಿರುವಂತೆ ನೇರವಾಗಿ ನಿಂತುಕೊಳ್ಳಿ. ನಂತರ ಕೈಗಳನ್ನು ತಲೆಯ ಮೇಲೆ ಎತ್ತಿ ಮತ್ತು ಅಂಗೈಯು ಪರಸ್ಪರ ಒಂದಕ್ಕೊಂದು ಮುಖ ಮಾಡಿಕೊಂಡಿರಲಿ. ಹೀಗೆ ಮಾಡಿದ ಬಳಿಕ ಮೊಣಕಾಲುಗಳನ್ನು ನಿಧಾನವಾಗಿ ಬಗ್ಗಿಸಿ ಮತ್ತು ಸ್ಕ್ವಾಟ್ ಭಂಗಿಗೆ ಬನ್ನಿ. ತೊಡೆಯು ನೆಲಕ್ಕೆ ನೇರವಾಗಿ ಇರಲಿ. ಈ ರೀತಿ 10-15 ನಿಮಿಷ ಇರಿ.
ಸೇತುಬಂಧ ಸರ್ವಾಂಗಾಸನ: ನೆಲದ ಮೇಲೆ ಮಲಗಿ ಮತ್ತು ನಿಮ್ಮ ಪಾದಗಳನ್ನು ನೆಲದ ಮೇಲೆ ಇರಿಸಲು ಮೊಣಕಾಲುಗಳನ್ನು ಬಗ್ಗಿಸಿ ಮತ್ತು ಸೊಂಟ ಹಾಗೂ ಬೆನ್ನಿನ ಕೆಳಭಾಗವನ್ನು ಮೇಲಕ್ಕೆತ್ತಿ.ನಿಮ್ಮ ತೋಳುಗಳನ್ನು ನಿಮ್ಮ ದೇಹದ ಪಕ್ಕದಲ್ಲಿ ಇರಿಸಿ, ಅಂಗೈಗಳನ್ನು ಕೆಳಕ್ಕೆ ಮಾಡಿ. ನೀವು ನಿಧಾನವಾಗಿ ಬೆರಳುಗಳನ್ನು ಬಿಟ್ಟು ಮೊದಲ ಸ್ಥಾನಕ್ಕೆ ಬನ್ನಿ ಮತ್ತು ಆರಾಮ ಮಾಡಿ. ಹಾಗೆ ಮತ್ತೊಮ್ಮೆ ಮಾಡಿ.
ಭುಜಂಗಾಸನ: ನೆಲದ ಮೇಲೆ ನೇರವಾಗಿ ಮಲಗಿಕೊಳ್ಳಬೇಕು. ನಿಮ್ಮ ಕೈಗಳನ್ನು ಭುಜದ ಸಮವಾಗಿ ನೆಲದ ಮೇಲೆ ಇರಿಸಿ. ಉಸಿರನ್ನು ಒಳ ತೆಗೆದುಕೊಳ್ಳುತ್ತಾ ಕೈಗಳ ಆಧಾರದ ಮೇಲೆ ತಲೆ ಮತ್ತು ಭುಜದ ಸಹಾಯದಿಂದ ತಲೆಯನ್ನು ನಿಧಾನವಾಗಿ ಮೇಲಕ್ಕೆ ಎತ್ತಿ. ಈ ಸ್ಥಿತಿಯಲ್ಲಿ ಸಂಪೂರ್ಣವಾಗಿ ಎದೆಯ ಭಾಗವು ಮೇಲಕ್ಕಿರಬೇಕು. ಒಂದೆರಡು ಬಾರಿ ಉಸಿರಾಡಿದ ನಂತರ ನಿಧಾನವಾಗಿ ಮೊದಲಿನ ಸ್ಥಿತಿಗೆ ಬನ್ನಿ.