ಯಾದಗಿರಿ: ಜಿಲ್ಲಾ ಪಂಚಾಯತ್ನ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು ಮತ್ತು ಸದಸ್ಯರುಗಳ ನಡುವೆ ಮಾತಿನ ಜಟಾಪಟಿ ನಡೆದಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯತ್ನ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ, ಸದಸ್ಯರು ಕ್ಲಾಸ್ ತೆಗೆದುಕೊಂಡಿದ್ದಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜಶೇಖರ ಗೌಡ ಪಾಟೀಲ್ ವಜ್ಜಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಭೆಗೂ ಮುಂಚಿತವಾಗಿ ಸದಸ್ಯರುಗಳಿಗೆ ಪ್ರಗತಿ ವರದಿ ಪುಸ್ತಕ ನೀಡದ ಹಿನ್ನೆಲೆ ಉಪ ಕಾರ್ಯದರ್ಶಿ ಮುಕ್ಕಣ್ಣ ಕಾರಿಗಾರಗೆ ವಿರೋಧ ಪಕ್ಷದ ನಾಯಕ ಮರಿಲಿಂಗಪ್ಪ ಕರ್ನಾಳ ಕ್ಲಾಸ್ ತೆಗೆದುಕೊಂಡರು. ಕಾಮಗಾರಿಯೊಂದರ ಟೆಂಡರ್ ವಿಚಾರ ಸೇರಿದಂತೆ, ಸಭೆ, ಕಾಮಗಾರಿಗಳ ಕುರಿತು ಅಧಿಕಾರಿ ಮುಕ್ಕಣ್ಣ ಕಾರಿಗಾರ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಅಂತ ಆರೋಪಿಸಿ ಕೊಂಕಲ್ ಜಿಲ್ಲಾ ಪಂಚಾಯತ್ ಸದಸ್ಯ ಬಸರೆಡ್ಡಿ ಅನಪೂರ ಮತ್ತು ಇನ್ನೊಬ್ಬ ಸದಸ್ಯ ವಿನೋದ ಪಾಟೀಲ್ ಸೇರಿದಂತೆ ಹಲವು ಸದಸ್ಯರು ಹರಿಹಾಯ್ದರು.
ಈ ಸಂದರ್ಭದಲ್ಲಿ ಜಿ.ಪಂ. ಸಿಇಒ ಶಿಲ್ಪಾ ಶರ್ಮ ಸದಸ್ಯರನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಬಳಿಕ ಪರಿಸ್ಥಿತಿ ತಿಳಿಗೊಳಿಸಲು ಅಧ್ಯಕ್ಷ ರಾಜಶೇಖರಗೌಡ ವಜ್ಜಲ್ ಸಭೆ ಮುಂದೂಡಿದರು.