ಗುರುಮಠಕಲ್: ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಸರ್ಕಾರ ಸೂಚಿಸಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕಾಗಿ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಮನವಿ ಮಾಡಿದ್ದಾರೆ.
ಪುರಸಭೆಯ ಸಭಾಂಗಣದಲ್ಲಿ ನಡೆದ ಪಟ್ಟಣದ ಎಲ್ಲಾ ವ್ಯಾಪಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಆದೇಶದಂತೆ ಜಿಲ್ಲಾಡಳಿತದ ಸಹಯೋಗದಲ್ಲಿ ತಾಲೂಕಿನಾದ್ಯಂತ ಕೊರೊನಾ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಅಗತ್ಯ ಸೇವೆಗಳನ್ನು ಮಾತ್ರ ನೀಡಬೇಕು. ಜತೆಗೆ ಸರ್ಕಾರ ಅನುಮತಿಸದ ಅಂಗಡಿಗಳನ್ನು ಕಡ್ಡಾಯವಾಗಿ ಬಂದ್ ಮಾಡುವಂತೆ ತಿಳಿಸಿದರು. ತಾಲೂಕಿನಾದ್ಯಂತ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ಬಂದ್ ಮಾಡುವಂತೆ ತಿಳಿಸಲಾಗಿದ್ದು, ಮದುವೆ ಹಾಗೂ ಇತರೆ ಸಮಾರಂಭಗಳನ್ನು 50 ಜನರ ಉಪಸ್ಥಿತಿಯಲ್ಲಿ ಜರುಗಿಸುವಂತೆ ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ ಮಾತನಾಡಿ, ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಮತ್ತು ಅಂತರ ಕಾಪಾಡಿಕೊಳ್ಳಿ. ನಿಮ್ಮನ್ನು ನೀವು ಕಾಪಾಡಿಕೊಳ್ಳುವ ಜತೆಗೆ ನಿಮ್ಮ ನೆರೆಹೊರೆಯವರನ್ನೂ ರಕ್ಷಿಸಬೇಕು. ಇದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದ್ದು, ಎಲ್ಲರೂ ತಾಲೂಕು ಮತ್ತು ಪೌರಾಡಳಿತದ ಶ್ರಮದಲ್ಲಿ ಪಾಲ್ಗೊಳ್ಳುವಂತೆ ಕೋರಿದರು.
ಇದನ್ನೂ ಓದಿ: ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಬೆಡ್-ಆಕ್ಸಿಜನ್ ಇಲ್ಲ: ಕೊರೊನಾ ರೋಗಿಗಳ ಗೋಳು ಕೇಳೋರಿಲ್ಲ! ವಿಡಿಯೋ
ಪಿಎಸ್‌ಐ ಹಣಮಂತ ಬಂಕಲಗಿ ಮಾತನಾಡಿ, ತಾಲೂಕಿನಾದ್ಯಂತ 144 ಸೆಕ್ಷನ್ ಜಾರಿಯಲ್ಲದೆ. ಸಾರ್ವಜನಿಕರು ಸ್ವಯಂ ನಿಯಂತ್ರಣ ಮತ್ತು ಸಾಮಾಜಿಕ ಸ್ವಾಸ್ಥ್ಯ ಕಾಪಾಡಬೇಕಿದೆ. ಕಾನೂನನ್ನು ಉಲ್ಲಂಘಿಸಿದಲ್ಲಿ ಸೂಕ್ರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.