ಯಾದಗಿರಿ: ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿರುವ ಕಾರಣ ಕೃಷಿ ಕಾರ್ಮಿಕರ ಜೀವನ ಮಂಕಾಗಿದೆ.
ನಾವು ಒಪ್ಪತ್ತಿನ ಊಟಕ್ಕಾಗಿ ಪರದಾಡುವಂತಾಗಿದೆ. ಮಕ್ಕಳನ್ನು ಶಾಲೆಗೆ ಹೇಗೆ ಕಳಿಸಬೇಕು? ನಾವು ಮಕ್ಕಳನ್ನು ಹೇಗೆ ಸಾಕಬೇಕು? ಎಂದು ಸುರಪೂರ ತಾಲೂಕಿನ ನಗನೂರ ಗ್ರಾಮದ ಹನುಮಂತಿ ಎಂಬುವವರು ಕಣ್ಣೀರಿಡುತ್ತ ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ.
ನಾವು ದಿನಾಲೂ ಕೂಲಿ ಮಾಡಿ ಬದುಕಬೇಕು. ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದೇವೆ. 50 ರೂಪಾಯಿ ದುಡಿಯುವುದಕ್ಕೂ ಕೂಡ ಒಂದು ದಿನಪೂರ್ತಿ ಜಮೀನಿನಲ್ಲಿ ಕೆಲಸ ಮಾಡಬೇಕು ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ.
ನಾವು ಬದುಕಬೇಕಾದರೆ ಕೂಲಿ ಮಾಡಲೇಬೇಕು. ಮಕ್ಕಳನ್ನು ಶಾಲೆಗೆ ಕಳಿಸದೇ ಕೂಲಿ ಕೆಲಸಕ್ಕೆ ಕರೆದುಕೊಂಡು ಬರುತ್ತಿದ್ದೇವೆ. ನಮಗೆ ಮನೆಯಿಲ್ಲ, ಜಮೀನಿಲ್ಲ ಹೀಗಾಗಿ ಸರ್ಕಾರ ಸಾಲಮನ್ನಾ ಮಾಡಿದರೂ ನಮಗೆ ಉಪಯೋಗವಿಲ್ಲ. ಒಂದು ಎಕರೆ ಜಮೀನು, ಒಂದು ಮನೆ ಕೊಡಬೇಕು ಅಂದಾಗ ಮಾತ್ರ ನಮ್ಮಂತವರು ಬದುಕಲು ಸಾಧ್ಯ ಎಂದು ಸರ್ಕಾರಕ್ಕೆ ಹನುಮಂತಿ ಮನವಿ ಮಾಡಿದ್ದಾರೆ.