ಯಾದಗಿರಿ : ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ವಿರುದ್ಧ ವಿಶ್ವವೇ ಸಮರ ಸಾರಿದೆ. ಯಾದಗಿರಿ ಜಿಲ್ಲೆಯಲ್ಲಿ ಸರ್ಕಾರ ಸೌಲಭ್ಯಗಳನ್ನ ಬಳಸಿ ಹೇಗೆ ಕೋವಿಡ್ -19 ವಿರುದ್ಧ ಹೋರಾಟ ಮಾಡಲಾಗ್ತಿದೆ ಅನ್ನೋದರ ಕುರಿತಂತೆ ಈಟಿವಿ ಭಾರತ ರಿಯಾಲಿಟಿ ಚೆಕ್ ನಡೆಸಿದೆ.
ಕೊರೊನಾ ಮುಂಜಾಗ್ರತಾ ಕ್ರಮಕ್ಕಾಗಿ ಜಿಲ್ಲೆಗೆ ಈವರೆಗೆ ಸರ್ಕಾರದಿಂದ 12 ಸಾವಿರದ 9 ನೂರು ಲೀಟರ್‌ನಷ್ಟು ಸ್ಯಾನಿಟೈಸರ್ ಬಂದಿದೆ. ಅಲ್ಲದೆ 13 ಸಾವಿರದ 900 ಲೀಟರ್‌ನಷ್ಟು ಸೋಡಿಯಂ ಹೈಪೋಕ್ಲೋರೈಟ್ ಬಂದಿದೆ. ಇದರಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಶುದ್ದೀಕರಣ ಸೇರಿ ಸರ್ಕಾರಿ ಕಚೇರಿಗಳಿಗೆ ಈವರೆಗೆ 11 ಸಾವಿರದ 1 ನೂರು ಲೀಟರ್‌ನಷ್ಟು ಸ್ಯಾನಿಟೈಸರ್ ಬಳಸಲಾಗಿದ್ದು, 1 ಸಾವಿರದ 8 ನೂರು ಲೀಟರ್ ಸ್ಟಾಕ್ ಇದೆ.
ಜಿಲ್ಲೆಯ ಕೋವಿಡ್ ಆಸ್ಪತ್ರೆ ಹಾಗೂ ಮೂರು ಕೋವಿಡ್ ಸೆಂಟರ್, ಅಂಗನವಾಡಿ, ಯಾದಗಿರಿ, ಸುರಪುರ, ಶಹಪುರ ಈ ಮೂರು ನಗರಸಭೆ, ಜಿಲ್ಲಾಧಿಕಾರಿ ಕಚೇರಿ, ತಾಲೂಕಾ ಆರೋಗ್ಯ ಕಚೇರಿ, ಆರ್ಟಿಪಿಸಿಆರ್ ಲ್ಯಾಬ್ ಸೇರಿ ಹಲವೆಡೆ ಜಿಲ್ಲಾಸ್ಪತ್ರೆಯ ಸ್ಟೋರ್ ರೂಂನಲ್ಲಿದ್ದ ಒಟ್ಟು 19,900 ಲೀಟರ್ ಸೋಡಿಯಂ ಹೈಪೋಕ್ಲೋರೈಟ್‌ನಲ್ಲಿ ಈವರೆಗೆ ಈ ಮೇಲಿನ ಎಲ್ಲಾ ಕಚೇರಿ ಹಾಗೂ ಆಸ್ಪತ್ರೆಗಳಿಗೆ 13,900 ಲೀಟರ್‌ನಷ್ಟು ಸೋಡಿಯಂ ಕಳಿಸಲಾಗಿದೆ. ಮೇನ್ ಸ್ಟೋರ್ ರೂಮ್ನಲ್ಲಿ 6,000 ಲೀಟರ್‌ನಷ್ಟು ಸೋಡಿಯಂ ಹೈಪೋಕ್ಲೋರೈಟ್ ಸ್ಟಾಕ್ ಇದೆ.
ಜಿಲ್ಲೆಯಲ್ಲಿ ಸ್ಯಾನಿಟೈಸರ್ ಮತ್ತು ಸೋಡಿಯಂ ಹೈಪೋಕ್ಲೋರೈಟ್ ಸದ್ಬಳಕೆ ಸರಿಯಾಗಿ ಆಗಿಲ್ಲ. ಇದರ ದುರಪಯೋಗ ವಾಗಿದೆ ಅನ್ನೋ ಮಾತಿಗೆ ಪ್ರತಿಕ್ರಿಯೆ ನೀಡಿರುವ ಪ್ರಭಾರಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ ಅನ್ವರ್ ಅವರು, ನಾನು ಈಗಷ್ಟೇ ಅಧಿಕಾರ ಸ್ವೀಕಾರ ಮಾಡಿದ್ದೇನೆ. ಈ ಕುರಿತು ಪರಿಶೀಲಿಸಿ ಇದರ ಸದ್ಬಳಕೆಯಾಗುವಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರ ಯಾದಗಿರಿ ನಗರಸಭೆ ಕೂಡ ಜಿಲ್ಲೆಯ ಕೊರೊನಾ ಪೀಡಿತ ಪ್ರದೇಶಗಳಿಗೆ ಸೋಡಿಯಂ ಹೈಪ್ಲೋಕೋರೈಟ್ ಸಿಂಪಡಣೆ ಮಾಡಲಾಗಿದೆ. ಸಿಂಪಡಣೆಗೆ ಈವರೆಗೆ 200 ಲೀಟರ್‌ನಷ್ಟು ಸೋಡಿಯಂ ಹೈಪೋಕ್ಲೋರೈಟ್ ಬಳಕೆಯಾಗಿದ್ದು, 1 ನೂರು ಲೀಟರ್‌ನಷ್ಟು ಸೋಡಿಯಂ ಹೈಪೋಕ್ಲೋರೈಟ್ ಸ್ಟಾಕ್ ಇದೆ ಎಂದು ನಗರಸಭೆ ಪರಿಸರ ಅಭಿಯಂತಕರಾದ ಸಂಗಮೇಶ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ.
ಜಿಲ್ಲಾ ಕೇಂದ್ರಗಳಲ್ಲೂ ಕೂಡ ಕೊರೊನಾ ಪೀಡಿತ ಪ್ರದೇಶಗಳಿಗೆ ಈ ರಾಸಾಯನಿಕ ಸಿಂಪರಣೆ ಸರಿಯಾದ ರೀತಿ ಬಳಕೆ ಮಾಡಲಾಗಿಲ್ಲ, ಪ್ರಾರಂಭದಲ್ಲಿ ಅಗ್ನಿ ಶಾಮಕ ದಳ ಸೇರಿ ನಗರಸಭೆ ವಾಹನ ಹಾಗೂ ಮ್ಯಾನೂವಲ್ ಬ್ಯಾಟರಿ ಸ್ಪ್ರೆನಿಂದ ನಗರದ ಹಲವೆಡೆ ಸೋಡಿಯಂ ಹೈಪೋಕ್ಲೋರೈಟ್ ಸಿಂಪಡಣೆ ಮಾಡಲಾಗಿದ್ದು, ನಂತರದ ದಿನಗಳಲ್ಲಿ ಇದರ ಬಳಕೆ ಸರಿಯಾದ ರೀತಿ ಆಗಿಲ್ಲ ಅನ್ನೋ ಆರೋಪಗಳಿವೆ. ಅದಲ್ಲದೆ ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಈ ಕುರಿತು ಜಿಲ್ಲಾಡಳಿತಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ ಅಂತಾ ಸಂಗಮೇಶ ರೆಡ್ಡಿ ತಿಳಿಸಿದ್ದಾರೆ.
ಈವರೆಗೂ ಕೊರೊನಾದಿಂದ 51 ಜನ ಮೃತಪಟ್ಟಿದ್ದಾರೆ. ಈ ಎಲ್ಲಾ ಮೃತ ದೇಹಗಳ ಮೇಲೆ ಸೋಡಿಯಂ ಹೈಪೋಕ್ಲೋರೈಟ್ ಸಿಂಪಡಣೆ ಮಾಡಲಾಗಿದೆ. ಅದೂ ಕೂಡ ಸರಿಯಾದ ಪ್ರಮಾಣದಲ್ಲಿ ಸಿಂಪಡಣೆ ಆಗಿಲ್ಲ. ಒಂದು ಮೃತ ದೇಹಕ್ಕೆ ಕನಿಷ್ಠ 50 ಲೀಟರ್ ಸೋಡಿಯಂ ಹೈಪೋಕ್ಲೋರೈಟ್ ಸಿಂಪಡಿಸಬೇಕಾಗಿತ್ತು. ಆದರೆ, ಮೃತ ದೇಹಗಳಿಗೆ ಒಂದು ಲೀಟರ್ ಸೋಡಿಯಂ ಹೈಪೋಕ್ಲೋರೈಟ್ಗೆ ಐದು ಲೀಟರ್‌ನಷ್ಟು ನೀರು ಬೆರೆಸಿ ಒಂದೂವರೆ ಲೀಟರ್ನಿಂದ ಎರಡು ಲೀಟರ್‌ನಷ್ಟು ಸೋಡಿಯಂ ಹೈಪೋಕ್ಲೋರೈಟ್ ಬಳಸುವ ಮೂಲಕ ಹತ್ತು ಲೀಟರ್‌ನಷ್ಟು ರಾಸಾಯನಿಕ ಸಿಂಪಡಣೆ ಮಾಡಲಾಗಿದೆ. ವೈದ್ಯರೇ ಇದನ್ನ ಒಪ್ಪಿಕೊಂಡಿದ್ದಾರೆ.
ಪ್ರಾರಂಭದಲ್ಲಿ ಜಿಲ್ಲೆಯ ಕ್ವಾರಂಟೆನ್ ಕೇಂದ್ರಗಳಲ್ಲಿನ ಜನರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ಒದಗಿಸಿಲ್ಲ. ಕ್ವಾರಂಟೈನ್ ಕೇಂದ್ರಗಳು ಸೇರಿ ಕೊರೊನಾ ಪೀಡಿತ ಪ್ರದೇಶಗಳಲ್ಲಿ ಸೋಡಿಯಂ ಹೈಪ್ಲೋಕೋರೈಟ್ ಸಿಂಪಡಣೆ ಸರಿಯಾದ ರೀತಿ ಆಗಿಲ್ಲ ಅಂತಾ ಆರೋಪಗಳು ಈ ಹಿಂದೆ ಕೇಳಿ ಬಂದಿತ್ತು. ಈ ಕುರಿತು ಸರಿಯಾದ ರೀತಿಯಲ್ಲಿ ತನಿಖೆ ನಡೆಯಬೇಕು ಅಂತಾ ಸ್ಥಳಿಯರು ಆಗ್ರಹಿಸಿದ್ದಾರೆ.