ಯಾದಗಿರಿ: ಸಕಾಲಕ್ಕೆ ಚಿಕಿತ್ಸೆ ಸಿಗದೆ ಮಹಿಳೆಯೊಬ್ಬರು ಆ್ಯಂಬುಲೆನ್ಸ್ನಲ್ಲೇ ನರಳಾಡಿ ಮೃತಪಟ್ಟಿರುವ ಘಟನೆ ತಾಲೂಕಿನ ಮುದ್ನಾಳ ಗ್ರಾಮದ ಸಮೀಪದ ಕೋವಿಡ್ ಆಸ್ಪತ್ರೆ ಆವರಣದಲ್ಲಿ ನಡೆದಿದೆ.
ಶಹಾಪುರ ತಾಲೂಕಿನ ಸಗರ ಗ್ರಾಮದ ಮಹಿಳೆಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಚಿಕಿತ್ಸೆ ಪಡೆಯಲು ಮುದ್ನಾಳ ಸಮೀಪದ ಕೋವಿಡ್ ಆಸ್ಪತ್ರೆಗೆ ಕುಟುಂಬಸ್ಥರು ಕರೆತಂದಿದ್ದರು. ತೀವ್ರ ಉಸಿರಾಟದ ಸಮಸ್ಯೆ ಇದ್ದ ಹಿನ್ನೆಲೆ ಕುಟುಂಬಸ್ಥರು ಆಸ್ಪತ್ರೆಯಲ್ಲಿ ವೈದ್ಯರಿಗಾಗಿ ಹುಟುಕಾಡಿದರೂ, ವೈದ್ಯರು ಸಿಕ್ಕಿರಲಿಲ್ಲ. ವೈದ್ಯರಿಲ್ಲದ ಕಾರಣ ಸಿಬ್ಬಂದಿ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದಾರೆ. ಹೀಗಾಗಿ, ಆ್ಯಂಬುಲೆನ್ಸ್ನಲ್ಲೇ ಮಹಿಳೆ ಪ್ರಾಣ ಬಿಟ್ಟಿದ್ದಾರೆ.
ಈ ಕುರಿತು ಮೃತ ಮಹಿಳೆಯ ಸಂಬಂಧಿ ಅಬ್ದುಲ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದು, ನಾವು ಆಸ್ಪತ್ರೆಯಲ್ಲಿ ವೈದ್ಯರಿಗಾಗಿ ಹುಡುಕಿದರೂ ಯಾರೂ ಸಿಕ್ಕಿಲ್ಲ. ಯಾರೂ ಚಿಕಿತ್ಸೆ ನೀಡಲು ಮುಂದೆ ಬಂದಿಲ್ಲ. ಹೀಗಾಗಿ ಮಹಿಳೆ ಆ್ಯಂಬುಲೆನ್ಸ್ನಲ್ಲೇ ಮೃತಪಟ್ಟಿದ್ದಾರೆ. ಸಕಾಲಕ್ಕೆ ಚಿಕಿತ್ಸೆ ಸಿಕ್ಕಿದ್ರೆ ಬದುಕುಳಿಯುತ್ತಿದ್ದರು. ಆಸ್ಪತ್ರೆ ಸಿಬ್ಬಂದಿ ನಿಷ್ಕಾಳಜಿಯೇ ಸಾವಿಗೆ ಕಾರಣವೆಂದು ಆರೋಪಿಸಿದ್ದಾರೆ.
ಮೃತ ಮಹಿಳೆಯ ಸ್ಯಾಂಪಲ್ ಸಂಗ್ರಹ ಮಾಡಲಾಗಿದ್ದು, ಕೊರೊನಾ ಸೋಂಕಿನಿಂದ ಸಾವು ಸಂಭವಿಸಿದೆಯೋ ಎಂಬುದು ವರದಿ ಬಂದ ಬಳಿಕ ತಿಳಿದು ಬರಬೇಕಿದೆ.